RIPPONPETE ; ಹವಾಮಾನ ವೈಪರಿತ್ಯದಿಂದಾಗಿ ಅಕಾಲಿಕವಾಗಿ ಮಳೆಬಿದ್ದ ಪರಿಣಾಮ ಭತ್ತದ ಬೆಳೆ ಸಂಪೂರ್ಣವಾಗಿ
ನೆಲ ಕಚ್ಚಿದ್ದು ರೈತ ಸಮೂಹ ದಿಕ್ಕು ತೋಚದ ಸ್ಥಿತಿ ತಲುಪಿದ್ದಾರೆ.
ಶುಕ್ರವಾರ ರಾತ್ರಿ ದಿಢೀರ್ ಸುರಿದ ಮಳೆಯಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭತ್ತದ ಫಸಲು ಸಂಪೂರ್ಣವಾಗಿ ನೆಲಕ್ಕೆ ಉರುಳಿ ಚಾಪೆ ಹಾಸಿದಂತಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ ಎಂದು ರೈತರು ತಮ್ಮ ಅಳಲನ್ನು ಮಾಧ್ಯಮದವರ ಬಳಿ ವ್ಯಕ್ತಪಡಿಸಿದರು.
ಹುಂಚ-ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಕೋಡೂರು, ಹಿಂಡ್ಲೆಮನೆ, ಕೋಟೆತಾರಿಗ, ಬೇಹಳ್ಳಿ, ಹುಗುಡಿ, ಮಳಲಿಕೊಪ್ಪ, ಕರಿಗೆರಸು, ಕುನ್ನೂರು, ನಾಗರಹಳ್ಳಿ, ಮಾರುತಿಪುರ ಬಟ್ಟೆಮಲ್ಲಪ್ಪ, ಹರತಾಳು, ನೆವಟೂರು, ಬಾಳೂರು, ಹಾಲುಗುಡ್ಡೆ, ಆಲವಳ್ಳಿ, ಮಾದಾಪುರ, ಮಸರೂರು, ಹಾರೋಹಿತ್ತಲು, ಬಸವಾಪುರ ಬೆಳ್ಳೂರು, ಜಂಬಳ್ಳಿ, ಕೊಳವಳ್ಳಿ, ಬಿದರಹಳ್ಳಿ, ಕಲ್ಲೂರು, ಕಲ್ಲುಕೊಪ್ಪ, ಸಂಪಳ್ಳಿ, ಜಂಬಳ್ಳಿ, ಹೆದ್ದಾರಿಪುರ, ಇನ್ನಿತರ ಕಡೆಗಳಲ್ಲಿ ಭಾರಿ ಮಳೆಯಿಂದಾಗಿ ಕಟಾವು ಮಾಡಲಾದ ಭತ್ತದ ಬೆಳೆ ದಾಸ್ತಾನು ಮಾಡಲಾಗದೇ ಮಳೆಯಲ್ಲಿ ಒದ್ದೆಯಾಗುವಂತಾಗಿದ್ದರೆ ಇನ್ನೂ ಹಲವು ಕಡೆಯಲ್ಲಿ ಭತ್ತ ಸಂಪೂರ್ಣವಾಗಿ ನೆಲಕ್ಕೆ ಉರುಳಿ ಚಾಪೆ ಹಾಸಿದಂತಾಗಿದೆ ಎಂದರು.
ಸಾಲಮನ್ನಾಕ್ಕೆ ಆಗ್ರಹ :
ಚಂಡಮಾರುತದಿಂದಾಗಿ ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದಾಗಿ ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದ್ದು ಇದರಿಂದಾಗಿ ಸಹಕಾರ ಸಂಘದಲ್ಲಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಲಾದ ಬೆಳೆ ಸಾಲವನ್ನು ತೀರಿಸುವುದು ಹೇಗೆ ಎಂಬ ಚಿಂತೆ ಕಾಡುವಂತಾಗಿದ್ದು ತಕ್ಷಣ ರಾಜ್ಯ ಸರ್ಕಾರ ಸಾಲಮನ್ನಾ ಮಾಡುವ ಮೂಲಕ
ಪರಿಹಾರವನ್ನು ನೀಡಬೇಕು ಎಂದು ರೈತಮುಖಂಡರಾದ ಈಶ್ವರಪ್ಪಗೌಡ ಕುಕ್ಕಳಲೇ, ಮುಡುಬ ಧರ್ಮಪ್ಪ, ಕಲ್ಮಕ್ಕಿ ಸುಗಂಧರಾಜ್, ಬಿ.ಟಿ.ತೀರ್ಥಪ್ಪ ಬಿದರಹಳ್ಳಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪರಿಹಾರ ನೀಡಿ :
ಭತ್ತವನ್ನು ನಷ್ಟದ ಬೆಳೆ ಎಂದೇ ಕರೆಯಲಾಗುತ್ತದೆ. ದುಬಾರಿ ಕೂಲಿಯ ನಡುವೆ ಗದ್ದೆ ಕೆಲಸಕ್ಕೆ ಜನರು ಸಿಗುವುದೇ ಕಷ್ಟವಾಗಿದೆ. ಹೇಗೋ ಕಷ್ಟಪಟ್ಟು ಭತ್ತ ಬೆಳೆದರೆ ಈಗ ಮಳೆಯಿಂದ ಎಲ್ಲವೂ ನೆಲಕ್ಕಚ್ಚಿದೆ. ಭತ್ತ ಬೆಳೆಗಾರರಲ್ಲಿ ಬಹುತೇಕರು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು ಸರ್ಕಾರ ಬೆಳೆಗಾರರಿಗೆ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.