ರಿಪ್ಪನ್‌ಪೇಟೆ ; ಅತಿಶಯ ಶ್ರೀಕ್ಷೇತ್ರ ಹೊಂಬುಜದ ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ದಶಧರ್ಮಗಳ ಆಚರಣೆಯ ಮರ್ಮವನ್ನರಿಯುವ ಪರ್ಯೂಷಣ ಪರ್ವವು ಹನ್ನೊಂದನೇಯ ದಿನದಂದು ಸಂಪನ್ನಗೊಂಡಿತು.

ಶ್ರೀ ಜೈನಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ನೇತೃತ್ವ, ದಿವ್ಯ ಮಾರ್ಗದರ್ಶನ, ಸಾನಿಧ್ಯದಲ್ಲಿ ಭಕ್ತವೃಂದದವರು ಶ್ರದ್ಧಾ ಭಕ್ತಿಯಿಂದ ಆಗಮೋಕ್ತ ವಿಧಿ-ವಿಧಾನದಲ್ಲಿ ಸಾಂಗವಾಗಿ ಪೂಜಾದಿ ಧಾರ್ಮಿಕ ವಿಧಾನಗಳು ನೆರವೇರಿತು. ಪರಂಪರೆಯ ಅನಂತನೋಂಪಿಯನ್ನು ವ್ರತಾಧಾರಿ ಶ್ರಾವಕ-ಶ್ರಾವಿಕೆಯರು ಜಿನಸ್ತುತಿ ಸ್ತುತಿಸುತ್ತಾ ಪೂಜೆ ಸಮರ್ಪಿಸಿದರು.

ಉತ್ತಮ ದಶಧರ್ಮಗಳ ಅನೂಚಾನ ಪರಿಪಾಲನೆಯಿಂದ ಧರ್ಮ ಪ್ರಭಾವನೆ ಉಂಟಾಗುತ್ತದೆ. ಸಾತ್ವಿಕ ಮನೋಭಾವ ಸ್ಪುರಿಸುವ ಮನೋಧರ್ಮವನ್ನು ಇಂದ್ರಿಯ ನಿಗ್ರಹದಿಂದ ರೂಢಿಸಿಕೊಳ್ಳುವುದು ಕ್ಷೇಮವನ್ನುಂಟು ಮಾಡುತ್ತದೆ” ಎಂದು ಸ್ವಸ್ತಿಶ್ರೀಗಳವರು “ಅಹಿಂಸಾಭಾವ ಪರಿಸಲು, ಸತ್‌ಪರಿಣಾಮ ಬೀರಲು ಪರಸ್ಪರ ವೈರತ್ವ, ವೈಮನಸ್ಸನ್ನು ತ್ಯಜಿಸಿ, ಕಿರಿಯರು-ಹಿರಿಯರು ಜೈನ ಧರ್ಮದ ಮೂಲ ತತ್ವ-ಸಿದ್ಧಾಂತ-ಉಪದೇಶಗಳನ್ನು ಅರಿತುಕೊಂಡು ಬಾಳುವುದು ಜೀವನದಲ್ಲಿ ಯಶಃಕೀರ್ತಿ ಪ್ರಾಪ್ತಿಯಾಗುತ್ತದೆ ಎಂದು ಸರ್ವರನ್ನು ಹರಿಸಿದರು.

ಶ್ರೀ ಆದಿನಾಥ ಸ್ವಾಮಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಸರಸ್ವತಿ ದೇವಿ, ಶ್ರೀಕ್ಷೇತ್ರಪಾಲ, ಶ್ರೀ ನಾಗಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನೆರವೇರಿದವು.

ಊರ ಪರವೂರ ಭಕ್ತರು, ಶ್ರೀ ಪದ್ಮಾವತಿ ಮಹಿಳಾ ಸಮಾಜ, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಪರಸ್ಪರ ‘ಕ್ಷಮೆ ಯಾಚಿಸಿ’ ಧನ್ಯರಾದರು. ಅಂದು ಪಲ್ಲಕ್ಕಿ ಉತ್ಸವ ನೆರವೇರಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.