RIPPONPETE ; ಖಾಸಗಿ ಹಣಕಾಸು ಲೇವಾದೇವಿದಾರರು ಮತ್ತು ಪಾನ್ ಬ್ರೋಕರ್ ನವರು ಕಳೆದ ಹಲವಾರು ವರ್ಷಗಳಿಂದ ತೆರೆಮರೆಯಲ್ಲಿ ಅನಧೀಕೃತವಾಗಿ ಬಡ್ಡಿವ್ಯವಹಾರ ನಡೆಸುತ್ತಿದ್ದು ಜ್ಯೂವೆಲರಿ ಅಂಗಡಿಯವರು ಪಾನಬ್ರೋಕರ್ ಬಂಗಾರದ ಅಡಮಾನ ಸಾಲ ನೀಡಿ ದುಬಾರಿ ಬಡ್ಡಿ ಪಡೆಯುವ ಮೂಲಕ ಗ್ರಾಹಕರನ್ನು ವಂಚಿಸಿ ಪರಾರಿಯಾದ ಪ್ರಸಂಗಗಳು ನಡೆದಿದ್ದರೂ ಕೂಡಾ ಇಲಾಖೆವರು ಗೊತ್ತಿಲ್ಲದವರಂತೆ ಸುಮ್ಮನೆ ಕುಳಿತ್ತಿದ್ದಾರೆಂದು ಸಾರ್ವಜನಿಕರಲ್ಲಿ ಸುದ್ದಿಗೆ ಗ್ರಾಸವಾಗಿದೆ.
ಬೆಂಗಳೂರು ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್‌ನವರ ರಾಜ್ಯದ ಎಲ್ಲಾ ಪೊಲೀಸ್ ಅಧಿಕ್ಷಕರಿಗೆ ಸುತ್ತೋಲೆ ಹೊರಡಿಸಿದ್ದು ಅಕ್ರಮ ಬಡ್ಡಿ ದಂಧೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅದೇಶವನ್ನು ಹೊರಡಿಸಲಾಗಿದ್ದರು ಕೂಡಾ ಇಲ್ಲಿನ ಹಲವು ಜ್ಯೂವೆಲರಿ ಅಂಗಡಿಯವರಿಗೆ ಯಾವುದೇ ಸುತ್ತೋಲೆಗಳ ಅರಿವಿಲ್ಲದೆ ರಾಜಾರೋಷವಾಗಿ ನಡೆಸುತ್ತಿದ್ದಾರೆ. ಈ ಬಗ್ಗೆ ಇಲ್ಲಿನ ಸಾಗರ ರಸ್ತೆಯ ಜ್ಯೂವೆಲರ‍್ಸ್ ಅಂಗಡಿಯವರು ಬಂಗಾರವನ್ನು ಅಡವಿಟ್ಟುಕೊಂಡು ದುಬಾರಿ ಬಡ್ಡಿ ನೀಡಿ ಇಲ್ಲವಾದರೆ ಬಂಗಾರ ಕೊಡುವುದಿಲ್ಲ ಎಂದು ಗ್ರಾಹಕರಿಗೆ ಹೆದರಿಸುತ್ತಾರೆಂದು ಠಾಣೆಗೆ ದೂರು ಸಹ ನೀಡಿರುವ ಉದಾಹರಣೆಗಳಿವೆ. ಅಲ್ಲದೆ ತಾವು ಇಟ್ಟ ಬಂಗಾರ ಇಲ್ಲ ಎಂದು ಹೇಳಿ ಗ್ರಾಹಕರನ್ನು ಭಯಭೀತರನ್ನಾಗಿಸಿದ ಘಟನೆ ಸಹ ಠಾಣೆ ಕಟ್ಟೆ ಹತ್ತುವಂತೆ ಮಾಡಿ ನಂತರ ಗ್ರಾಹಕರಿಗೆ ಬಂಗಾರವನ್ನು ಇಟ್ಟುಕೊಂಡ ಮೊತ್ತದ ಮೇಲೆ ಶೇಕಡಾ 5 ಮತ್ತು 10 ರಷ್ಟು ಬಡ್ಡಿಯ ಮೇಲೆ ತೀರ್ಮಾನ ಮಾಡಿ ಅಡಮಾನ ಇಟ್ಟ ಬಂಗಾರವನ್ನು ಗ್ರಾಹಕರಿಗೆ ಕೊಡಿಸಿರುವ ಘಟನೆಗಳು ನಡೆದಿದ್ದು ಆದರೂ ಕೂಡಾ ಇಲ್ಲಿನ ಹಲವು ಜ್ಯೂವೆಲರಿಗಳಲ್ಲಿ ಯಾರ ಭಯವೂ ಇಲ್ಲದೆ ಅವ್ಯಾಹತವಾಗಿ ಈ ಮೀಟರ್ ಬಡ್ಡಿ ವ್ಯವಹಾರದ ದಂಧೆ ನಡೆಯುತ್ತಿದೆ.
ಇತ್ತೀಚೆಗೆ ತೀರ್ಥಹಳ್ಳಿ ರಸ್ತೆಯಲ್ಲಿನ ಬಂಗಾರದ ಅಂಗಡಿಯಲ್ಲಿ 40 ಗ್ರಾಂ ಬಂಗಾರದ ಚೈನ್ ಅನ್ನು ವಾಶ್ ಮಾಡಿಕೊಡುವಂತೆ ಕೊಟ್ಟರೆ ಬಂಗಾರದ ಜೈನ್ ಸರದೊಂದಿಗೆ ಅಂಗಡಿ ಮಾಲೀಕ ಕಾಣೆಯಾಗಿದ್ದಾನೆ.
ಇನ್ನೂ ಕೆಲವು ಅನಧಿಕೃತ ಖಾಸಗಿ ಫೈನಾಸ್ಸ್ ಗಳು ನೋಟ್ ಬುಕ್ ಮೂಲಕ ಲೇವಾದೇವಿ ವ್ಯವಹಾರ ನಡೆಸುತ್ತಾ ಇದ್ದು ಸಂಜೆಯಾಗುತ್ತಿದ್ದಂತೆ ಸರತಿ ಸಾಲಿನಲ್ಲಿ ಉಳಿತಾಯದ ಹಣ (ಪಿಗ್ಮಿ) ಸಂಗ್ರಹಿಸುವಂತೆ ಕೊಟ್ಟ ಹಣವನ್ನು ಪಿಗ್ಮಿ ನಿತ್ಯನಿಧಿ ಠೇವಣಿ ಹಣ ಸಂಗ್ರಹಿಸುವವರಂತೆ ಬರುತ್ತಾರೆಂದು ಹಲವರು ಗೊಣಗುವುದು ಕಾಣಬಹುದಾಗಿದೆ.
ಒಟ್ಟಾರೆಯಾಗಿ ರಿಪ್ಪನ್‌ಪೇಟೆಯ ಸುತ್ತಮುತ್ತ ಗ್ರಾಮಗಳಲ್ಲಿ ಖಾಸಗಿ ಅನಧಿಕೃತ ಹಣಕಾಸು ಸಂಸ್ಥೆಯವರ ಮತ್ತು ಪಾನ್‌ಬ್ರೋಕರ್ ವ್ಯವಹಾರದಿಂದಾಗಿ ಹೈರಾಣರಾಗಿ ಹೋಗಿರುವ ಗ್ರಾಹಕರಿಗೆ ನ್ಯಾಯ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಮುಂದಾಗುವುದೇ ಕಾದು ನೋಡಬೇಕಾಗಿದೆ.
ಇನ್ನಾದರೂ ಇಂತಹ ಅನಧಿಕೃತ ಪಾನ್ ಬ್ರೋಕರ್ ಮತ್ತು ಖಾಸಗಿ ಹಣಕಾಸು ಸಂಸ್ಥೆಯವರ ವ್ಯವಹಾರಕ್ಕೆ ಬ್ರೇಕ್ ಬೀಳುವುದೇ?