ರಿಪ್ಪನ್‌ಪೇಟೆ ; ಹಿಂದುಳಿದ ಸಮಾಜವಾಗಿರುವ ಕುಂಬಾರ ಜನಾಂಗದವರು ಸಂಘಟಿತರಾಗಿ ತಮ್ಮ ಕುಲಕಸುಬನ್ನು ಯಾವುದೇ ಕೀಳರಿಮೆ ಇಲ್ಲದೆ ನಿರ್ವಹಿಸುವಂತಾಗಬೇಕು ಹಾಗೂ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ಸಂಸ್ಕಾರಯುತ ಶಿಕ್ಷಣವನ್ನು ಕೊಡಿಸಿ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗುವಂತೆ ಮಾಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಹಿರೇಮೈಥೆ ಗ್ರಾಮದ ಕೊಲ್ಲಪ್ಪ ಬಡೇಶೆಟ್ರುಮನೆ ಆವರಣದಲ್ಲಿ ಆಯೋಜಿಸಲಾದ ಹೊಸನಗರ ತಾಲ್ಲೂಕು ಕುಂಬಾರರ ಸಂಘದ 19ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಹಿರಿಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶೋಷಿತರ ಏಳಿಗೆಗೆ ಸರ್ಕಾರ ಸದಾ ಶ್ರಮಿಸುತ್ತಿದ್ದು ಕುಂಬಾರ ಸುಮುದಾಯದವರು ಇಟ್ಟಿರುವ ಸಮುದಾಯ ಭವನ ಬೇಡಿಕೆಯನ್ನು ಸರ್ಕಾರ ಗಮನಸೆಳೆದು ಈಡೇರಿಸುವ ಭರವಸೆಯನ್ನು ನೀಡಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,
ಜನಸಂಖ್ಯೆಯಲ್ಲಿ ಕ್ಷೀಣವಾಗಿರುವ ಕುಂಬಾರ ಸಮುದಾಯ ಸಮಾಜದ ಮುಖ್ಯ ವಾಹಿನಿಯಲ್ಲಿ ಪಾಲ್ಗೊಳ್ಳುವಂತಾಗಬೇಕು. ಸಮುದಾಯದ ಕುಲಕಸುಬು ಹಾಗೂ ಕುಶಲ ಕರ್ಮಿಗಳ ಅಭ್ಯುದ್ಯಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಮೂಲಕ ಹೆಚ್ಚು ಅನುದಾನವನ್ನು ನೀಡುತ್ತಿದ್ದು ಈ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳುವಂತೆ ಯುವಕರು ಮುಂದಾಗಬೇಕು ಎಂದ ಅವರು, ಸಮುದಾಯದವರು ನಡೆಸುವ ಇಂತಹ ಸಂಘಟನಾತ್ಮಕ ಕಾರ್ಯಕ್ರಮಗಳು ಇತರ ಸಮಾಜಕ್ಕೆ ಮಾದರಿಯಾಗುವಂತಿರಬೇಕು ಎಂದರು.
ಹೊಸನಗರ ತಾಲ್ಲೂಕು ಕುಂಬಾರ ಸಂಘದ ಅಧ್ಯಕ್ಷ ಶೇಖರಪ್ಪ ಎಲ್.ಹಿಂಡ್ಲೆಮನೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಶಿಕ್ಷಕ ರವಿ ಕೆ.ಆರ್. ಕೊಳಗಿ, ಮನಸ್ಸು ಕಟ್ಟುವ ಮೂಲಕ ಸಮಾಜ ಸಂಘಟನೆ ಮಾಡಬೇಕು. ಮೌಲ್ಯಯುತ ಚಿಂತನೆ ಮೂಲಕ ಜ್ಞಾನ ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿಯನ್ನು ಕೊಡುವ ಮೂಲಕ ಸಮಾಜದ ಸರ್ವೋತ್ತಮ ಬೆಳವಣಿಗೆಗೆ ಶ್ರಮಿಸಿ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ವಾರ್ಷಿಕ ಸಭೆಯ ಆಯೋಜನಾ ಸಮಿತಿ ಅಧ್ಯಕ್ಷ ಶೇಖರಪ್ಪ ಹೆಚ್.ಬಿ., ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ಚಂದ್ರಮೌಳಿ, ತಾಲ್ಲೂಕು ಕುಂಬಾರ ಸಮಾಜದ ಗೌರವಾಧ್ಯಕ್ಷ ಸಳ್ಳಿ ಪುಟ್ಟಸ್ವಾಮಿ, ಚಿಕ್ಕಜೇನಿ ಗ್ರಾಮ ಪಂಚಾಯಿತ್ ನಿಕಟಪೂರ್ವ ಅಧ್ಯಕ್ಷ ಎನ್.ಪಿ.ರಾಜು, ವೆಂಕಟಾಚಲ, ಭದ್ರಪ್ಪಗೌಡ, ಶಾರದಾ ಮಂಜಪ್ಪ, ಪಾರ್ವತಿ ಭದ್ರಪ್ಪ, ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮಕ್ಕೂ ಮೊದಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಪಲ್ಲಕ್ಕಿ ಉತ್ಸವ ಜರುಗಿತು. ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ 75% ಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣಾರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಸಮಾಜದ ಹಿರಿಯರಿಗೆ ಸಾಧಕರಿಗೆ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿಜೇಂದ್ರ ಸ್ವಾಗತಿಸಿದರು. ರಮೇಶ ಎಸ್.ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





