ಹೊಸನಗರ ; ರಾಜ್ಯದಲ್ಲಿಯೇ ಮೊದಲು ಮೊಬೈಲ್ ನೆಟ್‌ವರ್ಕ್ ಹೋರಾಟ ಆರಂಭವಾಗಿದ್ದು ನಮ್ಮ ವಾರಂಬಳ್ಳಿಯಿಂದ. ಈ ಹೋರಾಟಕ್ಕೆ 8 ವರ್ಷ ಆದರೂ ನಮ್ಮೂರ ನೆಟ್‌ವರ್ಕ್ ಸಮಸ್ಯೆ ಬಗೆಹರಿದಿಲ್ಲ ಎಂದು ಮೊಬೈಲ್ ನೆಟ್‌ವರ್ಕ್ ಹೋರಾಟ ಸಮಿತಿ ಅಧ್ಯಕ್ಷ ಮೇಲನೂರು ಶ್ರೀನಿವಾಸ್ ಹೇಳಿದರು.
ಸೊನಲೆ ಗ್ರಾ.ಪಂ ವ್ಯಾಪ್ತಿಯ ವಾರಂಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ಸಾರಿಯೂ ರಾಜಕಾರಣಿಗಳು ಟವರ್ ನಿರ್ಮಿಸುವ ಆಶ್ವಾಸನೆ ನೀಡಿ ತೆರಳುತ್ತಾರೆ. ಆದರೆ, ಇನ್ನು ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಏಪ್ರಿಲ್ 17ಕ್ಕೆ ವಾರಂಬಳ್ಳಿಯಿಂದ ಹೊಸನಗರ ತಾಲ್ಲೂಕು ಕಚೇರಿವರೆಗೆ 10 ಕಿ.ಮೀ ವರೆಗೆ ಬೃಹತ್ ಪಾದಯಾತ್ರೆ ಮತ್ತು ಏಪ್ರಿಲ್ 28 ಕ್ಕೆ ಒಂದನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಂದ ಸಂಸದರ ಮನೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ ಅವರು, ನಮಗೂ ಹೋರಾಟ ಮಾಡಿ ಸಾಕಾಗಿದೆ. ಹೀಗಾಗಿ ಬೃಹತ್ ಪಾದಯಾತ್ರೆಯ ನಿರ್ಣಯ ಮಾಡಲಾಗಿದೆ ಎಂದರು.
ಸಮಿತಿಯ ಕಾರ್ಯದರ್ಶಿ ಹರೀಶ್ ವಿ.ಟಿ. ನಾಯ್ಕ ಮಾತನಾಡಿ, ನೆಟ್‌ವರ್ಕ್ ಸಮಸ್ಯೆಯಿಂದ ಈಗಾಗಲೇ ಹಲವಾರು ಸಾವು-ನೋವುಗಳು ನಮ್ಮೂರಲ್ಲಿ ಕಂಡಿವೆ. ಎಷ್ಟೋ ಹೆಣ್ಣು ಮಕ್ಕಳು ಕೆಲಸ ಮಾಡಲು ನೆಟ್‌ವರ್ಕ್ ಇರೋ ಗುಡ್ಡದ ಮೇಲೆ ಹೋಗಿ ಕುಳಿತಿದ್ದಾರೆ. ಆ ಹೆಣ್ಣು ಮಕ್ಕಳಿಗೆ ರಕ್ಷಣೆ ಯಾರು ಕೊಡುತ್ತಾರೆ? ಪ್ರತಿ ಸಲ ಚುನಾವಣೆ ಬಂದಾಗಲೂ ಸುಳ್ಳು ಆಶ್ವಾಸನೆ ನೀಡಿ ತೆರಳುತ್ತಾರೆ ಹೀಗಾಗಿ ಈ ಹೋರಾಟ ಅನಿವಾರ್ಯ ಎಂದರು.
ಪ್ರಧಾನಿಯ ಪತ್ರಕ್ಕೂ ಕಿಮ್ಮತ್ತಿಲ್ಲ !
ಅಧಿಕಾರಿಗಳಿಗೆ ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಸಂಬಂಧಪಟ್ಟ ಇಲಾಖೆಗೆ ಇದುವರೆಗೂ ಸುಮಾರು 15 ಬಾರಿ ಪಾತ್ರ ಬರೆದರೂ ನಮ್ಮ ಸಮಸ್ಯೆ ಬಗೆಹರಿದಿಲ್ಲ. ನಮ್ಮೂರ ಹೋರಾಟಕ್ಕೆ 8 ವರ್ಷ ಆಗಿದೆ. ಆದರೂ ಯಾವ ಅಧಿಕಾರಿಗಳು ನಮ್ಮತ್ತ ಸುಳಿಯುತ್ತಿಲ್ಲ. ಮೊಬೈಲ್ ನೆಟ್‌ವರ್ಕ್ ಹೋರಾಟಕ್ಕೆ ಸಂಬಂಧಿಸಿದಂತೆ ಏ.17ಕ್ಕೆ ವಾರಂಬಳ್ಳಿಯಿಂದ ಹೊಸನಗರ ತಾಲ್ಲೂಕು ಕಚೇರಿಯವರೆಗೂ ಬೃಹತ್ ಪಾದಯಾತ್ರೆ ಮತ್ತು ಏ. 28 ರಂದು ವಾರಂಬಳ್ಳಿ ಮತ್ತು ಸುತ್ತಮುತ್ತಲಿನ ಮಕ್ಕಳಿಂದ ಸಂಸದರ ಮನೆಗೆ ಬೃಹತ್ ಪಾದಯಾತ್ರೆ ಮಾಡಲಾಗುವುದು.
– ವಿನಾಯಕ ಪ್ರಭು ವಾರಂಬಳ್ಳಿ, ಸಮಿತಿ ಕಾರ್ಯದರ್ಶಿ
ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ಗೊರದಳ್ಳಿ, ಸತೀಶ್ ಕೊಳಗಿ, ಸದಸ್ಯರುಗಳಾದ ಮಂಜುನಾಥ್, ನವೀನ್, ರಮೇಶ್, ಯೋಗೇಂದ್ರ, ಶಂಕರಪ್ಪ ಗೌಡ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.