ಶಿವಮೊಗ್ಗ

ಮಲೆನಾಡಿನಲ್ಲಿ ಮುಂದುವರೆದ ಕಾಡಾನೆಗಳ ಹಾವಳಿ ; ವಿಪರೀತ ಬೆಳೆ ನಾಶ, ರೈತರ ಆಕ್ರೋಶ, ಸಿಸಿಎಫ್ ಕಚೇರಿಗೆ ಮುತ್ತಿಗೆ

ಶಿವಮೊಗ್ಗ ; ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ – ಸಂಘರ್ಷ ಇಂದು ನಿನ್ನೆಯದಲ್ಲ. ಕಳೆದ ಹಲವಾರು ವರ್ಷಗಳಿಂದ ಕಾಡು ಪ್ರಾಣಿಗಳ ಜೊತೆಗೆ ವಾಸವಿದ್ದಂತೆ. ಅದರಲ್ಲೂ ಆಗ್ಗಾಗ್ಗೆ ದಾಳಿ ಮಾಡುವ ಕಾಡಾನೆಗಳು ಮಾತ್ರ ವಿಪರೀತ ಸಂಕಷ್ಟಕ್ಕೆ ಸಿಲುಕಿಸುತ್ತವೆ. ರೈತರು ಕಷ್ಟಪಟ್ಟು ವರ್ಷಗಟ್ಟಲೆಯಿಂದ ಕಾಪಾಡಿಕೊಂಡು ಬಂದ ಬೆಳೆ ಕ್ಷಣಾರ್ಧದಲ್ಲಿ ನಾಶ ಮಾಡ್ತವೆ. ಅಷ್ಟಕ್ಕೂ ಮಲೆನಾಡಿನಲ್ಲಿ ಕಾಡಾನೆಗಳ ದಾಳಿಗೆ ರೈತರು ಕಂಗಾಲಾಗಿ ಹೋಗಿದ್ದು, ಸಿಸಿಎಫ್ ಕಚೇರಿಗೆ ಮುತ್ತಿಗೆ ಹಾಕಿದ್ರು. ಆನೆಗಳ ಹಾಗೂ ಅರಣ್ಯಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಮಲೆನಾಡು ಎಂದಾಕ್ಷಣ ಪ್ರಕೃತಿ ಶ್ರೀಮಂತಿಕೆ ಜೊತೆ ಕಾಡು ಪ್ರಾಣಿಗಳ ಉಪಟಳ ಕಣ್ಮುಂದೆ ಬರೋದು ಸಹಜ. ಅದರಂತೆ ಮಲೆನಾಡು ಜಿಲ್ಲೆಯಲ್ಲಂತೂ ಆನೆಗಳ ಉಪಟಳಕ್ಕೆ ರೈತರು ಹೈರಾಣಾಗಿ ಹೋಗಿದ್ದಾರೆ. ಹೀಗಾಗಿ, ಶಿವಮೊಗ್ಗ ಸಿಸಿಎಫ್ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದ್ದಾರೆ.

ಮಾಜಿ ಸಚಿವ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ನಗರದ ಶ್ರೀಗಂಧ ಕೋಠಿಯಲ್ಲಿರುವ ಸಿಸಿಎಫ್ ಕಚೇರಿ ಮುಂಭಾಗ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಆನೆ ದಾಳಿಯಿಂದ ರೈತರ ಬೆಳೆ ರಕ್ಷಿಸಿ ಎಂದು ಆಗ್ರಹಿಸಿರುವ ರೈತರು, ರೈತರ ಬೆಳೆ ನಾಶ ಮಾಡುತ್ತಿರುವ ಹಾಗೂ ರೈತರ ಜೀವ ಬಲಿ ಪಡೆಯುತ್ತಿರುವ ಆನೆಗಳನ್ನು ಸ್ಥಳಾಂತರಿಸಲು ಆಗ್ರಹಿಸಿದ್ದಾರೆ.

