ತೀರ್ಥಹಳ್ಳಿ: ತೀರ್ಥಹಳ್ಳಿ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ಐಪಿಎಸ್ ಅಧಿಕಾರಿ ಡಾ. ಭಾನುಪ್ರಕಾಶ್ ಅವರು ಅಧಿಕಾರ ಸ್ವೀಕರಿಸಿದರು.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ, ಶಿವಮೊಗ್ಗ ಡಿವೈಎಸ್ಪಿ ಸಂಜೀವ್ ಕುಮಾರ್ ಅವರು ಡಾ. ಭಾನುಪ್ರಕಾಶ್ ಅವರಿಗೆ ಜವಾಬ್ದಾರಿ ಹಸ್ತಾಂತರಿಸಿದರು.
ಬೆಂಗಳೂರು ಮೂಲದ ಐಪಿಎಸ್ ಅಧಿಕಾರಿಯಾಗಿರುವ ಡಾ. ಭಾನುಪ್ರಕಾಶ್ ಅವರು ಇನ್ನು ಮುಂದೆ ತೀರ್ಥಹಳ್ಳಿ ಉಪವಿಭಾಗದ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಹಾಗೂ ಪೊಲೀಸ್ ಆಡಳಿತದ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ.
ತೀರ್ಥಹಳ್ಳಿ ಡಿವೈಎಸ್ಪಿಯಾಗಿದ್ದ ಅರವಿಂದ್ ಕಲಗುಜ್ಜಿ ಅವರು ನಿವೃತ್ತರಾದ ನಂತರ, ಶಿವಮೊಗ್ಗ ಡಿವೈಎಸ್ಪಿ ಸಂಜೀವ್ ಕುಮಾರ್ ಅವರು ತೀರ್ಥಹಳ್ಳಿ ಉಪವಿಭಾಗದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಡಾ. ಭಾನುಪ್ರಕಾಶ್ ಅಧಿಕಾರ ಸ್ವೀಕರಿಸುವ ಮೂಲಕ ಹುದ್ದೆ ಅಧಿಕೃತವಾಗಿ ಭರ್ತಿಯಾಗಿದೆ.
ಈ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುಷ್ಮಾ ಅವರು ನೂತನ ಡಿವೈಎಸ್ಪಿ ಡಾ. ಭಾನುಪ್ರಕಾಶ್ ಅವರನ್ನು ಬರಮಾಡಿಕೊಂಡರು.
ಯುವ ಐಪಿಎಸ್ ಅಧಿಕಾರಿ ತೀರ್ಥಹಳ್ಳಿ ಉಪವಿಭಾಗದ ಜವಾಬ್ದಾರಿ ವಹಿಸಿಕೊಂಡಿರುವುದರಿಂದ ಪೊಲೀಸ್ ಆಡಳಿತಕ್ಕೆ ಮತ್ತಷ್ಟು ಚುರುಕು ಬರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ

