ಶಿವಮೊಗ್ಗದಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮ | ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ದಿನ ; ಸಚಿವ ಮಧು ಬಂಗಾರಪ್ಪ

Written by Mahesha Hindlemane

Published on:

ಶಿವಮೊಗ್ಗ ; ಈ ದಿನ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಾದ ದಿನ. ಇಂದು ವಿಶ್ವದ ಶ್ರೇಷ್ಠ ಸಂವಿಧಾನವು ಜಾರಿಗೆ ಬಂದ ಪವಿತ್ರ ದಿನವಾಗಿದ್ದು “ನಮ್ಮ ದೇಶ, ನಮ್ಮ ಸಂವಿಧಾನ ನಮ್ಮದೇ ಆಡಳಿತ” ಎಂದು ನಾವು ಸ್ವಾಭಿಮಾನದಿಂದ ಬದುಕಲು ಕಾರಣರಾದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಕೃತಜ್ಞತಾ ಪೂರ್ವಕ ನಮನಗಳು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವ ಸಂದೇಶ ನೀಡಿದ ಅವರು, ಈ ನಿಟ್ಟಿನಲ್ಲಿ ಸಂವಿಧಾನದ ಮಹತ್ವವನ್ನು ಅರಿತ ನಮ್ಮ ಸರ್ಕಾರವು ರಾಜ್ಯದ ಒಂದು ಕೋಟಿಗೂ ಹೆಚ್ಚು ಮಕ್ಕಳು ಪ್ರತಿದಿನ ಶಾಲೆಯಲ್ಲಿ ‘ಸಂವಿಧಾನದ ಪೀಠಿಕೆ’ಯನ್ನು ಓದುತ್ತಿದ್ದಾರೆ. ಎಳೆಯ ವಯಸ್ಸಿನಲ್ಲೇ ಮಕ್ಕಳಲ್ಲಿ ಸಂವಿಧಾನದ ಮೌಲ್ಯಗಳನ್ನು ಬೆಳೆಸುವುದು ನಮ್ಮ ಉದ್ದೇಶ ಹಾಗೂ ಇದು ಅವಶ್ಯಕತೆಯೂ ಹೌದು ಎಂದರು.

ಕರ್ನಾಟಕದ ಮತ್ತು ಭಾರತದ ಭೂಪಟದಲ್ಲಿ ಶಿವಮೊಗ್ಗಕ್ಕೆ ತನ್ನದೇ ಆದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವಿದ್ದು ರಾಷ್ಟ್ರಕವಿ ಕುವೆಂಪು ಅವರು ವಿಶ್ವಮಾನವ ಸಂದೇಶವನ್ನು ಸಾರಿದ್ದು ಇದೇ ಮಣ್ಣಿನಿಂದ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿಯವರು ಸಾಹಿತ್ಯ ಲೋಕದಲ್ಲಿ ಹೊಸ ‘ಅಲೆ ಎಬ್ಬಿಸಿದ್ದು ಇಲ್ಲಿಂದಲೇ. ಈ ನೆಲ ಕನ್ನಡವನ್ನು ಎತ್ತಿ ಹಿಡಿದ ಪುಣ್ಯಭೂಮಿ.

ಸಮಾಜವಾದಿ ಸಿದ್ಧಾಂತದ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸಿದ ದಿ. ಶಾಂತವೇರಿ ಗೋಪಾಲಗೌಡರಂತಹ ಮಹಾನ್ ಚೇತನರು ನಡೆದಾಡಿದ ನೆಲವಿದು.

ಸಂವಿಧಾನದ ಬದ್ಧತೆ ಮತ್ತು ಸರ್ಕಾರದ ಧ್ಯೇಯವಾಗಿದ್ದು, ನಮ್ಮ ಸರ್ಕಾರವು ಸಂವಿಧಾನದ ಆಶಯಗಳಿಗೆ ಸಂಪೂರ್ಣವಾಗಿ ಬದ್ಧವಾಗಿದೆ. “ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು” ಎಂಬ ತತ್ವವೇ ನಮ್ಮ ಆಡಳಿತದ ಮೂಲಮಂತ್ರ.

ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಯೋಜನೆಗಳನ್ನು ಯಾವುದೇ ಮಧ್ಯವರ್ತಿಗಳು ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ದೊರೆಯುವಂತೆ ಮಾಡಿ, ನಮ್ಮ ಜಿಲ್ಲೆಗೆ 3024 ಕೋಟಿ ರೂಗಳನ್ನು ಹಾಗೂ ರಾಜ್ಯದಲ್ಲಿ 1.13 ಲಕ್ಷ ಕೋಟಿ (ಒಂದು ಲಕ್ಷ ಹದಿಮೂರು ಸಾವಿರ ಕೋಟಿ) ಹಣವನ್ನು ತಲುಪಿಸುವ ಮೂಲಕ ಪಾರದರ್ಶಕ ಆಡಳಿತಕ್ಕೆ ಹೊಸ ಅಧ್ಯಾಯ ಬರೆದು ರಾಜ್ಯದ ಜನರಿಗೆ ಆರ್ಥಿಕ ಶಕ್ತಿ ತುಂಬಿದೆ.

ಯೋಜನಾ ಆಯೋಗದ ಮೂಲಕ ರಾಜ್ಯದ ದೀರ್ಘಕಾಲೀನ ಬೆಳವಣಿಗೆಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಶಿಕ್ಷಣ, ಕೃಷಿ, ಆರೋಗ್ಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕವನ್ನು ದೇಶದ ನಂಬರ್ ಒನ್ ರಾಜ್ಯವನ್ನಾಗಿ ಮಾಡುವುದೇ ನಮ್ಮ ಸಂಕಲ್ಪ.

ಜಿಲ್ಲೆಯಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗಿದ್ದು, ಮೆಗ್ಗಾನ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಕಿದ್ವಾಯಿ ಮಾದರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ, ಹೈಟೆಕ್ ಶವಾಗಾರ, ಎಂ.ಸಿ.ಎ ಬ್ಲಾಕ್, ಕೇಂದ್ರ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಇಲ್ಲಿನ ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿನಿಲಯ ಕಟ್ಟಡ, ತುರ್ತು ನಿಗಾಘಟಕ ಕಟ್ಟಡದ ಕಾಮಗಾರಿಗಳು ಅನುಮೋದನೆಗೊಂಡಿರುತ್ತವೆ. ಹೊರ ರೋಗಿ ವಿಭಾಗ ಮತ್ತು ಡಾರ್ ಮೆಟ್ರಿ ಬ್ಲಾಕ್, ಟ್ರಮಾ ಸೆಂಟರ್ ನಿರ್ಮಾಣ ಕಾಮಗಾರಿಗಳು ಸರ್ಕಾರದ ಹಂತದಲ್ಲಿದ್ದು ಶೀಘ್ರವೇ ಅನುಮೊದನೆ ಪಡೆಯಲಾಗುವುದು.

ಆಸ್ಪತ್ರೆ, ಹೈಟೆಕ್ ಶವಾಗಾರ, ಎಂ.ಸಿ.ಎ ಬ್ಲಾಕ್, ಕೇಂದ್ರ ಗ್ರಾಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಇಲ್ಲಿನ ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿನಿಲಯ ಕಟ್ಟಡ, ತುರ್ತು ನಿಗಾಘಟಕ ಕಟ್ಟಡದ ಕಾಮಗಾರಿಗಳು ಅನುಮೋದನೆಗೊಂಡಿರುತ್ತವೆ. ಹೊರ ರೋಗಿ ವಿಭಾಗ ಮತ್ತು ಡಾರ್ ಮೆಟ್ರಿ ಬ್ಲಾಕ್, ಟ್ರಾಮಾ ಸೆಂಟರ್ ನಿರ್ಮಾಣ ಕಾಮಗಾರಿಗಳು ಸರ್ಕಾರದ ಹಂತದಲ್ಲಿದ್ದು ಶೀಘ್ರವೇ ಅನುಮೊದನೆ ಪಡೆಯಲಾಗುವುದು.