ಈಗಾಗಲೇ ಆನೆ ದಾಳಿಯಿಂದ ಅಪಾರ ನಷ್ಟವುಂಟಾಗಿದೆ. ಇದಕ್ಕೆ ಹಲವಾರು ಬಾರಿ ಪರಿಹಾರ ನೀಡುವಂತೆ ಆಗ್ರಹಿಸಲಾಗಿದ್ದರೂ ಇದುವರೆಗೂ ಪರಿಹಾರ ನೀಡಿಲ್ಲ ಅಂತಾ ಪ್ರತಿಭಟನಾಕಾರರು ಗರಂ ಆಗಿದ್ದಾರೆ.

ಇನ್ನು ಆನೆ ಸ್ಥಳಾಂತರಕ್ಕೆ ಅರಣ್ಯಾಧಿಕಾರಿಗಳು ನಿಗಾ ವಹಿಸುತ್ತಿಲ್ಲ ಎಂದು ಆರೋಪಿಸಿರುವ ರೈತರು, ಅರಣ್ಯಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸುತ್ತಿದ್ದರೂ ನಿರ್ಲಕ್ಷ್ಯ ವಹಿಸಿದ್ದು, ಕೂಡಲೇ ಆನೆಗಳನ್ನು ಸ್ಥಳಾಂತರಿಸಬೇಕೆಂದು ಆಗ್ರಹಿಸಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಈ ಕಾಡಾನೆಗಳ ದಾಳಿಯಿಂದಾಗಿ, ಪುರದಾಳು, ಸಿರಿಗೆರೆ, ಹೊಸನಗರ ಹಾಗೂ ಸಾಗರ ಭಾಗದ ಅನೇಕ ಗ್ರಾಮಗಳಲ್ಲಿ ರೈತರ ಬೆಳೆಗಳೆ ಉಳಿಯದಂತಾಗಿವೆ. ಅನೇಕರ ತೋಟ-ಹೊಲಗಳು ನಾಶವಾಗಿವೆ. ಅಡಿಕೆ ಹಾಗೂ ತೆಂಗಿನ ಮರಗಳು ಬುಡಮೇಲು ಮಾಡಿವೆ. ಜೊತೆಗೆ ಜೋಳ ಹಾಗೂ ಕಬ್ಬು ಬೆಳೆಗಳನ್ನು ನಾಶ ಮಾಡಿವೆ. ಇಷ್ಟಾದರೂ ಅರಣ್ಯ ಇಲಾಖೆ ಮೌನ ವಹಿಸಿದ್ದು, ಇಲಾಖೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/169rajdYB3/

ಒಟ್ಟಾರೆ, ಆನೆಗಳ ಬಗ್ಗೆ ಮಾಹಿತಿ ನೀಡಿದ್ರೂ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ರೈತರು, ಗ್ರಾಮಸ್ಥರು, ಆಕ್ರೋಶ ಹೊರಹಾಕಿದ್ದು, ಆನೆ ದಾಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು, ಈಗಲಾದ್ರು ಜಾಣ ನಿದ್ರೆಯಿಂದ ಎಚ್ಚೆತ್ತು ಇತ್ತ ಗಮನ ಹರಿಸುತ್ತಾರಾ ? ಕಾದು ನೋಡಬೇಕಿದೆ.

ಪ್ರಕೃತಿ ವಿಕೋಪ, ಅರಣ್ಯ ಇಲಾಖೆ ಕಿರುಕುಳ, ಉಳುವ ಭೂಮಿಗೆ ಹಕ್ಕುಪತ್ರವಿಲ್ಲದೆ ರೈತರು ಪರದಾಡುತ್ತಿದ್ದಾರೆ. ಈಗ ಕಾಡಾನೆಗಳು ಬೆಳೆ ಮತ್ತು ಜೀವಹಾನಿ ಮಾಡುತ್ತ ಕಂಟಕವಾಗಿವೆ.
– ಹರತಾಳು ಹಾಲಪ್ಪ, ಮಾಜಿ ಸಚಿವ

