ರಿಪ್ಪನ್‌ಪೇಟೆ ; ಇಲ್ಲಿನ ಬೆನವಳ್ಳಿ ಗ್ರಾಮದ ಮಜರೆ ಬೈರಾಪುರ-ಮುಡುಬಾ ಗ್ರಾಮದ ಗ್ರಾಮದೇವರ ಹಿತ್ತಾಳೆ, ಪಂಚಲೋಹದ ಕುದುರೆ ಮತ್ತು ದೇವರ ಪ್ರಭಾವಳಿ, ಛತ್ರಿಗಳನ್ನು ಕಳವು ಮಾಡಲಾಗಿದೆ ಎಂದು ಗ್ರಾಮಸ್ಥರು ರಿಪ್ಪನ್‌ಪೇಟೆ ಠಾಣೆಗೆ ದೂರು ನೀಡಿರುವ ಘಟನೆ ವರದಿಯಾಗಿದೆ.
ಏನಿದು ಪ್ರಕರಣ ?
ಮಲೆನಾಡಿನಲ್ಲಿ ದೀಪಾವಳಿ ಹಬ್ಬದಲ್ಲಿ ಗ್ರಾಮದ ದೇವರುಗಳಿಗೆ ವಿಶೇಷ ನೋನಿ ಹಬ್ಬವನ್ನಾಗಿ ಆಚರಿಸುವುದು ಹಿಂದಿನಿಂದಲೂ ಆಚರಿಸಿಕೊಂಡು ಬರುವುದು ಪದ್ದತಿ. ಆ ಪದ್ದತಿಯಂತೆ ಮಜರೆ ಗ್ರಾಮದ ಬೈರಾಪುರ ಮುಡುಬಾ ಗ್ರಾಮಸ್ಥರು ಮನೆಗೆ ಒಬ್ಬರಂತೆ ಗ್ರಾಮದೇವರ ಬನಕ್ಕೆ ಹೋಗಿ ಸ್ವಚ್ಚಗೊಳಿಸಿ ಮಡಕೆಯಲ್ಲಿ ತುಂಬಿ ಮಣ್ಣಿನಡಿ ಇಡಲಾದ ದೇವರ ವಿಗ್ರಹಗಳನ್ನು ಹೊರ ತೆಗೆದು ಅವುಗಳನ್ನು ಶುಚಿಗೊಳಿಸಿ ಪುರೋಹಿತರ ಸಮ್ಮುಖದಲ್ಲಿ ಪೂಜೆಗೆ ಅಣಿ ಮಾಡಲು ಮುಂದಾದಾಗ ಮಡಿಕೆಯಲ್ಲಿಟ್ಟ ವಿಗ್ರಹಗಳು ಇಲ್ಲದಿರುವುದು ಕಂಡು ಗಾಬರಿಯಾಗಿದ್ದಾರೆ.
ತಕ್ಷಣ ದೇವರ ವಿಗ್ರಹಗಳು ಕಳವಾಗಿರುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಏನು ಬಂತು ಕೇಡುಗಾಲ ಎಂದು ಗ್ರಾಮದ ಹಿರಿಯರು ಆಡಿಕೊಳ್ಳುತ್ತಾ ಈ ವರ್ಷ ವಿಗ್ರಹಗಳಿಲ್ಲದೆ ನೋನಿ ಮಾಡುವುದಾದರೂ ಹೇಗೆ? ಎಂದು ಚಿಂತಿಸಿ ಕೊನೆಗೆ ಗುರುಗಳ ಮುಂದೆ ಈ ಸಮಸ್ಯೆಗೆ ಪರಿಹಾರ ಏನು ಎಂದು ಕೇಳಿದಾಗ ಆವರು ಕಳಸ ಹೂಡಿ ಅದರಲ್ಲಿ ದೇವರ ಅವಾಹನೆ ಮಾಡಿ ಪೂಜೆ ಮಾಡಿ ಎಂದು ತಿಳಿಸಿದರ ಮೇರೆಗೆ ನೋನಿಯನ್ನು ಬಿಡದೆ ನಿರ್ವಹಿಸಿ ಗ್ರಾಮದಲ್ಲಿ ನಿನ್ನ ವಿಗ್ರಹಗಳು ಕಳವು ಮಾಡಲಾಗಿ ಅವುಗಳು ವರ್ಷದೊಳಗೆ ಪತ್ತೆ ಮಾಡಿಕೊಡುವಂತೆ ದೇವರಲ್ಲಿ ಹರಕೆ ಮಾಡಿಕೊಂಡ ಘಟನೆ ನಡೆದಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.