ಹೊಸನಗರ : ‘ಅಷ್ಟವಿಧ ಪೂಜಾ ವಿಧಾನದಿಂದ ಧಾರ್ಮಿಕ ಪರಿಸರ ನಿರ್ಮಾಣಗೊಳ್ಳುವುದು. ಸದಾ ತ್ರಿಕರಣಪೂರ್ವಕ ಧಾರ್ಮಿಕ ಶ್ರದ್ಧೆ-ಭಕ್ತಿಯಿಂದ ಪ್ರತಿಯೋರ್ವರ ಜೀವನವೂ ಪಾವನಗೊಳ್ಳುವುದು’ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಶ್ರೀ ಜೈನ ಮಠದ ಪೀಠಾಧೀಶ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಶ್ರಾವಣ ಮಾಸದ 2ನೇ ಸಂಪತ್ ಶುಕ್ರವಾರದಂದು ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಅಭೀಷ್ಠವರಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ನೆರವೇರಿದ ಆಗಮೋಕ್ತ ಪೂಜಾ ವಿಧಿ-ವಿಧಾನದ ಬಳಿಕ ಮಂಗಲ ಪ್ರವಚನದಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ ವರೂರು ಜೈನ ಕ್ಷೇತ್ರದ ಪರಮಪೂಜ್ಯ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಮಹಾಸ್ವಾಮೀಜಿಗಳವರು ಉಪಸ್ಥಿತರಿದ್ದರು.

ಶ್ರೀ ವರಮಹಾಲಕ್ಷ್ಮೀ ಪೂಜೆಯಲ್ಲಿ ಊರ ಪರವೂರ ಭಕ್ತರು ಉಡಿ-ಸೀರೆ-ಹರಕೆ-ಕಾಣಿಕೆ ಸಮರ್ಪಿಸಿ, ಇಷ್ಟಾರ್ಥ ನೆರವೇರಲು ಪ್ರಾರ್ಥಿಸಿದರು. ವಿವಿಧ ಹೂವು, ಹಣ್ಣು, ಸವಿ ನೈವೇದ್ಯಗಳನ್ನು ಅರ್ಪಿಸಲಾಯಿತು. ಶ್ರೀಗಳವರು ಶ್ರೀಫಲ ಮಂತ್ರಾಕ್ಷತೆ ನೀಡಿ, ಆಶೀರ್ವದಿಸಿದರು.

ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ, ಶ್ರೀ ನಾಗಸನ್ನಿಧಿಯಲ್ಲಿ ಪೂರ್ವಪರಂಪರೆಯಂತೆ ಪೂಜೆಗಳನ್ನು ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ನೆರವೇರಿಸಲಾಯಿತು.

ಪೂಜಾ ಮತ್ತು ಆಹಾರದಾನದ ಸೇವಾಕರ್ತರಾಗಿ ಅಭಿನಂದನ್ ಪಾಟೀಲ್, ಉತ್ತಮ್ ಪಾಟೀಲ್ ಅರಿಹಂತ ಪರಿವಾರ, ಬೋರವಾಂವ್ ಉಪಸ್ಥಿತರಿದ್ದರು.

ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವಿಜಯಕುಮಾರ್ ಪಾಟೀಲ್ ಮತ್ತಿತರ ಗಣ್ಯರು ದರ್ಶನ ಪಡೆದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಾಶ ನೇ. ಮಗದುಮ್ಮ ಹಾಗೂ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್ ಸರ್ವರನ್ನು ಸ್ವಾಗತಿಸಿದರು.