ಭೂಮಿ ಹಕ್ಕು :

ದಶಕಗಳಿಂದ ಬಾಕಿ ಉಳಿದಿರುವ ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಬಗ‌ರ್ ಹುಕುಂ ಸಾಗುವಳಿದಾರರ ಸಮಸ್ಯೆ ಇತ್ಯರ್ಥಕ್ಕೆ ನಾವು ವಿಶೇಷ ಆಸಕ್ತಿ ವಹಿಸಿದ್ದೇವೆ. ಸುಪ್ರೀಂಕೋರ್ಟ್ ಸೂಚನೆಯಂತೆ ಸಮೀಕ್ಷಾ ಕಾರ್ಯ ಮುಗಿದಿದ್ದು, ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಸಂತ್ರಸ್ತರಿಗೆ ಶಾಶ್ವತ ನ್ಯಾಯ ಒದಗಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ.

ಮೂಲ ಸೌಕರ್ಯಗಳ ಅಭಿವೃದ್ಧಿ:

ಕುಡಿಯುವ ನೀರು, ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸಸೌಲಭ್ಯ ಸೇರಿದಂತೆ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಜಿಲ್ಲೆಗೆ ರೂ.225 ಕೋಟಿಗಳ ಕಾಮಗಾರಿಗೆ ಅನುಮೋದನೆ ನೀಡಿ, ಟೆಂಡರ್ ಕರೆಯಲಾಗಿರುತ್ತದೆ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡಗಳ ಅಭಿವೃದ್ಧಿಗೆ “ಮಹಾತ್ಮಾ ಗಾಂಧೀ ನಗರ ವಿಕಾಸ ಯೋಜನೆ ಹಂತ-2″ ಅಡಿಯಲ್ಲಿ 127.50 ಕೋಟಿಗಳ ಕಾಮಗಾರಿಗೆ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ. ಪಶುಸಂಗೋಪನೆ ಇಲಾಖೆ ವತಿಯಿಂದ ಶಿವಮೊಗ್ಗ ಜಿಲ್ಲೆಗೆ 05 ಪಶುಆಸ್ಪತ್ರೆಗಳನ್ನು ನಿರ್ಮಾಣ ಮಾಡಲು ಆನುಮೋದನೆ ನೀಡಲಾಗಿದೆ.

ನನ್ನ ಪೂಜ್ಯ ತಂದೆಯವರು ಹಾಗೂ ನಮ್ಮ ನಾಯಕರಾದ ಮಾಜಿ‌ ಮುಖ್ಯಮಂತ್ರಿಗಳಾದ ಎಸ್.‌ಬಂಗಾರಪ್ಪನವರ ಸ್ಮಾರಕ ಸ್ಥಳವಾದ
‘ಬಂಗಾರಧಾಮ’ವೂ ಸೇರಿದಂತೆ ಜಿಲ್ಲೆಯ 64 ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಿದ್ದು, ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ.

ಒಂದು ಜಿಲ್ಲೆ ಒಂದು ತಾಣ ಯೋಜನೆ ಅಡಿಯಲ್ಲಿ ಗುಡವಿ ಪಕ್ಷಿಧಾಮವನ್ನು ಗುರುತಿಸಲಾಗಿದ್ದು, PPP ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಶ್ರೀ ಚಂದ್ರಗುತ್ತಿ ರೇಣುಕಾಂಬದೇವಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದರು.

ಪ್ರೊಬೇಷನರಿ ಐಪಿಎಸ್ ಕವಾಯತು ದಂಡ ನಾಯಕಿ ಮೇಘಾ ಅಗರ್ವಾಲ್ ಕನ್ನಡದಲ್ಲಿ ಆದೇಶ ನೀಡಿದರು. ಕವಾಯತು ತುಕಡಿಗಳು ಪಥ ಸಂಚಲನ‌ ನಡೆಸಿದರು.

ನಮ್ಮ ಜಿಲ್ಲೆಗೆ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 02 ವಸತಿ ನಿಲಯಗಳನ್ನು ಪ್ರಾರಂಭಿಸಲಾಗಿದೆ.

ಮಾದಕದ್ರವ್ಯ ಮುಕ್ತ ಶಿವಮೊಗ್ಗ:

ಯುವಜನತೆಯನ್ನು ದಾರಿ ತಪ್ಪಿಸುವ ಮಾದಕ ವಸ್ತುಗಳ ವಿರುದ್ಧ ನಮ್ಮ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳುತ್ತಿದ್ದು ಶಾಂತಿಯುತ ಶಿವಮೊಗ್ಗ ನಮ್ಮ ಗುರಿ.

