ಹೊಸನಗರ ; ತಾಲ್ಲೂಕಿನಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳು ಸಾಕಷ್ಟು ಇರುವ ಬಗ್ಗೆ ಅನೇಕ ದೂರುಗಳು ಬಂದಿದ್ದು ಅನರ್ಹ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ದಾರರು ತಾವೇ ಹೊಸನಗರದ ಆಹಾರ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಸರೆಂಡರ್ ಮಾಡಿದರೆ ಒಳ್ಳೆಯದು ಇಲ್ಲವಾದರೆ ಸರ್ಕಾರದ ಸುತ್ತೋಲೆಯ ಆಧಾರದಲ್ಲಿ ಕಾರ್ಡ್‌ಗಳನ್ನು ಅನರ್ಹಗೊಳಿಸುವ ಜೊತೆಗೆ ದಂಡ ಹಾಗೂ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಅನರ್ಹ ಅಂತ್ಯೋದಯ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಪಡಿತರ ಚೀಟಿದಾರರು ಸರ್ಕಾರದ ನಿಯಮಾವಳಿಗಳನ್ನು ಮೀರಿ ಒಂದೇ ಮನೆಯಲ್ಲಿ ವಾಸವಿರುವವರು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿದ್ದಲ್ಲಿ ಅಂತಹ ಪಡಿತರ ಚೀಟಿದಾರರು ಆಹಾರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಪಡಿತರ ಚೀಟಿದಾರರಲ್ಲಿ ಕೆಲವರು ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಒದಗಿಸುವ ಅಕ್ಕಿಯನ್ನು ಹಣದ ಆಸೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ತಾಲ್ಲೂಕು ಆಡಳಿತಾಧಿಕಾರಿಗಳ ಗಮನಕ್ಕೆ ಬಂದಿದ್ದು ಅಕ್ಕಿಯನ್ನು ಸ್ವಂತಕ್ಕೆ ಉಪಯೋಗಿಸದೇ ಮಾರಾಟ ಮಾಡುವುದು ಅಪರಾಧವಾಗಿದ್ದು ಈ ಬಗ್ಗೆ ಮಾಹಿತಿ ಬಂದಲ್ಲಿ ಅಂತಹ ಕುಟುಂಬಕ್ಕೆ ಪಡಿತರ ವ್ಯವಸ್ಥೆಯಡಿ ಪಡಿತರ ಅಗತ್ಯವಿಲ್ಲವೆಂದು ತಿಳಿದು ರದ್ದು ಪಡಿಸಲು ಕ್ರಮವಹಿಸಲಾಗುವುದು ಎಂದರು.
ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಿಂತಲ್ಲೂ ಹೆಚ್ಚು ಇರುವ ಕುಟುಂಬಗಳು ಜೀವನೋಪಾಯಕ್ಕಾಗಿ ಸ್ವಂತ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನವನ್ನು ಹೊಂದಿರುವ ಕುಟುಂಬಗಳು ಸರ್ಕಾರಿ ನೌಕರರು ಮತ್ತು ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸೇವಾ ನೌಕರರು ಮಂಡಳಿಗಳು ನಿಗಮಗಳಲ್ಲಿ ಕೆಲಸ ಮಾಡುತ್ತಿರುವವರು ಆದಾಯ ತೆರಿಗೆ ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುತ್ತಿರುವ ಎಲ್ಲ ಕುಟುಂಬಗಳು ಆದ್ಯತಾ ಪಡಿತರ ಚೀಟಿ ಹೊಂದಲು ಅನರ್ಹರಾಗಿರುತ್ತಾರೆ ಎಂದು ತಿಳಿಸಿದರು.
ತಕ್ಷಣ ಅನರ್ಹವಾಗಿ ಪಡಿತರ ಚೀಟಿ ಹೊಂದಿರುವ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್‌ದಾರರ ಕುಟುಂಬಗಳು ಆಹಾರ ಇಲಾಖೆಗೆ ತಿಳಿಸದಿದ್ದರೇ ಮುಂದಿನ ದಿನದಲ್ಲಿ ಭಾರೀ ದಂಡ ಹಾಗೂ ಶಿಕ್ಷೆ ಅನುಭವಿಸಬೇಕಾಗಿದ್ದು ಆದ್ದರಿಂದ ತಾವೇ ಮುಂದೆ ಬಂದು ಕಾರ್ಡ್‌ಗಳನ್ನು ಅನರ್ಹಗಳಿಸಿಕೊಂಡರೆ ಒಳ್ಳೆದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳಾದ ಬಾಲಚಂದ್ರ ಹಾಗೂ ನಾಗರಾಜ್, ಗ್ರೇಡ್ 2ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ, ಶಿರಾಸ್ಥೆದಾರ್ ಕಟ್ಟೆ ಮಂಜುನಾಥ್, ಚಿರಾಗ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.