ತೀರ್ಥಹಳ್ಳಿ : ಶಾಲಾ-ಕಾಲೇಜುಗಳಿಗೆ ತೆರಳಲು ಸೂಕ್ತ ಸಮಯಕ್ಕೆ ಬಸ್ ಸೌಕರ್ಯವಿಲ್ಲದೆ ಬೇಸತ್ತ ವಿದ್ಯಾರ್ಥಿಗಳು ತೀರ್ಥಹಳ್ಳಿ ತಾಲೂಕಿನ ಕೊಂಡ್ಲೂರು ಬಳಿ ದಿಢೀರ್ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಸಮಸ್ಯೆ ಏನು?
ತೀರ್ಥಹಳ್ಳಿಯ ವಿವಿಧ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರತಿದಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಯಾಣ ಬೆಳೆಸುತ್ತಾರೆ. ಈ ಹಿಂದೆ ಇದ್ದ ಖಾಸಗಿ ಬಸ್‌ಗಳ ಸೇವೆ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಪ್ರಸ್ತುತ ಸರ್ಕಾರಿ ಬಸ್ ಕೂಡ ತಡವಾಗಿ ಸಂಚರಿಸುತ್ತಿದ್ದು, ತೀರ್ಥಹಳ್ಳಿ ತಲುಪುವಾಗ ಬೆಳಿಗ್ಗೆ 10:30 ಆಗುತ್ತಿದೆ. ಇದರಿಂದಾಗಿ ಪ್ರತಿನಿತ್ಯ ವಿದ್ಯಾರ್ಥಿಗಳು ತಮ್ಮ ಮೊದಲ ಅವಧಿಯ ತರಗತಿಗಳನ್ನು ತಪ್ಪಿಸಿಕೊಳ್ಳುವಂತಾಗಿದೆ.
ವೇಳಾಪಟ್ಟಿ ಬದಲಾವಣೆ:
ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೆಳಿಗ್ಗೆ 8:30ಕ್ಕೆ ಬಸ್ ಹೊರಟು, 9:30ರ ಸುಮಾರಿಗೆ ತೀರ್ಥಹಳ್ಳಿ ತಲುಪುವಂತೆ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಬದಲಾಯಿಸಬೇಕು.
ಹೆಚ್ಚುವರಿ ಬಸ್:
ಪ್ರಯಾಣಿಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ದಟ್ಟಣೆ ತಪ್ಪಿಸಲು ಇದೇ ಮಾರ್ಗದಲ್ಲಿ ಮತ್ತೊಂದು ಹೆಚ್ಚುವರಿ ಬಸ್ ಬಿಡಬೇಕು.
ಎಚ್ಚರಿಕೆ:
ವಿದ್ಯಾರ್ಥಿಗಳು ನಡೆಸಿದ ಈ ದಿಢೀರ್ ಪ್ರತಿಭಟನೆಗೆ ಶಿಕ್ಷಕರು ಮತ್ತು ಪೋಷಕರು ಕೂಡ ಬೆಂಬಲ ಸೂಚಿಸಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಬಸ್ ಸಮಸ್ಯೆಯನ್ನು ಬಗೆಹರಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

