ಹೊಸನಗರ ; ಇಡಿ ತಾಲ್ಲೂಕು ವಿದ್ಯುತ್ ಸರಬರಾಜು ವಂಚಿತ ಪ್ರದೇಶವಾಗಿದೆ. ಬಿಎಎಸ್‌ಎನ್‌ಎಲ್ ನೆಟ್‌ವರ್ಕ್ ಇಲ್ಲದೇ ಮೊಬೈಲ್ ಸಂಪರ್ಕ ಸ್ಥಗಿತವಾಗಿದೆ. ಇದರ ಜೊತೆಗೆ ಸಾಕಷ್ಟು ವರ್ಷಗಳಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನರು ನಲ್ಲಿಯ ನೀರಿಲ್ಲದೇ ಪರದಾಟ ನಡೆಸುತ್ತಿದ್ದರೂ ಇಲ್ಲಿನ ಪಟ್ಟಣ ಪಂಚಾಯತಿಯ ಆಡಳಿತ ವರ್ಗ ಕಣ್ಮುಚ್ಚಿಕೊಂಡು ತಮಗೇನೂ ಗೊತ್ತಿಲ್ಲದ ರೀತಿಯಲ್ಲಿ ಇದ್ದಾರೆ.
ಸಾರ್ವಜನಿಕರಿಗೆ ಕುಡಿಯುವ ನೀರಿಲ್ಲದೇ 4 ದಿನ ಕಳೆದರೂ ಪಟ್ಟಣ ಪಂಚಾಯಿತಿ ಕುಂಟು ನೆಪ ಹೇಳಿಕೊಂಡು ಜಾರಿಕೊಳ್ಳುತ್ತಿದೆ. ಮಾರಿಗುಡ್ಡದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಆಡಳಿತ ಮಂಡಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ನೀರಿನ ಪಂಪ್‌ಗಾಗಿ ಲಕ್ಷಗಟ್ಟಲೆ ಬಿಲ್ ಡ್ರಾ ಮಾಡುವುದು ಯಾಕೆ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.
ಪಟ್ಟಣ ಪಂಚಾಯಿತಿ ಮೂರು ವರ್ಷಗಳಿಂದ ವರ್ಷಕ್ಕೆ 1800 ರೂಪಾಯಿ ನೀರಿನ ಬಿಲ್ ಕಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಎರಡು ದಿನಕ್ಕೆ ಮೂರು ದಿನಕ್ಕೆ ಅರ್ಧಗಂಟೆ, ಮೂಕ್ಕಾಲು ಗಂಟೆ ನೀರು ಬಿಡುತ್ತಿದ್ದಾರೆ. ಅದರ ಜೊತೆಗೆ ಬೇಸಿಗೆ ಕಾಲದಲ್ಲಿ ಹೊಳೆಯಲ್ಲಿ ಪಂಪ್ ಸುಟ್ಟು ಹೋಗಿದೆ ಮಳೆಗಾಲದಲ್ಲಿ ಪಂಪ್‌ನಲ್ಲಿ ಕೇಸರು ಸಿಕ್ಕಿದೆ ಎಂಬ ನೆಪದೊಂದಿಗೆ ಅಧಿಕಾರಿಗಳು ನುಣುಚಿಕೊಂಡು ತಿಂಗಳಲ್ಲಿ ಎರಡು-ಮೂರು ಬಾರಿ ನೀರಿನ ಸರಬರಾಜು ನಿಲ್ಲಿಸುತ್ತಾರೆ. ಇಲ್ಲವಾದರೆ ಹೊಳೆಯಲ್ಲಿ ನೀರಿಲ್ಲ ಎಂಬ ಹಾರಿಕೆ ಉತ್ತರ ಅಧಿಕಾರಿಗಳ ಬಾಯಿಯಲ್ಲಿ ತಕ್ಷಣ ಬರುತ್ತದೆ. ಹೀಗೆ ಮುಂದುವರೆದರೆ ಪಟ್ಟಣದ ನಿವಾಸಿಗಳು ಪಟ್ಟಣ ಪಂಚಾಯತಿಯ ಎದುರು ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡುವ ಕಾಲ ದೂರವಿಲ್ಲ.
ಶಾಸಕರೇ ಸ್ಪಂದಿಸಿ :
ಹೊಸನಗರ, ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಹಿಂದಿನ ವರ್ಷ ಹೊಸನಗರ ತಾಲ್ಲೂಕಿನಲ್ಲಿ ಬರಗಾಲ ಬಂದಿದೆ ಈ ವರ್ಷ ಹಂಡೆ ಸ್ನಾನ ಮಾಡುವುದನ್ನು ಬಿಟ್ಟು ಚೊಂಚು ಸ್ನಾನ ಮಾಡಿ ಮುಂದಿನ ವರ್ಷ ಹಂಡೆ ಸ್ನಾನ ಮಾಡಬಹುದು ಎಂದು ಸಾರ್ವಜನಿಕರನ್ನು ಕೇಳಿಕೊಂಡರು ಅದರಂತೆ ಹಂಡೆ ಸ್ನಾನ ಬಿಟ್ಟು ಚೊಂಚು ಸ್ನಾನ ಮಾಡಿದರು ಬರಗಾಲ ಹೋಗಿ ಮಲೆನಾಡಿನಲ್ಲಿ ಉತ್ತಮ ರೀತಿಯಲ್ಲಿ ಮಳೆಯಾಗಿದೆ. ಆದರೆ ಪಟ್ಟಣ ಪಂಚಾಯತಿಯವರು ನಾನಾ ಕಾರಣಗಳಿಂದ ಜನರು ನೀರಿಗಾಗಿ ಹಪಾಪಿಸುತ್ತಿದ್ದಾರೆ. ಶಾಸಕರೇ ಜನರು ನಿಮ್ಮ ವಿರುದ್ಧ ದಂಗೆ ಏಳುವುದರ ಒಳಗೆ ನೀರಿನ ಸಮಸ್ಯೆ ಬಗೆ ಹರಿಸಿದರೇ ಒಳ್ಳೆಯದು ಇಲ್ಲವಾದರೆ ನಿಮ್ಮ ವಿರುದ್ಧವೂ ದಂಗೆ ಏಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.