ತರೀಕೆರೆ: ಬೈಕ್‌ನಲ್ಲಿ ಸಹ ಸವಾರರಾಗಿ ಸಂಚರಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಸೀರೆ ಜೊತೆ ಕಾಲು ಕೂಡಾ ಬೈಕಿನ ಚಕ್ರಕ್ಕೆ ಸಿಲುಕಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಕಾಲನ್ನು ಚಕ್ರದೆಡೆಯಿಂದ ಬಿಡಿಸಲಾಗದ ಮಹಿಳೆ ಗಂಟೆಗಳ ಕಾಲ ನೋವಿನಿಂದ ನರಳಾಡಿದರು.
ಇಟ್ಟಿಗೆ ಗ್ರಾಮದ ಯಶೋಧ ಬಾಯಿ ಈ ರೀತಿ ಸಂಕಷ್ಟಕ್ಕೊಳಗಾದ ಮಹಿಳೆ. ಇವರು ಬೈಕಿನಲ್ಲಿ ಸಹ ಸವಾರೆಯಾಗಿ ಸಂಚರಿಸುತ್ತಿದ್ದ ವೇಳೆ ಉಟ್ಟಿದ್ದ ಸೀರೆ ಅವರಿಗೆ ಅರಿವಿಲ್ಲದೆಯೇ ಬೈಕ್ ಚಕ್ರಕ್ಕೆ ಸಿಲುಕಿದೆ. ಸೀರೆಯನ್ನು ಬೈಕ್ ಸೆಳೆದ ರಭಸಕ್ಕೆ ಯಶೋಧ ಅವರ ಕಾಲು ಕೂಡಾ ಚಕ್ರದೆಡೆಗೆ ಸಿಲುಕಿಕೊಂಡಿತ್ತು. ಈ ವೇಳೆ ಬೈಕ್ ರಸ್ತೆಯಲ್ಲೇ ಉರುಳಿಬಿದ್ದಿದೆ.
ಆದರೆ ಮಹಿಳೆಯ ಕಾಲನ್ನು ಸುಲಭದಲ್ಲಿ ಚಕ್ರದೆಡೆಯಿಂದ ಹೊರ ತೆಗೆಯಲು ಆಗಿಲಿಲ್ಲ. ಇದರಿಂದ ಕೆಲ ತಾಸು ಮಹಿಳೆ ನೋವಿನಿಂದ ನರಳಾಡುವಂತಾಗಿತ್ತು. ಬಳಿಕ ಮ್ಯೆಕಾನಿಕ್ ಅನ್ನು ಕರೆಸಿ ಬೈಕಿನ ಚೈನ್ ಅನ್ನು ತುಂಡರಿಸಿ ಮಹಿಳೆಯನ್ನು ರಕ್ಷಿಸಲಾಯಿತು. ಕಾಲಿಗೆ ತೀವ್ರ ತರಹದ ಗಾಯಗಳಾಗಿವೆ.