ಶಾಶ್ವತ ಪರಿಹಾರ ಸಿಗುವವರೆಗೆ ನಾವು ಹೋರಾಟ ಮುಂದುವರೆಸುತ್ತೇವೆ. ಅನೇಕ ರೈತರ ಮೇಲೆ ಆನೆಗಳು ದಾಳಿ ಮಾಡಿವೆ. ರೈತರ ಬದುಕಿನ ಜೊತೆಗೆ ಚೆಲ್ಲಾಟ ಬೇಡ, ರೈತ ರೊಚ್ಚಿಗೆದ್ದರೆ ಜನಪತಿನಿಧಿಗಳು ಊರು ಬಿಡುವ ಪರಿಸ್ಥಿತಿ ಬರುತ್ತದೆ. ರೈತರ ಸಹನೆಗೂ ಮಿತಿ ಇದೆ. ಅರಣ್ಯಾಧಿಕಾರಿಗಳು ಪಟಾಕಿ ಸಿಡಿಸಿ ಈ ಊರಿನಿಂದ ಆ ಊರಿಗೆ ಆನೆಗಳನ್ನು ಓಡಿಸುವ ನಾಟಕ ಮಾಡುತ್ತಿದ್ದಾರೆ. ಶಾಶ್ವತವಾಗಿ ಆನೆಗಳನ್ನು ಸ್ಥಳಾಂತರಿಸಬೇಕು. ಬೆಳೆಹಾನಿ ಪರಿಹಾರ ನೀಡಿ ರೈತರಿಗೆ ಧೈರ್ಯ ತುಂಬಬೇಕು. ಮೃತ ಮತ್ತು ಗಾಯಾಳು ರೈತರ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು.
– ವೀರೇಶ್ ಆಲವಳ್ಳಿ, ಹೊಸನಗರ ತಾ.ಪಂ. ಮಾಜಿ ಅಧ್ಯಕ್ಷ

ರೈತರು ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳು ಹಾಳು ಮಾಡುತ್ತಿವೆ. ಅಂತಹ ಪ್ರಾಣಿಗಳನ್ನು ಅರಣ್ಯ ಇಲಾಖೆಯವರು ಹಿಡಿದುಕೊಂಡು ಹೋಗಬೇಕು ಅಥವಾ ಬೆಳೆ ಹಾನಿ ಮಾಡುವಾಗ ಕಾಡುಪ್ರಾಣಿಗಳಿಗೆ ಗುಂಡು ಹೊಡೆಯಲು ರೈತರಿಗೆ ಅನುಮತಿ ಕೊಡಬೇಕು.
– ಆರಗ ಜ್ಞಾನೇಂದ್ರ, ಶಾಸಕ

ಈ ಸಂದರ್ಭ ಶಾಸಕ ಡಿ.ಎಸ್. ಅರುಣ್,
ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಕೆ.ಬಿ.
ಅಶೋಕ್ ನಾಯ್ಕ್, ಟಿ.ಡಿ. ಮೇಘರಾಜ್,
ಹೊನಗೋಡು ರತ್ನಾಕರ್, ವಿನ್ಸೆಂಟ್ ರೋಡ್ರಿಗಸ್, ದತ್ತಾತಿ, ಮೋಹನ್ ರೆಡ್ಡಿ, ಸುಮಾ ಭೂಪಾಳಂ, ಹರೀಶ್, ನಾಗಾರ್ಜುನಸ್ವಾಮಿ, ಸತೀಶ್ ಎನ್., ಉಮೇಶ್ ಕಡೆಗದ್ದೆ, ದೇವರಾಜ್ ಬಸವಾಪುರ, ಆದರ್ಶ್ ಕಲ್ಲೂರು, ದಿವಾಕರ ಬೆಳ್ಳೂರು ಮೊದಲಾದವರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]