ಶಿಕ್ಷಣ ಕ್ಷೇತ್ರ:

ನಮ್ಮ ಮಕ್ಕಳೇ ನಮ್ಮ ಆಸ್ತಿ, ನಮ್ಮ ದೇವರು. ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ಕಳೆದ ಎರಡೂವರೆ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಾವು ತಂದಿರುವ ಬದಲಾವಣೆಗಳು ಐತಿಹಾಸಿಕವಾಗಿವೆ.

ಹಸಿದ ಹೊಟ್ಟೆಯಲ್ಲಿ ವಿದ್ಯೆ ತಲೆಗೆ ಹತ್ತುವುದಿಲ್ಲ” ಎಂಬ ಅರಿವು ನಮಗಿದೆ. ಅದಕ್ಕಾಗಿಯೇ ಅಜೀಂ ಪ್ರೇಮ್ ಜೀ ಫೌಂಡೇಷನ್ ಸಹಯೋಗದೊಂದಿಗೆ ಹಾಗೂ ಸಾಯಿ ಶ್ಯೂರ್ ಟ್ರಸ್ಟ್ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವುದರ ಜೊತೆಗೆ ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆ ತಂದು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಮೇಲಿನ ಒತ್ತಡ ಹಾಗೂ ಪರೀಕ್ಷಾ ಭಯ ಹೋಗಲಾಡಿಸಲು “ಮೂರು ಪರೀಕ್ಷಾ ಪದ್ಧತಿ” ಜಾರಿಗೆ ತಂದಿದ್ದೇವೆ. ಇದರಿಂದ ಪರೀಕ್ಷಾ ಭಯ ಹೋಗಿ, ಕಲಿಯುವ ಆಸಕ್ತಿ ಹೆಚ್ಚಾಗಿದೆ.

ಕೆಪಿಎಸ್ ಶಾಲೆಗಳು ಮತ್ತು ಮೂಲಸೌಕರ್ಯ:

ಎಲ್.ಕೆ.ಜಿ ಯಿಂದ ಪಿ.ಯು.ಸಿ ವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡುವ ‘ಕರ್ನಾಟಕ ಪಬ್ಲಿಕ್ ಶಾಲೆಗಳು’ ನಮ್ಮ ಸರ್ಕಾರದ ಪ್ರಮುಖ ಯೋಜನೆ. ರಾಜ್ಯದಲ್ಲಿ ಹೊಸದಾಗಿ 900 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಗೆ 19 ಶಾಲೆಗಳನ್ನು ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಶಿವಮೊಗ್ಗಕ್ಕೆ ಆಹ್ವಾನಿಸಿ, ಇಲ್ಲಿಂದಲೇ ರಾಜ್ಯಾದ್ಯಂತ ಶಾಲೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಅತೀ ಶೀಘ್ರದಲ್ಲಿ ಹಮ್ಮಿಕೊಳ್ಳಲಿದ್ದೇವೆ‌.

ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹೊಸ ಕೊಠಡಿಗಳು, ಶಾಲಾ ಕಟ್ಟಡಗಳ ದುರಸ್ತಿ ಹಾಗೂ ಶೌಚಾಲಯಗಳ ನಿರ್ಮಾಣಕ್ಕಾಗಿ ರೂ.500 ಕೋಟಿ ವೆಚ್ಚ ಮಾಡಲಾಗಿದೆ.
ವೆಚ್ಚ ಮಾಡಲಾಗುತ್ತಿದೆ.

ಕಂಪ್ಯೂಟರ್ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲು ಸ್ಮಾರ್ಟ್ ಕ್ಲಾಸ್ ಹಾಗೂ ಕಂಪ್ಯೂಟರ್ ಲ್ಯಾಬ್ ವಿಜ್ಞಾನ ಪ್ರಯೋಗಾಲಯಗಳನ್ನು ಸುಮಾರು 5000 ಶಾಲೆಗಳಲ್ಲಿ ಪ್ರಾರಂಭಿಸಲಾಗುತ್ತಿದೆ. ಇದಕ್ಕಾಗಿ ರೂ. 160ಕೋಟಿಗಳ ವೆಚ್ಚ ಮಾಡಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್.ಕೆ.ಜಿಯಿಂದ 12ನೇ ತರಗತಿವರೆಗೆ ಉಚಿತ ಪಠ್ಯಪುಸ್ತಕಗಳನ್ನು ನೀಡಲಾಗುವುದು ಹಾಗೂ ಉಚಿತ ಪುಸ್ತಕ (ನೋಟ್ ಬುಕ್) ನೀಡುವ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿದೆ.

