ರಿಪ್ಪನ್‌ಪೇಟೆ ; ಕುಡಿಯುವ ನೀರು ಸೇರಿದಂತೆ ಇತರ ಮೂಲಭೂತ ಸೌಲಭ್ಯಗಳನ್ನು ನೀಡಬಾರದು ಎಂದು ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಂದಾಳದಿಂಬ ಪರಿಶಿಷ್ಟ ಜನಾಂಗದ ರಂಜಿತಾ ಕೋಂ ಚಂದ್ರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಂಜಿತಾ ಕೋಂ ಚಂದ್ರ ಮೋಚಿ ಜನಾಂಗಕ್ಕೆ ಸೇರಿದವರಾಗಿದ್ದು ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಳೂರು ಸ.ನಂ 67 ರಲ್ಲಿ ಕಳೆದ 20 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡುವ ಮೂಲಕ ಹೆಂಡತಿ, ಮಕ್ಕಳೊಂದಿಗೆ ಅಲ್ಪ-ಸ್ವಲ್ಪ ಬಗರ್ ಹುಕ್ಕುಂ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುವ ಈ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ಬೀದಿಗೆ ತಳ್ಳಿದ್ದಾರೆಂದು ಹೇಳಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಜಲಜೀವನ್ ಮಿಷನ್ ಮನೆಮನೆಗೆ ಕುಡಿಯುವ ನೀರು ಯೋಜನೆಯ ಕಾಮಗಾರಿ ಪೈಪ್‌ಲೈನ್ ಇವರ ಮನೆಯ ಮುಂಭಾಗ ಹಾದುಹೋಗಿದ್ದರೂ ಕೂಡಾ ಇವರ ಮನೆಯ ಅಕ್ಕಪಕ್ಕದವರಿಗೆ ಸಂಪರ್ಕ ಕಲ್ಪಿಸಿ ಈ ಕುಟುಂಬಕ್ಕೆ ಕುಡಿಯುವ ನೀರಿನ ಸಂಪರ್ಕ ನೀಡದೆ ಬಹಿಷ್ಕಾರ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಬಾಳೂರು ಗ್ರಾಮ ಪಂಚಾಯಿತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಮನೆಯ ಜಾಗದ ವಿಚಾರ ನ್ಯಾಯಾಲಯದಲ್ಲಿರುವ ಕಾರಣ ಈ ಕುಟುಂಬಕ್ಕೆ ಸರ್ಕಾರದ ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡಬಾರದೆಂದು ನಿರ್ಣಯ ಮಾಡಿರುತ್ತಾರೆಂದು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ಹಿಂಬರಹ ನೀಡಿರುತ್ತಾರೆಂದು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವ ಚಂದ್ರನ ಕುಟುಂಬ ಮಾಧ್ಯಮಗಳಿಗೆ ದಾಖಲೆಗಳನ್ನು ಪ್ರದರ್ಶಿಸಿ ತಮ್ಮ ನೋವನ್ನು ತೋಡಿಕೊಂಡರು.
ಹೊಸನಗರ ತಾಲ್ಲೂಕಿನಲ್ಲಿ ಇನ್ನೂ ಜೀವಂತವಾಗಿರುವ ದಲಿತ ವಿರೋಧಿ ಪ್ರಕರಣಕ್ಕೆ ಸಾಕ್ಷಿಯೆಂಬಂತೆ ಇಲ್ಲಿನ ಗ್ರಾಮ ಪಂಚಾಯಿತಿಯವರು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿರುವ ಬಹಿಷ್ಕಾರದ ಆದೇಶವೇ ಸಾಕ್ಷಿಯಾಗಿದೆ.
ಎರಡು ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ನಾವುಗಳು ಎಲ್ಲಿಗೆ ಹೋಗುವುದು ಈ ರೀತಿ ನಮಗೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವ ಕುಟುಂಬ ಬೇರೆ ದಾರಿಯಿಲ್ಲದೆ ವಿಷ ಕುಡಿದೋ ಇಲ್ಲವೇ ಕೆರೆ-ಬಾವಿಗೆ ಹಾರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳವ ಜಿಜ್ಞಾಸೆಯಲ್ಲಿ ಕಾಲ ಕಳೆಯಬೇಕಾದ ಅನಿರ್ವಾತೆ ಎದುರಾಗಿದೆ ಎಂದು ಚಂದ್ರ ತಮ್ಮ ಅಸಹಾಯಕತೆಯನ್ನು ಮಾಧ್ಯಮಗಳ ಮುಂದೆ ತೋಡಿಕೊಂಡರು.
ಇನ್ನಾದರೂ ಜಿಪಂ ಸಿಇಒ, ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಮೂಲಭೂತ ಸೌಲಭ್ಯಗಳನ್ನು ನೀಡದಂತೆ ನಿರಾಕರಿಸಿರುವ ಮೋಚಿ ಜನಾಂಗದ ರಂಜಿತಾ ಚಂದ್ರ ಕುಟುಂಬಕ್ಕೆ ನ್ಯಾಯ ಕೊಡಿಸುವರೆ ಕಾದು ನೋಡಬೇಕಾಗಿದೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.