ಹೊಸನಗರ

ಕಾಮಗಾರಿಗಳ ಅನುಷ್ಠಾನದಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಸಲ್ಲದು ; ಹೊಸನಗರ ಕೆಡಿಪಿ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಸೂಚನೆ

ಕಾಮಗಾರಿಗಳ ಅನುಷ್ಠಾನದಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಸಲ್ಲದು ; ಹೊಸನಗರ ಕೆಡಿಪಿ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಸೂಚನೆ – InShot 20260803 18…

ಹೊಸನಗರ ; ಇತ್ತೀಚೆಗೆ ತಾಲೂಕಿನಲ್ಲಿ ಅತಿವೃಷ್ಠಿ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ತಾಲೂಕಿನಾದ್ಯಂತ ಪ್ರವಾಸ ಕೈಗೊಂಡು ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಕೈಗೊಳ್ಳುವಂತೆ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊಸನಗರ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಪುಟ್ಟನಾಯ್ಕ್ ಮಾತನಾಡಿ, ಈವರೆಗೆ ತಾಲೂಕು ವ್ಯಾಪ್ತಿಯಲ್ಲಿ 23 ಅಡಿಕೆ ತೋಟಗಳಿಗೆ ಹಾನಿಯಾದ ಪ್ರಕರಣಗಳು ದಾಖಲಾಗಿವೆ. ಕೊಳೆರೋಗ ತಡೆಗೆ ಮೈಲುತುತ್ತ ಸಹಾಯಧನ ವಿತರಣೆಗೆ ಕ್ರಮ ವಹಿಸಲಾಗಿದೆ. ಈವರೆಗೆ 600 ಅರ್ಜಿ ಸ್ವೀಕರಿಸಲಾಗಿತ್ತು. 15 ಲಕ್ಷ ಅನುದಾನ ಬಿಡುಗಡೆಯಾಗಿದೆ. ಆ.15 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ ಎಂದು ಮಾಹಿತಿ ನೀಡಿದರು.

ತಾಲೂಕಿನ ಒಟ್ಟು 30 ಮಳೆ ಮಾಪನ ಕೇಂದ್ರಗಳಲ್ಲಿ 28 ಕಾರ್ಯನಿರ್ವಹಿಸುತ್ತಿದ್ದು, ಕೆಂಚನಾಲ ಮತ್ತು ಹೆದ್ದಾರಿಪುರದಲ್ಲಿ ಹೊಸ ಮಾಪಕಗಳ ಅಳವಡಿಕೆಯ ಕಾಮಗಾರಿ ನಡೆದಿದೆ. ತಾಲೂಕಿನ 230 ಶಾಲೆಗಳಲ್ಲಿ 29 ಕಟ್ಟಡ ಅಪಾಯ ಸ್ಥಿತಿಯಲ್ಲಿವೆ. 14 ಶಾಲೆಗಳು ತೀರ್ಥಹಳ್ಳಿ ಕ್ಷೇತ್ರ ವ್ಯಾಪ್ತಿಗೆ ಸೇರಿದೆ. ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ. ಕರಿಮನೆ ಮತ್ತು ಬೈಸೆ ಗ್ರಾಮಗಳಿಗೆ ಜೂನ್ ತಿಂಗಳಿನಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್ ತಿಳಿಸಿದರು.

ಈ ವರ್ಷ ಒಟ್ಟಾರೆ 4 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ನಡೆದಿದೆ. ನಿಟ್ಟೂರು ಭಾಗದಲ್ಲಿ ಮಂಗಗಳು ಮೃತಪಟ್ಟಿದ್ದು ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಕೈಗೊಳ್ಳಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಶಾಂತರಾಜ್ ಹೇಳಿದರು.

ಕೃಷಿ ಸಹಾಯಕ ನಿರ್ದೇಶಕ ಮಾತನಾಡಿ, ಈವರೆಗೆ 35 ಸಾವಿರ ಹೆಕ್ಟೇರ್ ಭೂ ಪ್ರದೇಶದಲ್ಲಿ ಭತ್ತದ ನಾಟಿ ನಡೆದಿದೆ. ಶೇ.40ರಷ್ಟು ನಾಟಿ ಕಾರ್ಯ ಮುಗಿದಿದೆ. ಅಲ್ಪಾವಧಿ ತಳಿಗೆ ಹೆಚ್ಚಿನ ಒತ್ತು ನೀಡಿದ್ದು, ಭತ್ತದ ಬೀಜದ ದಾಸ್ತಾನಿಗೆ ಕೊರತೆ ಕಂಡುಬಂದಿಲ್ಲ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಅತಿವೃಷ್ಠಿಯಿಂದ ಈವರೆಗೆ 8 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕರಿಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಸೆ ಗ್ರಾಮದ ಜಲಜಾಕ್ಷಿ ಎಂಬುವವರಿಗೆ ರೂ.6500 ಪರಿಹಾರ ವಿತರಣೆ ಮಾಡಲಾಗಿದೆ ಎಂದು ಪಿಡಿಒ ರಾಜೇಶ್ ಸಭೆಯ ಗಮನಕ್ಕೆ ತಂದರು.

