ರಿಪ್ಪನ್‌ಪೇಟೆ : ಗ್ರಾಮೀಣ ಭಾಗದ ಮಹಿಳೆಯರು ಮನೆಯಲ್ಲಿ ನಿರಂತರ ಅಡುಗೆ ಕೆಲಸದಲ್ಲಿ ಮುಳುಗಿರುವ ಸಂದರ್ಭದಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಳ್ಳಲು ಅವಕಾಶ ನೀಡುವ ಕಾರ್ಯಕ್ರಮವು ತೀರ್ಥಹಳ್ಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿ.ಸಿ.ಟ್ರಸ್ಟ್ ಅರಳಸುರಳಿ ವಲಯದ ಹುಂಚದಕಟ್ಟೆ ಶ್ರೀಮಾತಾ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಮಹಿಳೆಯರಿಗೆ ಕೆಸರುಗದ್ದೆ ಆಟೋಟ ಕಾರ್ಯಕ್ರಮವು ವಿಶೇಷ ಆಕರ್ಷಣೆ ಹೊಂದಿತು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಮುರುಳಿಧರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಹೆಗ್ಗಡೆಯವರ ಕನಸಿನ ಭಾಗವಾಗಿರುವ ಈ ಯೋಜನೆಯು, ಗ್ರಾಮೀಣ ಮಹಿಳೆಯರು ದಿನನಿತ್ಯದ ಜಂಜಾಟದಿಂದ ಹೊರಬಂದು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಅಂತರಂಗದ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಮಹಿಳೆಯರು ತಮ್ಮಲ್ಲಿ ಇರುವ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಆತ್ಮವಿಶ್ವಾಸ ಮತ್ತು ಮಾನಸಿಕ ದೃಢತೆಯನ್ನು ಗಳಿಸುವುದರ ಜೊತೆಗೆ, ಶಿಸ್ತು, ಸಮಯಪಾಲನೆ ಹಾಗೂ ತಂಡದ ಮನೋಭಾವದ ಮಹತ್ವವನ್ನು ಅರಿತುಕೊಳ್ಳುವ ಉತ್ತಮ ವೇದಿಕೆಯಾಗಿ ಈ ಕಾರ್ಯಕ್ರಮ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಕ್ರೀಡೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಅವರ ವೈಯಕ್ತಿಕ ವಿಕಾಸಕ್ಕೆ ಮಾತ್ರವಲ್ಲ, ಸಮಾಜದಲ್ಲಿ ಸಮಾನಾವಕಾಶ ಮತ್ತು ಸಬಲೀಕರಣಕ್ಕೆ ಸಹ ಕಾರಣವಾಗುತ್ತದೆ. ಸರ್ಕಾರದ ಮಹಿಳಾ ಸಬಲೀಕರಣ ಯೋಜನೆಗಳ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆ ಮತ್ತು ವ್ಯಾಪಾರಿಕ ಜ್ಞಾನವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹುಂಚದಕಟ್ಟೆ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಮಹಿಳಾ ಕ್ರೀಡೆಗಳು ದೈಹಿಕ ಸಾಮರ್ಥ್ಯ, ಆತ್ಮವಿಶ್ವಾಸ, ಆರೋಗ್ಯ ಮತ್ತು ನಾಯಕತ್ವ ಗುಣಗಳನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಶಂಕರಳ್ಳಿ ಹಾಲಪ್ಪ, ಪ್ರವೀಣ್ ಅಂಗಡಿ, ನಾಗೇಶ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಜಗದೀಶ ಅಲಸೆ, ಜೆ.ಎಂ.ಎಸ್.ವೈ, ಬಾಲಚಂದ್ರಕೃಷ್ಣ, ಅರಳಸುರಳಿ ಧರ್ಮಸ್ಥಳ ಯೋಜನೆಯ ವಲಯ ಮೇಲ್ವಿಚಾರಕ ನಾಗರಾಜ, ತಾಲ್ಲೂಕು ಸಮನ್ವಯಾಧಿಕಾರಿ ಶ್ವೇತಾ, ಸೇವಾ ಪ್ರತಿನಿಧಿ ನೇತ್ರಾವತಿ, ಜ್ಞಾನ ವಿಕಾಸ ಕಾರ್ಯಕ್ರಮ ಸದಸ್ಯ ಗೌರಮ್ಮ, ಒಕ್ಕೂಟದ ಅಧ್ಯಕ್ಷೆ ಪುಷ್ಪಾ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

