ರಿಪ್ಪನ್‌ಪೇಟೆ ; ಮೈಕ್ರೊ ಫೈನಾನ್ಸ್ ಮತ್ತು ಖಾಸಗಿ ಲೇವಾದೇವಿದಾರರ ಅಟ್ಟಹಾಸಕ್ಕೆ ಅಂತ್ಯ ಹಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿದ್ದ ಸುಗ್ರೀವಾಜ್ಞೆ ಜಾರಿಯಿಂದಾಗಿ ಮೀಟರ್ ಬಡ್ಡಿದಾರರಿಗೆ ಕಡಿವಾಣ ಬೀಳುವುದು ಎಂದು ಭಾವಿಸಿರುವ ಹಲವು ಸಾಲಗಾರರು ನಿಟ್ಟುಸಿರುವ ಬಿಡುವುದರಲ್ಲಿದ್ದರೆ ರಿಪ್ಪನ್‌ಪೇಟೆಯ ಸುತ್ತಮುತ್ತಲಿನ ಖಾಸಗಿ ಲೇವಾದೇವಿದಾರರಿಗೆ ಮಾತ್ರ ಇದಾವುದೇ ಕಟ್ಟು ನಿಟ್ಟಿನ ಆದೇಶ ಲೆಕ್ಕಕ್ಕಿಲ್ಲದಂತೆ ಕಾಣುತ್ತಿದೆ.
ಹೌದು, ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯ ಅಮೃತ, ಹೆದ್ದಾರಿಪುರ, ಅರಸಾಳು, ಕೆಂಚನಾಲ, ಬೆಳ್ಳೂರು, ಕೋಡೂರು, ಹುಂಚ ಗ್ರಾಮಗಳಲ್ಲಿ ಅನಧಿಕೃತ ಖಾಸಗಿ ಲೇವಾದೇವಿದಾರರು ಐಶಾರಾಮಿ ಜೀವನ ನಡೆಸುವ ಮೂಲಕ ಬಡವರ ರಕ್ತ ಹೀರುವ ಕೆಲಸದಲ್ಲಿ ಮಗ್ನರಾಗಿದ್ದು ಅನಾನುಕೂಲದ ಕಾರಣದಿಂದಾಗಿ ಹಲವರು ಖಾಸಗಿ ಹಣಕಾಸು ಸಂಸ್ಥೆಯವರಲ್ಲಿ ತಮ್ಮ ಜಮೀನು, ಮನೆ, ಚಿನ್ನಾಭರಣ ಅಡವಿಟ್ಟು ಸಾಲ ಮಾಡಿ ತೀರುವಳಿ ಮಾಡಲಾಗದೆ ಲೇವಾದೇವಿದಾರರ ದೌರ್ಜನ್ಯಕ್ಕೆ ಒಳಗಾಗುವಂತಾಗಿ ಪಡಬಾರದ ಕಷ್ಟ ಅನುಭವಿಸುವಂತಾಗಿದ್ದಾರೆ.
ಶಿವಮೊಗ್ಗ, ಶಿಕಾರಿಪುರ, ಭದ್ರಾವತಿ ಹೀಗೆ ರಿಪ್ಪನ್‌ಪೇಟೆ ಸುತ್ತಮುತ್ತಲಿನ ಅಮೃತ, ಹೆದ್ದಾರಿಪುರ, ಕೆಂಚನಾಲ, ಅರಸಾಳು, ಬೆಳ್ಳೂರು, ಕೋಡೂರು, ಹುಂಚ, ಬಿಳಕಿ, ಕೋಟೆತಾರಿಗ, ಹರತಾಳು ಇನ್ನಿತರ ಕಡೆಯಿಂದ ಲೇವಾದೇವಿದಾರರು ಸರತಿ ಸಾಲಿನಲ್ಲಿ ಬಂದು ಕೊಟ್ಟ ಸಾಲವನ್ನು ಬಲತ್ಕಾರವಾಗಿ ವಸೂಲಿ ಮಾಡುತ್ತಿದ್ದಾರೆ. ಸಾಲ ವಸೂಲಿಗೆ ಬರುವ ಫೈನಾನ್ಸ್ ಕಂಪನಿಯವರು ಪೊಲೀಸ್ ಇನ್ನಿತರ ಕೆಂಗಣ್ಣಿಗೆ ಎಲ್ಲಿ ಬೀಳುತ್ತೇವೆಯೋ ಎಂಬ ಭಯದಲ್ಲಿ ಮುಖಕ್ಕೆ ಹೆಲ್ಮೆಟ್ ಮತ್ತು ಕಪ್ಪು ಬಟ್ಟೆ ಮತ್ತು ಮಾಸ್ಕ್ ಕಟ್ಟಿಕೊಂಡು ಕೆಲವು ಆಯಕಟ್ಟಿನ ಸ್ಥಳದಲ್ಲಿ ತಮ್ಮ ಮೀಟರ್ ಬಡ್ಡಿ ದಂಧೆಯನ್ನು ನಡೆಸುತ್ತಿರುವುದು ಇಲ್ಲಿನ ಜನತೆಗೆ ಗುಟ್ಟಾಗಿ ಉಳಿದಿಲ್ಲ.