ಮೇಲಿನಬೆಸಿಗೆ ಗ್ರಾಮದಲ್ಲಿ ವಾಸದ ಮನೆಯ ಚಾವಣಿಗೆ ಹಾನಿಯಾಗಿದ್ದು, ಕೂಡಲೇ ಪರಿಹಾರ ಒದಗಿಸುವಂತೆ ಶಾಸಕ ಆರಗ ಜ್ಞಾನೇಂದ್ರ ಸೂಚಿಸಿದರು.

ಮಳಲಿ, ಕಾಡಿಗ್ಗೇರಿ, ಕೀಳಂದೂರು, ಕರಿಮನೆ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಗಳ ಪ್ರಗತಿ ಕುಂಠಿತಗೊಂಡಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆ. ಕೂಡಲೇ ಸ್ಥಳ ಪರಿಶೀಲನೆ ಮಾಡಿ, ತ್ವರಿತಗತಿಯಲ್ಲಿ ಕಾಮಗಾರಿ ಮುಕ್ತಾಯಗೊಳಿಸುವಂತೆ ಶಾಸಕ ಆರಗ ಜ್ಞಾನೇಂದ್ರ ಇಂಜಿನಿಯರ್‌ಗೆ ತಿಳಿಸಿದರು.

ಬಹುಗ್ರಾಮ ಕುಡಿವ ನೀಡಿನ ಯೋಜನೆಯ ಶೇ.85ರಷ್ಟು ಪೈಪ್‌ಲೈನ್ ಕಾಮಗಾರಿ ಅಪೂರ್ಣವಾಗಿದೆ. ಇದಕ್ಕೆ ಅರಣ್ಯ ಇಲಾಖೆ ಅಸಹಕಾರವೇ ಕಾರಣ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಮುರುಗೇಶ್ ಆರೋಪಿಸಿದರು. ಈ ವೇಳೆ ಮಾತನಾಡಿದ ಶಾಸಕ ಜ್ಞಾನೇಂದ್ರ, ಬಹುಗ್ರಾಮ ಕುಡಿವ ನೀರಿನ ಯೋಜನೆ ಹಾಗೂ ಜೆಜೆಎಂ ಯೋಜನೆಗೆ ಅಡ್ಡಿಪಡಿಸದಂತೆ ಮುಖ್ಯಮಂತ್ರಿ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.

ಎಲ್‌ಪಿಜಿ ವಿತರಕರು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಕುರಿತು ತಮ್ಮ ಗಮನಕ್ಕೆ ಬಂದಿದ್ದು. ಅಂತಹ ಪ್ರಕರಣಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುಂಗಾರು ಆರಂಭಗೊಂಡು ಈವರೆಗೆ 1550 ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು ಒಟ್ಟಾರೆ 3.90 ಕೋಟಿ ಲಕ್ಷ ರೂ. ನಷ್ಟವಾಗಿದೆ. ಸಾಗರ – ಹೊಸನಗರ ಸಂಪರ್ಕದ 33 ಕೆವಿ ವಿದ್ಯುತ್ ಮಾರ್ಗ ತೊಂದರೆಯಿಂದ ವಿದ್ಯುತ್ ವ್ಯತ್ಯಯ ಆಗುತ್ತಿದೆ. ಲೈನ್‌ಮೆನ್‌ಗಳ ಕೊರತೆಯಿದೆ ಎಂದು ಮೆಸ್ಕಾಂ ಇಇ ಚಂದ್ರಶೇಖರ್ ತಿಳಿಸಿದರು.

ಮುತ್ತೂರು ಸರ್ಕಾರಿ ಶಾಲೆಯಲ್ಲಿ ಕೊಳವೆಬಾವಿ ವಿದ್ಯುತ್ ಕೇಬಲ್ ಕಳ್ಳತನವಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಮುಂಬಾರು ಪಿಡಿಒ ರವಿರಾಜ್ ತಿಳಿಸಿದರು. ಸಭೆಯಲ್ಲಿ ತಹಸೀಲ್ದಾರ್ ಭರತರಾಜ್, ತಾ.ಪಂ. ಇಒ ನರೇಂದ್ರಕುಮಾರ್, ಪವನ್‌ಕುಮಾರ್, ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಸೂಚನಾ ಫಲಕ ತೆರವು, ದೂರು ನೀಡಲು ಸೂಚನೆ :

ಮೂಡುಗೊಪ್ಪ ನಗರ ಬಸ್‌ ನಿಲ್ದಾಣ ಶಿಥಿಲಗೊಂಡಿದ್ದು, ಸಾರ್ವಜನಿಕರ ಮುನ್ನೆಚ್ಚರಿಕೆಗಾಗಿ ಜಿಲ್ಲಾಧಿಕಾರಿ ಆದೇಶಿಸಿದ್ದ ಸೂಚನಾ ಫಲಕವನ್ನು ಅಲ್ಲಿನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಏಕಾಏಕಿ ತೆರವುಗೊಳಿಸಿರುವುದು ಅಕ್ಷಮ್ಯ ಎಂದು ಶಾಸಕ ಜ್ಞಾನೇಂದ್ರ ಅಸಮಧಾನ ವ್ಯಕ್ತಪಡಿಸಿದರು. ಅಲ್ಲದೇ ಈ ಕುರಿತು ಸಂಬಂಧಪಟ್ಟವರು ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]