ಶಿಕ್ಷಕರ ನೇಮಕಾತಿ:

ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರೇ ಆಧಾರ. ನಾವು ಈಗಾಗಲೇ 14,499 ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೇವೆ. ಶಿಕ್ಷಕರ ಕೊರತೆ ನೀಗಿಸಲು ಪ್ರಥಮ ಬಾರಿಗೆ ನಮ್ಮ ಸರ್ಕಾರ 51000 ಅತಿಥಿ ಶಿಕ್ಷಕರನ್ನು‌ನೇಮಿಸಿದೆ. ಮುಂದಿನ ಶೈಕ್ಷಣಿಕ ವರ್ಷದೊಳಗೆ ಇನ್ನೂ 10,800 ಹೊಸ ಶಿಕ್ಷಕರನ್ನು ಹಾಗೂ ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ.

ನಮ್ಮ ಶಿವಮೊಗ್ಗ ಜಿಲ್ಲೆಯು 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಿರುವುದು ನಮ್ಮೆಲ್ಲರ ಹೆಮ್ಮೆ.

ಅಭಿವೃದ್ಧಿ ಎಂಬುದು ನಿರಂತರ ಪ್ರಕ್ರಿಯೆ. ನಮ್ಮ ಸರ್ಕಾರ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಪಣತೊಟ್ಟಿದೆ ಎಂದ ಅವರು, ಗಣರಾಜ್ಯೋತ್ಸವದ ಈ ಶುಭ ದಿನದಂದು, ನಾವೆಲ್ಲರೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯೋಣ. ದ್ವೇಷವನ್ನು ಬಿಟ್ಟು, ಪ್ರೀತಿ ಮತ್ತು ಸೌಹಾರ್ದತೆಯಿಂದ ಬದುಕೋಣ. ಉತ್ತಮ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಸ್ತಿನ‌ ಪಥ ಸಂಚಲನ ಪ್ರದರ್ಶಿಸಿದ ಕಸ್ತೂರಿಬಾ ಬಾಲಿಕಾ ಪ್ರೌಢಶಾಲೆಯ ಎನ್.ಸಿ.ಸಿ ತಂಡ ಪ್ರಥಮ, ಗಾಜನೂರು ಮೊರಾರ್ಜಿ ದೇಸಾಯಿ (ಬಾಲಕಿಯರ ತಂಡ)ವಸತಿ ಶಾಲೆ ದ್ವಿತೀಯ, ಜವಾಹರ ನವೋದಯ ವಸತಿ ಬಾಲಕರ ವಿಭಾಗ ಮೂರನೇ ಸ್ಥಾನ ಪಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನದಲ್ಲಿ ಪೊಲೀಸ್ ಪಬ್ಲಿಕ್ ಶಾಲೆಗೆ ಪ್ರಥಮ, ರಾಮಕೃಷ್ಣ ವಿದ್ಯಾನಿಕೇತನ ಶಾಲೆಗೆ ದ್ವಿತೀಯ, ಜ್ಞಾನದೀಪ ಶಾಲೆ ತೃತೀಯ ಬಹುಮಾನ ಪಡೆದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಸ್ ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ, ರಾಜ್ಯ ಜವಳಿ ಮೂಲಸೌಲಭ್ಯ (ವಿದ್ಯುತ್ ಮಗ್ಗಗಳ) ಚೇತನ್ ಕೆ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಕೆಳದಿ ಶಿವಪ್ಪನಾಯಕ‌ ಕೃಷಿ‌ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ಆಡಳಿತ ಮಂಡಳಿ ಸದಸ್ಯ ದೇವಿ ಕುಮಾರ್, ಜನಪ್ರತಿನಿಧಿಗಳು, ಮುಖಂಡರು, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ. ಸಿಇಓ ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, ಅಪರ ಜಿಲ್ಲಾಧಿಕಾರಿ, ಎಸಿ, ತಹಸೀಲ್ದಾರ್, ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

Leave a Comment