ಹೊಸನಗರ: ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಹೊಸನಗರ ತಾಲ್ಲೂಕು ಘಟಕದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ 11 ನಿರ್ದೇಶಕರು ಯಾವುದೇ ಸ್ಪರ್ಧೆಯಿಲ್ಲದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು ಕೇಂದ್ರಿತ ಸಂಘದ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಹೊಸನಗರ ಘಟಕಕ್ಕೆ ಮುಂದಿನ ಐದು ವರ್ಷಗಳ (2026–2031) ಅವಧಿಗಾಗಿ ಇತ್ತೀಚೆಗೆ ಚುನಾವಣಾ ಪ್ರಕ್ರಿಯೆ ಆರಂಭಿಸಲಾಗಿತ್ತು. ತಾಲ್ಲೂಕು ಘಟಕದ ಒಟ್ಟು 11 ನಿರ್ದೇಶಕರ ಸ್ಥಾನಗಳಿಗೆ ನಾಮಪತ್ರ ಆಹ್ವಾನಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಕೇವಲ 11 ಅಭ್ಯರ್ಥಿಗಳು ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಹೆಚ್ಚುವರಿ ಅರ್ಜಿಗಳು ಸಲ್ಲಿಕೆಯಾಗದ ಕಾರಣ, ಕಣದಲ್ಲಿದ್ದ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಸಿರ್ ಅಹಮ್ಮದ್ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

ಅ. 1ರಂದು ಪದಾಧಿಕಾರಿಗಳ ಆಯ್ಕೆ:
ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ, ಸಂಘದ ಪ್ರಮುಖ ಹುದ್ದೆಗಳಾದ ತಾಲ್ಲೂಕು ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕೋಶಾಧ್ಯಕ್ಷ ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ನಾಮಪತ್ರ ಸಲ್ಲಿಕೆ:
ಸೆಪ್ಟೆಂಬರ್ 28 ರಂದು ಬೆಳಿಗ್ಗೆ 8:00 ರಿಂದ ಸಂಜೆ 6:00 ಗಂಟೆಯವರೆಗೆ ಆಸಕ್ತರು ನಾಮಪತ್ರ ಸಲ್ಲಿಸಬಹುದು.
ಚುನಾವಣೆ ದಿನಾಂಕ:
ಅಕ್ಟೋಬರ್ 01 ರಂದು ನೂತನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

