HOSANAGARA ; ಬ್ರಾಹ್ಮಿ ಮಹೂರ್ತದಲ್ಲಿ ಸ್ನಾನ, ಪ್ರಾತಃ ಸಂಧ್ಯಾದಿ ಕರ್ಮಗಳನ್ನು ಅನುಷ್ಠಾನ ಕೈಗೊಳ್ಳುವ ಮಂದಿಗೆ ರೋಗರುಜಿನಾಧಿಗಳು ಬಾರದು. ಅಂತವರಿಗೆ ದೇವತೆಗಳ ಅನುಗ್ರಹ ದೊರೆತು ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂಬ ಸಂಗತಿ ನಮ್ಮ ಋಷಿಮುನಿ ಪರಂಪರೆಯಿಂದ ನಮಗೆ ಬಂದ ಬಳುವಳಿ ಆಗಿದೆ ಎಂದು ಪುರೋಹಿತ ದೇವೇಂದ್ರ ಶರ್ಮ ತಿಳಿಸಿದರು.
ಜಯನಗರದಲ್ಲಿ ತಾಲೂಕು ವಿಶ್ವಕರ್ಮ ಮಹಾಸಭಾ ಹಮ್ಮಿಕೊಂಡಿದ್ದ ವಿಶ್ವಕರ್ಮ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ವಿಶೇಷ ಉಪನ್ಯಾಸ ನೀಡಿದರು.
ಮನುಷ್ಯನಾಗಿ ಜನಿಸಿದ ಮೇಲೆ ಸಂಸ್ಕಾರಗಳು ಅಗತ್ಯ. ವಿಶ್ವಕರ್ಮಿಗಳು ಜಪ, ತಪ, ಪೂಜಾನುಷ್ಠಾನದಿಂದ ಮಾತ್ರವೇ ನೆಮ್ಮದಿ ಬದುಕು ಕಾಣಲು ಸಾಧ್ಯವಿದೆ ಎಂದರು.
ಕೊಡುಗೈ ದಾನಿ ರಾಮಚಂದ್ರಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಕಣಿವೆಬಾಗಿಲು ಸುಬ್ರಹ್ಮಣ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿಶ್ವಕರ್ಮಿಯರು ಪ್ರಾತಃ ಸ್ಮರಣೀಯರು. ಅವರಲ್ಲಿದ ಜಗತ್ತನ್ನು ಊಹಿಸಲು ಆಗದು. ವಿವಿಧ ಕರಕುಶಲ ಕಾರ್ಯಗಳಲ್ಲಿ ಅವರು ಸಿದ್ದಹಸ್ತರು. ಬೇಲೂರು-ಹಳೇಬೀಡು, ಅಯೋಧ್ಯೆ, ಮಥುರ ಶಿಲ್ಪಕಲೆಗಳೇ ಅದಕ್ಕೆ ಸಾಕ್ಷಿ. ವಿಶ್ವಕರ್ಮ ಚಿಕ್ಕ ಸಮಾಜವಾದರೂ ಇಡೀ ವಿಶ್ವಕ್ಕೆ ಮಾದರಿ ಹಾಗು ಅನಿವಾರ್ಯವಾಗಿದೆ. ಆದರೆ, ಸಂಘಟನೆ ಅತಿ ಮುಖ್ಯವಾಗಿದೆ. ಕಾರಣ ಸಂಘಟನೆಯಲ್ಲಿ ದೇವರನ್ನು ಕಾರಣ ಸನಾತನ ಸಂಸ್ಕೃತಿ ನಮ್ಮದು. ಶಿಕ್ಷಣದ ಜೊತೆಗೆ ವಿವೇಕ ಮೈಗೂಡಿಸಿ ಕೊಂಡಾಗ ಮಾತ್ರ ಸಮಾಜ ಸುಸ್ಥಿತಿ ಕಾಣಬಹುದಾಗಿದೆ ಎಂದರು.
ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಮಾತನಾಡಿ, ದಾನಿಗಳನ್ನು ಗುರುತಿಸಿ ಪ್ರೋತ್ಸಾಹಿಸಿವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ವಿಶ್ವಕರ್ಮ ಸಮಾಜ ಮುಂಚೂಣಿಯಲ್ಲಿದ್ದು, ರಾಜಕಾರಣ ಹೊರತು ಪಡಿಸಿ, ಅಗತ್ಯ ಸಂದರ್ಭಗಳಲ್ಲಿ ವೈಯಕ್ತಿಕ ಸಹಾಯ ನೀಡುವ ಭರವಸೆ ನೀಡಿದರು.
ಇದೇ ವೇಳೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಜೊತೆಗೆ ಕ್ರೀಡಾಕೂಟದಲ್ಲಿ ವಿಜೇತ ಸ್ಪರ್ಧಾಳುಗಳಿಗೆ ಆತ್ಮೀಯ ಸನ್ಮಾನ ನೆರವೇರಿತು.
ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ದೇವದಾಸ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ, ಮಂಜುಳಾ ಗರ್ತಿಕೆರೆ, ಕಲ್ಲುಗುಡ್ಡೆ ಯಲ್ಲಪ್ಪ ಆಚಾರ್ಯ, ಪ್ರಭಾಕರ ಆಚಾರ್ಯ, ಬಾಬು ಆಚಾರ್ಯ ಮೊದಲಾದವರು ಇದ್ದರು.
ಶಿಲ್ಪ ಪ್ರಾರ್ಥಿಸಿ, ಅನುಷಾ ಸ್ವಾಗತಿಸಿದರು. ಸಂತೋಷ್ ಹಾಗು ಅಂಬಿಕಾ ನಾಗರಾಜ್ ಆಚಾರ್ಯ ನಿರೂಪಿಸಿ, ಸುರೇಶ್ ಆಚಾರ್ಯ ವಂದಿಸಿದರು.