ಹೊಸನಗರ ; ‘ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗಲು ಸಾಧ್ಯ’ ಎಂಬ ಮಾತಿದೆ. ಆದರೆ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ, ಕಾರ್ಯದರ್ಶಿಗಳ ಕೊರತೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ಹೌದು, ತಾಲ್ಲೂಕಿನಲ್ಲಿ ಕಸಬಾ, ನಗರ, ಹಾಗೂ ಹುಂಚ, ಕೆರೆಹಳ್ಳಿ ಎಂಬ 4 ಹೋಬಳಿ ಸೇರಿ ಒಟ್ಟು 30 ಗ್ರಾಮ ಪಂಚಾಯತಿಗಳಿವೆ. ಆದರೆ ಅಭಿವೃದ್ಧಿ ಕೆಲಸಗಳು ಹಾಗೂ ಗ್ರಾಮಸ್ಥರ ಕೆಲಸವಾಗಬೇಕಾದರೆ ಅಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅಥವಾ ಕಾರ್ಯದರ್ಶಿ ಗ್ರಾಮ ಪಂಚಾಯತಿಯಲ್ಲಿದ್ದರೇ ಮಾತ್ರ ಕೆಲಸಗಳು ಸುಗಮವಾಗಿ ನಡೆಯುತ್ತದೆ. ಆದರೆ 30 ಗ್ರಾಮ ಪಂಚಾಯತಿಗಳಲ್ಲಿ ಕೇವಲ 19 ಪಿಡಿಒಗಳು ಕರ್ತವ್ಯ ನಿರ್ವಹಿಸುತ್ತಿದ್ದು 11 ಹುದ್ದೆಗಳು ಖಾಲಿ ಇದೆ. ಇದರಲ್ಲಿ ಒಂದಿಬ್ಬರು ಮುಂದಿನ ದಿನದಲ್ಲಿ ವಯೋನಿವೃತ್ತರಾಗಲಿದ್ದಾರೆ. 30 ಗ್ರಾಮ ಪಂಚಾಯತಿಗಳಲ್ಲಿ ಕೇವಲ 21 ಕಾರ್ಯದರ್ಶಿ ಹುದ್ದೆ ನೀಡಲಾಗಿದ್ದು ಅದರಲ್ಲಿಯೂ 21ರಲ್ಲಿ ಕೇವಲ 14 ಜನ ಕಾರ್ಯದರ್ಶಿಗಳು ಸೇವೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ರೀತಿ ಪಿಡಿಒ, ಕಾರ್ಯದರ್ಶಿಗಳೇ ಇಲ್ಲವಾದರೆ ಗ್ರಾಮಸ್ಥರ ಗತಿಯೇನು? ಎಂದು ಕೇಳುವ ಪರಿಸ್ಥಿತಿ ಇಲ್ಲಿ ಬಂದೊದಗಿದೆ.
ಹೊಸನಗರ ತಾಲೂಕು ಕೇಂದ್ರದಿಂದ ಕೆಲವು ಗ್ರಾ.ಪಂ.ಗಳು ಸುಮಾರು 45 ಕಿ.ಮೀ. ದೂರದಲ್ಲಿವೆ. ಒಂದೊಂದು ಗ್ರಾಮ ಪಂಚಾಯಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಇದು ಎಲ್ಲವೂ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ, ಅಧಿಕಾರಿ ವರ್ಗದವರಿಗೂ ಗೊತ್ತು. ಅದು ಅಲ್ಲದೇ ಹೊಸನಗರ ವಿಧಾನಸಭೆಯ ಕ್ಷೇತ್ರ ಅರ್ಧ ತೀರ್ಥಹಳ್ಳಿಗೂ ಇನ್ನೂಳಿದ ಅರ್ಧ ಭಾಗ ಸಾಗರ ಕ್ಷೇತ್ರಕ್ಕೂ ಸೇರುವುದರಿಂದ ಒಂದು ತಾಯಿಯ ಎರಡು ಮಕ್ಕಳು ಪಡೆದಂತೆ ಸಾಗರ ಕ್ಷೇತ್ರದಿಂದ ಬೇಳೂರು ಗೋಪಾಲಕೃಷ್ಣರನ್ನು ತೀರ್ಥಹಳ್ಳಿ ಕ್ಷೇತ್ರದಿಂದ ಆರಗ ಜ್ಞಾನೇಂದ್ರರನ್ನು ಪಡೆದುಕೊಂಡ ಪುಣ್ಯ ಕ್ಷೇತ್ರ ಹೊಸನಗರ ತಾಲ್ಲೂಕಾಗಿದೆ. ಇವರಿಬ್ಬರ ನಡುವೆ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದು ನಗರ ಮತ್ತು ಹುಂಚ ಹೋಬಳಿ ಕ್ಷೇತ್ರ ತೀರ್ಥಹಳ್ಳಿಗೂ (ಕೆಲವು ಭಾಗಗಳು) ಇನ್ನುಳಿದ ಕೆಲವು ಭಾಗಗಳು ಸಾಗರಕ್ಕೆ ಸೇರುತ್ತದೆ. ಈ ಗ್ರಾಮ ಪಂಚಾಯತಿ ಅಧಿಕಾರಿಗಳು ಇಬ್ಬರು ಶಾಸಕರ ಕೈಯಲ್ಲಿ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ. ಇದರ ಜೊತೆಗೆ ಗ್ರಾಮ ಪಂಚಾಯತಿ ಸದಸ್ಯರ ಕೈಗೊಂಬೆಯಾಗಿ ಕೆಲಸ ನಿರ್ವಹಿಸುವುದು ಕಷ್ಟ-ಕಷ್ಟ ಎನ್ನುತ್ತಿರುವವರು ಇದ್ದಾರೆ.

ಒಬ್ಬ ಪಿಡಿಒ ಎರಡೆರಡು ಕಡೆ ಕೆಲಸ !
ಗ್ರಾಮ ಪಂಚಾಯತಿಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೊರತೆ ಇರುವುದರಿಂದ ಒಬ್ಬ ಪಿಡಿಒಗಳು ಎರಡೆರಡು ಕಡೆ ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ಗ್ರಾಮ ಪಂಚಾಯತಿಯಿಂದ 5-10 ಕಿ.ಮೀ. ಒಳಗೆ ನಿಯೋಜನೆಗೊಂಡರೆ ಹೇಗೋ ಕೆಲಸ ನಿರ್ವಹಿಸಬಹುದು. ಅದು ಬಿಟ್ಟು 20-30 ಕಿ.ಮೀ. ದೂರ ನಿಯೋಜನೆಗೊಳಿಸಿದರೆ ಅದು ಅಲ್ಲದೇ ಮಹಿಳಾ ಪಿಡಿಒಗಳನ್ನು ದೂರ-ದೂರ ಹಾಕಿದರೆ ಅವರು ಕೆಲಸ ನಿರ್ವಹಿಸುವುದು ಹೇಗೆ? ಗ್ರಾಮದ ಅಭಿವೃದ್ಧಿ ಕೆಲಸ ಮಾಡುವುದು ಹೇಗೆ? ಗ್ರಾಮಸ್ಥರೊಂದಿಗೆ ಸ್ಪಂದಿಸುವುದು ಹೇಗೆ? ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದ್ದು, ಅದು ಅಲ್ಲದೇ ವಾರದಲ್ಲಿ ಒಂದೆರಡು ದಿನ ಆ ಸಭೆ, ಈ ಸಭೆ ಎಂದು ಕೆಲಸಕ್ಕೆ ಗೈರು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಜನಪ್ರಿಯ ಶಾಸಕರು ಎನಿಸಿಕೊಂಡಿರುವ ಬೇಳೂರು ಗೋಪಾಲಕೃಷ್ಣ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರವರು ಸರ್ಕಾರದ ಮೇಲೆ ಒತ್ತಡ ತಂದು ಖಾಲಿ ಇರುವ ಪಿಡಿಒಗಳ ಹಾಗೂ ಕಾರ್ಯದಶಿಗಳ ಹುದ್ದೆಗಳನ್ನು ಭರ್ತಿ ಮಾಡಿದರೆ ಒಳ್ಳೆಯದು ಇಲ್ಲವಾದರೆ ಆಯಾಯ ಗ್ರಾಮ ಪಂಚಾಯತಿಗೆ ಸಂಬಂಧಪಟ್ಟಂತೆ ಅಲ್ಲಲ್ಲಿ ಹೋರಾಟ ನಿಶ್ಚಿತ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