ಮಾಧ್ಯಮಗಳಲ್ಲಿ ಮೀಟರ್ ಬಡ್ಡಿ ಸಂಬಂಧ ಸುದ್ದಿಗಳು ಪ್ರಕಟವಾದರೆ ಸಾಕು ಎರಡ್ಮೂರು ದಿನಗಳು ಮಾತ್ರ ಮೀಟರ್ ಬಡ್ಡಿದಾರರು ಪೇಟೆ, ಪಟ್ಟಣಕ್ಕೆ ಬಾರದೇ ಗೌಪ್ಯ ಸ್ಥಳ ಸೇರುತ್ತಾರೆ. ನಂತರ ‘ಹಳೇ ಗಂಡನ ಪಾದವೇ ಗತಿ’ ಎಂಬಂತೆ ತಮ್ಮ ಆಟ್ಟಹಾಸವನ್ನು ಆರಂಭಿಸುವ ಮೂಲಕ ಕೊಟ್ಟ ಸಾಲವನ್ನು ವಸೂಲಿ ಮಾಡುವ ನೆಪದಲ್ಲಿ ಬಡವರನ್ನು ಸುಲಿಗೆ ಮಾಡುತ್ತಿದ್ದಾರೆ. ಈ ಕುರಿತು ಠಾಣೆಗೆ ದೂರು ನೀಡಿದರೆ ನಿಮಗೆ ಏನು ಮಾಡುತ್ತೇವೆಂದು ಸಹ ಬೆದರಿಕೆ ಹಾಕುತ್ತಾರೆಂಬ ಕೂಗು ಕೇಳಿ ಬರುತ್ತಿದೆ.
ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಖಾಸಗಿ ಲೇವಾದೇವಿದಾರರ ಮನೆಯ ಮೇಲೆ ಪೊಲೀಸ್ ಇಲಾಖೆ ದಾಳಿ ಮಾಡಿದ ಬೆನ್ನಲೇ ನಮ್ಮೂರಿನಲ್ಲಿ ಈ ರೀತಿಯಲ್ಲಿ ಅನಧಿಕೃತವಾಗಿ ಬಡ್ಡಿ ವ್ಯವಹಾರ ನಡೆಸುವವರ ಮನೆಯ ಮೇಲೆ ದಾಳಿ ಮಾಡಬಹುದೆಂಬ ಭಾವನೆಯಲ್ಲಿ ಹಲವರು ಕಾದು ನೋಡುವಂತಾಗಿದ್ದರೆ, ಇಲ್ಲಿನ ಪೊಲೀಸರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಇನ್ನಾದರೂ ಜಿಲ್ಲಾ ರಕ್ಷಣಾಧಿಕಾರಿಗಳು ಇತ್ತ ಗಮನಹರಿಸಿ ಮಲೆನಾಡಿನ ವ್ಯಾಪ್ತಿಯ ರಿಪ್ಪನ್‌ಪೇಟೆಯಲ್ಲಿ ಮೀಟರ್ ಬಡ್ಡಿ ಅಡ್ಡೆಯ ಕೇಂದ್ರ ಸ್ಥಾನದಂತಾಗಿರುವ ರಿಪ್ಪನ್‌ಪೇಟೆ ವ್ಯಾಪ್ತಿಯ ಗ್ರಾಮಗಳಲ್ಲಿ ತಲೆ ಎತ್ತಿ ರಾರಾಜಿಸುತ್ತಿರುವ ಐಶಾರಾಮಿ ಬಡ್ಡಿ ದಂಧೆಗೆ ಕಡಿವಾಣ ಹಾಕುವ ಮೂಲಕ ಬೀದಿಗೆ ಬೀಳುವ ಎಷ್ಟೋ ಕುಟುಂಬಗಳನ್ನು ರಕ್ಷಣೆ ಮಾಡಲು ಮುಂದಾಗುವರೇ ಕಾದು ನೋಡಬೇಕಾಗಿದೆ.