ಶಿವಮೊಗ್ಗ ; ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ದೇವರ ಮೇಲಿನ ನಂಬಿಕೆ ಮನುಷ್ಯನ ಬಾಳಿಗೆ ಶಾಶ್ವತ ನಂದಾದೀಪ. ಭಗವಂತನಿತ್ತ ಸಂಪನ್ಮೂಲ ಬಾಳಿನ ಅಮೂಲ್ಯ ಸಂಪತ್ತು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ತಾಲೂಕಿನ ಹೊಯ್ಸನಹಳ್ಳಿ ಗ್ರಾಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಸಮುದಾಯ ಭವನದ ಉದ್ಘಾಟನೆ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಸಮರ ಜೀವನವನ್ನು ಅಮರ ಜೀವನಕ್ಕೆ ಕೊಂಡೊಯ್ಯುವುದೇ ನಿಜ ಗುರುವಿನ ಧರ್ಮವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಧಾರ್ಮಿಕ ಸಂಸ್ಕೃತಿಯ ಪುನರುತ್ಥಾನದೊಂದಿಗೆ ಸಾಮಾಜಿಕ ಸತ್ಕ್ರಾಂತಿಗೈದ ವಿಭೂತಿ ಪುರುಷರು. ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸದಾ ಶ್ರಮಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಮನುಷ್ಯನ ಬಾಳಿಗೆ ಬೆಳಕು ತೋರುತ್ತವೆ. ಅಂಥ ಆದರ್ಶ ಯುಗಪುರುಷರಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಕೈಗೊಂಡಿದ್ದು ತಮಗೆ ಅಪಾರ ಸಂತೋಷ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಗಣಪತಿ, ನಂದಿ, ನಾಗರಕಲ್ಲು, ಗರುಡ ಕಂಭ ಪ್ರತಿಷ್ಠಾಪಿಸಿ ಸಮುದಾಯ ಭವನದ ಉದ್ಘಾಟನೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ನೆರವೇರಿಸಿದರು.

ನೇತೃತ್ವ ವಹಿಸಿದ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಕಾಯಕ ಮತ್ತು ದಾಸೋಹದ ಮೂಲಕ ಬಾಳ ಬದುಕಿನ ಶ್ರೇಯಸ್ಸಿಗೆ ದಾರಿ ತೋರಿದವರು. ಸಂಸ್ಕೃತಿ ಸಂಸ್ಕಾರದ ಅರಿವನ್ನು ಉಂಟು ಮಾಡಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು. ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದು ಗುರು ರಕ್ಷೆ ಸ್ವೀಕರಿಸಿದರು.
ಈ ಪವಿತ್ರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪರ‍್ಯಾ ನಾಯಕ ಪಾಲ್ಗೊಂಡಿದ್ದರು. ಶ್ರೀ ಗುರು ರೇವಣಸಿದ್ಧೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಿದ್ಧೇಶ, ಕಾರ್ಯದರ್ಶಿ ರಾಜಶೇಖರ, ಶಿವಣ್ಣ ಉಪಸ್ಥಿತರಿದ್ದರು. ಕುಮಾರಿ ವರ್ಷಾ ನಿರೂಪಿಸಿದರು.

ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಸಾರೋಟ ಉತ್ಸವದೊಂದಿಗೆ ಬರ ಮಾಡಿಕೊಂಡರು. ಕುಂಭ ಹೊತ್ತ ಸುಮಂಗಲೆಯರು ಆರತಿ ಹಿಡಿದ ಮುತ್ತೈದೆಯರು, ವೀರಗಾಸೆ, ಡೊಳ್ಳು ವಿವಿಧ ಕಲಾ ತಂಡಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಸಮಾರಂಭದ ನಂತರ ಶ್ರೀ ಗುರು ರೇವಣಸಿದ್ಧೇಶ್ವರ ಸೇವಾ ಸಮಿತಿಯವರು ಬಂದ ಎಲ್ಲ ಭಕ್ತರಿಗೆ ಅನ್ನ ದಾಸೋಹ ನೆರವೇರಿಸಿದರು.