ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು ಮತ್ತು ಮಂಜುನಾಥ ಭಂಡಾರಿ ಅವರ ವಿರುದ್ಧ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮತ್ತೊಮ್ಮೆ ಹೂಡಿದ್ದಾರೆ.
ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯಗಳು ತಮ್ಮ ಬಳಿಯಿದ್ದು, ಅವುಗಳನ್ನು ಶೀಘ್ರದಲ್ಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಹಾಗೂ ಎಐಸಿಸಿ ವರಿಷ್ಠರಿಗೆ ತಲುಪಿಸುವುದಾಗಿ ತಿಳಿಸಿದರು. ಜಿಲ್ಲೆಯ ಪಕ್ಷದ ವಿದ್ಯಮಾನಗಳ ಬಗ್ಗೆ ಶೀಘ್ರವೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಗ್ರ ಮಾಹಿತಿ ನೀಡಲಾಗುವುದು ಎಂದರು.
ಹಿರಿಯ ನಾಯಕರ ಕುರಿತ ಹೇಳಿಕೆಗೆ ವಿಷಾದ:
ತೀರ್ಥಹಳ್ಳಿಯ ಹಿರಿಯ ನಾಯಕ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಬಗ್ಗೆ ಈ ಹಿಂದೆ ತಾಗಿದ್ದ ಅನುಚಿತ ಪದ ಬಳಕೆಗೆ ವಿಷಾದ ವ್ಯಕ್ತಪಡಿಸಿದ ಸುಂದರೇಶ್, “ಅವರು ಪಕ್ಷದ ಹಿರಿಯರು, ಅವರ ಬಗ್ಗೆ ಗೌರವವಿದೆ” ಎಂದರು. ಆರ್.ಎಂ. ಮಂಜುನಾಥ ಗೌಡರ ಕುರಿತು ಮಾತನಾಡಿದ್ದಕ್ಕೂ ಕ್ಷಮೆ ಕೋರಿದ ಅವರು, ಸಚಿವ ಮಧು ಬಂಗಾರಪ್ಪ ಅವರನ್ನು ಏಕವಚನದಲ್ಲಿ ನಿಂದಿಸಿದ್ದಕ್ಕೆ ಮಾತ್ರವೇ ವಿಷಾದ ವ್ಯಕ್ತಪಡಿಸುವುದಾಗಿ ಸ್ಪಷ್ಟಪಡಿಸಿದರು.
ಆದರೆ, ಮಧು ಬಂಗಾರಪ್ಪ ಅವರ ವಿರುದ್ಧ ಮಾಡಿದ ಮಿಕ್ಕ ಎಲ್ಲಾ ಆರೋಪಗಳಿಗೆ ಬದ್ಧವಾಗಿರುವುದಾಗಿ ಪುನರುಚ್ಚರಿಸಿದ ಅವರು, “ಇವರನ್ನು ರಾಮನಗರಕ್ಕೋ ಅಥವಾ ಬೇರೆಲ್ಲಿಗಾದರೂ ವರ್ಗಾಯಿಸಲಿ, ಶಿವಮೊಗ್ಗಕ್ಕೆ ಮಾತ್ರ ಬೇಡ” ಎಂದು ವಾಗ್ದಾಳಿ ನಡೆಸಿದರು. ಇದರೊಂದಿಗೆ ಬಿ.ವಿ. ಶ್ರೀನಿವಾಸ್, ಕಲಗೋಡು ರತ್ನಾಕರ್, ಚೇತನ್, ಹೆಚ್.ಸಿ. ಯೋಗೀಶ್, ಎಸ್.ಪಿ. ದಿನೇಶ್, ಮಾಲತೇಶ್ ಮುಂತಾದ ನಾಯಕರ ಕುರಿತು ಆಡಿದ ಮಾತುಗಳಿಗೆ ಈಗಲೂ ಬದ್ಧನಾಗಿದ್ದೇನೆ ಎಂದರು.
ಸಚಿವ ಸ್ಥಾನ ಹಾಗೂ ಹುದ್ದೆ ಬದಲಾವಣೆಗೆ ಆಗ್ರಹ:
ಬೇಳೂರು ಗೋಪಾಲಕೃಷ್ಣ ಮತ್ತು ಬಿ.ಕೆ. ಸಂಗಮೇಶ್ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ ಅವರು, ಬಿ.ಕೆ. ಹರಿಪ್ರಸಾದ್, ದಿನೇಶ್ ಗುಂಡೂರಾವ್, ಸಲೀಂ ಅಹಮ್ಮದ್ ಹಾಗೂ ಜಮೀರ್ ಅಹಮ್ಮದ್ ಅವರಂತಹ ಪ್ರಭಾವಿ ನಾಯಕರಿಗೆ ಸಚಿವ ಸ್ಥಾನ ಅಥವಾ ಕೆಪಿಸಿಸಿ ಜವಾಬ್ದಾರಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು. ಇದೇ ವೇಳೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಭೂಪಾಲ್ ಅವರನ್ನು ತಕ್ಷಣವೇ ಹುದ್ದೆಯಿಂದ ಬದಲಾಯಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿತ – ಪ್ರಿಯಾಂಕ್ ಖರ್ಗೆ ಭೇಟಿಗೆ ನಿರ್ಧಾರ:
ಜಿಲ್ಲೆಯಲ್ಲಿ ಗಾಂಜಾ ಹಾವಳಿ, ಕೊಲೆ ಹಾಗೂ ಕಳ್ಳತನದಂತಹ ಅಕ್ರಮ ಚಟುವಟಿಕೆಗಳು ಮಿತಿಮೀರುತ್ತಿದ್ದು, ಇವುಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಶಿವಮೊಗ್ಗಕ್ಕೆ ಆಗಮಿಸುವಂತೆ ಕೋರಲಾಗುವುದು ಎಂದು ತಿಳಿಸಿದರು.
ಸೋಮವಾರ ತೀರ್ಥಹಳ್ಳಿಗೆ ಭೇಟಿ:
ಕಿಮ್ಮನೆ ರತ್ನಾಕರ್ ಅವರ ಕುರಿತು ನೀಡಿದ್ದ ಹೇಳಿಕೆಗೆ ಆಕ್ರೋಶಗೊಂಡಿದ್ದ ಅವರ ಬೆಂಬಲಿಗರು ತೀರ್ಥಹಳ್ಳಿಗೆ ಬಂದರೆ ನೋಡಿಕೊಳ್ಳುವುದಾಗಿ ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿರುವ ಸುಂದರೇಶ್, ಮುಂಬರುವ ಸೋಮವಾರದಂದು ತೀರ್ಥಹಳ್ಳಿಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದರು.

