ಹೊಸನಗರ

ಟೇಕ್ ಆಫ್ ಆಗದ ರಾಜ್ಯ ಕಾಂಗ್ರೆಸ್ ಸರ್ಕಾರ ; ಶಾಸಕ ಆರಗ ಜ್ಞಾನೇಂದ್ರ ವ್ಯಂಗ್ಯ

ಟೇಕ್ ಆಫ್ ಆಗದ ರಾಜ್ಯ ಕಾಂಗ್ರೆಸ್ ಸರ್ಕಾರ ; ಶಾಸಕ ಆರಗ ಜ್ಞಾನೇಂದ್ರ ವ್ಯಂಗ್ಯ – InShot 20260803 183610117

ಹೊಸನಗರ ; ಒಂದೇ ಪಕ್ಷ ಯಾರದೇ ಬೆಂಬಲ ಇಲ್ಲದೆ ಸರ್ಕಾರ ನಡೆಸಲಿ ಎಂದು ರಾಜ್ಯ ಜನರು 139 ಶಾಸಕರನ್ನು ಆಯ್ಕೆ ಮಾಡಿದರು. ಇದರ ಫಲವಾಗಿ ರಚನೆಯಾದ ಕಾಂಗ್ರೆಸ್ ಸರ್ಕಾರ ಮೂರೂ ಕಾಲು ವರ್ಷ ಪೂರೈಸಿದರೂ ಈವರೆಗೂ ಟೇಕ್ ಆಫ್ ಆಗದಿರುವುದು ದುರಂತ ಎಂದು ಶಾಸಕ ಆರಗ ಜ್ಞಾನೇಂದ್ರ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿ, ಈ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಎರಡನೇ ಬಾರಿ ಮಂತ್ರಿ ಮಂಡಲ ರಚನೆ ಆಗುತ್ತಿದೆ. ಮೂರು ಬಾರಿ ಬಜೆಟ್ ಮಂಡನೆಯಾಯಿತು. ಆದರೆ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ನಿಷ್ಕ್ರೀಯವಾಗಿವೆ. ಅಂಗವಿಕಲ ವೇತನ, ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಮಾಸಾಶನಗಳು ಕಳೆದ 6 ತಿಂಗಳಿನಿಂದ ಬಿಡುಗಡೆಯಾಗಿಲ್ಲ. 7 ತಿಂಗಳ ಈಚೆಗೆ ಪರಿಶಿಷ್ಠ ಪಂಗಡದ ಪಡಿತರ ಕಿಟ್ ವಿತರಣೆ ಆಗಿಲ್ಲ. ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ, ಪಠ್ಯಪುಸ್ತಕ ಈವರೆಗೆ ಸಿಕ್ಕಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಅನುದಾನವಿಲ್ಲ. ಕೈಗೊಂಡ ಕಾಮಗಾರಿಗಳಿಗೂ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುವಲ್ಲಿ ಸರ್ಕಾರ ವಿಫಲಗೊಂಡಿದೆ ಎಂದು ಟೀಕಿಸಿದರು.

ಮಳೆಮಾಪಕಗಳು ಹಾಳಾಗಿರುವ ಕುರಿತು ಶಾಸನ ಸಭೆಯಲ್ಲಿ ಪ್ರಸ್ತಾಪ ಮಾಡಿದರೂ ಉಪಯೋಗವಾಗಿಲ್ಲ. ರಾಜ್ಯದ ಹಲವು ಕಡೆಗಳಲ್ಲಿ ಬರದ ಛಾಯೆಯಿದೆ. ಮಲೆನಾಡು ಪ್ರದೇಶದಲ್ಲಿ ಅತಿವೃಷ್ಠಿಯಿಂದ ಹಾನಿಯಾಗಿದೆ. ಜನರ ಸಂಕಷ್ಟಕ್ಕೆ ನೆರವಾಗಬೇಕಾಗಿದ್ದ ಅಧಿಕಾರಿಗಳು ಕಚೇರಿ ಬಿಟ್ಟು ಕದಲುತ್ತಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ರೈತರ ಸಂಕಷ್ಟವನ್ನು ಆಲಿಸುವವರು ಇಲ್ಲದಂತಾಗಿದೆ ಎಂದು ಆರೋಪಿಸಿದರು.

ನೀಟ್ ಪರೀಕ್ಷೆ ಕುರಿತು ಹೋರಾಟ ನಡೆಸಲು ಮುಂದಾಗುವ ಕಾಂಗ್ರೆಸ್ ನಾಯಕರಿಗೆ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೆಪಿಎಸ್‌ಸಿ ಪೊಲೀಸ್ ನೇಮಕಾತಿ ಪರೀಕ್ಷೆ ಹಾಗೂ ಪಶುವೈದ್ಯಕೀಯ ನೇಮಕಾತಿ ಪ್ರಕ್ರಿಯೆಗಳಲ್ಲಿ ನಡೆದ ಹಗರಣಗಳು ಕಣ್ಣಿಗೆ ಕಾಣುತ್ತಿಲ್ಲ. ಇದೀಗ ಎರಡನೇ ಬಾರಿ ಮಂತ್ರಿ ಮಂಡಲ ಪುನರ್‌ರಚನೆ ಆಗುತ್ತಿದೆ. ಆದರೆ ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸುವ ಆಶಾಭಾವ ಕಂಡುಬರುತ್ತಿಲ್ಲ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷ ಸತೀಶ, ಪ್ರಮುಖರಾದ ಗಣಪತಿ ಬೆಳಗೋಡು, ಹಾಲಗದ್ದೆ ಉಮೇಶ, ಶ್ರೀಪತಿರಾವ್, ಎ.ವಿ. ಮಲ್ಲಿಕಾರ್ಜುನ್, ಬಿ. ಯುವರಾಜ್, ಎನ್.ಆರ್. ದೇವಾನಂದ, ಮಂಡಾನಿ ಮೋಹನ, ರಾಜೇಶ್ ಹಿರಿಮನೆ, ನಾಗಾರ್ಜುನಸ್ವಾಮಿ, ನಗರ ನಿತಿನ್, ಚಾಲುಕ್ಯ ಬಸವರಾಜ್ ವಿ.ಸತ್ಯನಾರಾಯಣ, ಶಾಸಕರ ಆಪ್ತ ಕಾರ್ಯದರ್ಶಿ ಬಸವರಾಜ್ ಮತ್ತಿತರರು ಇದ್ದರು.

ವಿದ್ಯುತ್ ಸಮಸ್ಯೆ ನಿರಂತರ :
“ಹೊಸನಗರ ತಾಲೂಕು ರಾಜ್ಯಕ್ಕೆ ವಿದ್ಯುತ್ ನೀಡಲು ಅಪಾರ ಕೊಡುಗೆ ನೀಡಿದೆ. ಜನರು ತಮ್ಮ ಬದುಕು ಕಳೆದುಕೊಂಡಿದ್ದಾರೆ. ಆದರೆ ತಾಲೂಕಿನಲ್ಲಿ ಇಂದಿಗೂ ವಿದ್ಯುತ್ ವ್ಯತ್ಯಯಕ್ಕೆ ಸೂಕ್ತ ಪರಿಹಾರ ಆಗದಿರುವುದು ವಿಪರ‍್ಯಾಸ.”
– ಆರಗ ಜ್ಞಾನೇಂದ್ರ, ಶಾಸಕ

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]