ಹೊಸನಗರ ; ತಾಲ್ಲೂಕಿನಾದ್ಯಂತ ಕಳೆದ ಐದು ದಿನಗಳಿಂದ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು ಅಲ್ಲಲ್ಲಿ ರಸ್ತೆಯ ಮೇಲೆ ಮರ ಬೀಳುವುದನ್ನು ಬಿಟ್ಟರೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಐದು ದಿನಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆ :
ಶರಾವತಿ ಹಿನ್ನೀರನ್ನು ಒಡಲಲ್ಲಿ ಸಂಗ್ರಹಿಸಿಟ್ಟುಕೊಂಡು ಇಡೀ ನಾಡಿಗೆ ಬೆಳಕು ಕೊಟ್ಟರೂ, ಹೊಸನಗರ ಪಟ್ಟಣ ಹಾಗೂ ತಾಲ್ಲೂಕಿನ ನಿವಾಸಿಗಳು ದೀಪದ ಕೆಳಗಿನ ಕತ್ತಲೆಯಲ್ಲಿದ್ದಾರೆ. ವರ್ಷಗಟ್ಟಲೇ ಕರೆಂಟ್ ತೆಗೆಯುತ್ತಿದ್ದರೂ ಯಾರು ಕೇಳುವ ಪರಿಸ್ಥಿತಿಯಲ್ಲಿಲ್ಲ. ಏಕೆಂದರೆ ರಾಜಕೀಯ ನಾಯಕರು, ಶ್ರೀಮಂತರು ಯುಪಿಎಸ್, ಸೋಲಾರ್ ಇತ್ಯಾದಿಗಳನ್ನು ಹಾಕಿಕೊಂಡಿದ್ದಾರೆ. ಅವರಿಗೆ ಕರೆಂಟ್ ಹೋದರೂ ಇದ್ದರೂ ಗೊತ್ತಾಗುವುದಿಲ್ಲ. ಮಧ್ಯಮ ವರ್ಗದವರು ಬಡವರು ಎಷ್ಟೇ ಕೇಳಿದರೂ ಹೇಳಿದರೂ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ. ಇದೇ ರೀತಿ ಅನೇಕ ವರ್ಷಗಳಿಂದಲೂ ನಡೆಯುತ್ತಲೇ ಬರುತ್ತಿದೆ. ಅದೇ ಪ್ರತಿ ತಿಂಗಳು ವಿದ್ಯುತ್ ದುರಸ್ಥಿಗೆಂದು ಲಕ್ಷಗಟ್ಟಲೇ ಹಣ ವ್ಯಯ ಮಾಡುತ್ತಿದ್ದಾರೆ. ಆದರೂ ಇಲ್ಲಿಯವರೆಗೆ ಸರಿಯಾಗಿ ವಿದ್ಯುತ್ ಸೌಲಭ್ಯ ನೀಡಲಾಗಿಲ್ಲ.
ಬೇಸಿಗೆಯಲ್ಲಿ ಓವರ್‌ಲೋಡ್, ಮಳೆಗಾಲದಲ್ಲಿ ಮರ ಬಿದ್ದು ಮೇನ್ ಸಪ್ಲೇ ಬಂದ್. ಹೀಗೆ ವರ್ಷವಿಡೀ ದಿನ-ವಾರಗಳ ಲೆಕ್ಕದಲ್ಲಿ ವಿದ್ಯುತ್ ವ್ಯತ್ಯಯ. ಈಗ ಕಳೆದ ಐದು ದಿನಗಳಿಂದ ವಿದ್ಯುತ್ ಸರಬರಾಜುವಿನಲ್ಲಿ ಭಾರಿ ವ್ಯತ್ಯಯ ಕಾಣುತ್ತಿದ್ದು ದಿನದಲ್ಲಿ ಒಂದು ಗಂಟೆಯೂ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೊಸನಗರ ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್ ತಮ್ಮ ಅಳಲನ್ನು ಮಾಧ್ಯಮದವರ ಮುಂದೆ ತೋಡಿಕೊಂಡಿದ್ದಾರೆ. ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಎಷ್ಟೇ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲ ಹೊಸನಗರ ತಾಲ್ಲೂಕಿನ ಜನತೆ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದ ಪ್ರಾರಂಭದಲ್ಲಿಯೇ ಹೀಗಾದರೇ ಮುಂದೆ ವಿದ್ಯುತ್ ಸರಬರಾಜು ದೇವರೆ ಗತಿ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೋಡೂರು, ಮಾರುತಿಪುರ, ಹುಂಚ, ಸೊನಲೆ, ಮುಂಬಾರು, ಮೇಲಿನಬೆಸಿಗೆ, ರಾಮಚಂದ್ರಪುರ ಸೇರಿದಂತೆ 10 ರಿಂದ 15 ಗ್ರಾಮ ಪಂಚಾಯಿತಿಗಳು ಕತ್ತಲೆಯಲ್ಲಿ ಮುಳುಗಿವೆ. ಇದರಿಂದ ಮೊಬೈಲ್ ನೆಟ್‌ವರ್ಕ್ ಸಹ ಕೈಕೊಟ್ಟಿದ್ದು ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಸಕರೇ ಇತ್ತ ಗಮನಹರಿಸಿ ;
ಹೊಸನಗರದ ಸಾರ್ವಜನಿಕರು ಅನೇಕ ವರ್ಷಗಳಿಂದ ಹಿಂದಿನ ಶಾಸಕ ಹರತಾಳು ಹಾಲಪ್ಪನವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅದೇ ರೀತಿ ಜನಪ್ರಿಯ ಶಾಸಕ, ಬಡವರ ಬಂಧು ಜನನಾಯಕ ಎಂಬ ಹೆಸರಿನಲ್ಲಿ ಕರೆಸಿಕೊಳ್ಳುವ ಈಗಿನ ಶಾಸಕ ಬೇಳೂರು ಗೋಪಾಲಕೃಷ್ಣರವರ ಗಮನಕ್ಕೂ ಈಗಾಗಲೇ ವಿದ್ಯುತ್ ನಿಲುಗಡೆಯ ವಿಷಯ ಪ್ರಸ್ತಾಪಿಸಲಾಗಿದ್ದು ಸರಿಪಡಿಸುತ್ತೇವೆ ಎಂಬ ಹಾರಿಕೆ ಉತ್ತರ ನೀಡುತ್ತಾ ಬರುತ್ತಿದ್ದಾರೆ ಎಂದು ಜನರು ಮಾತಾನಾಡಿಕೊಳ್ಳುತ್ತಿದ್ದು ಸಾಗರದಲ್ಲಿ ಈ ರೀತಿ ವಿದ್ಯುತ್ ತೊಂದರೆ ನೀಡಿದರೇ ನೀವು ಸುಮ್ಮನೆ ಇರುತ್ತಿರಾ? ಎಂಬ ಪ್ರಶ್ನೆ ಇಲ್ಲಿನ ಮಹಿಳೆಯರ ಬಾಯಿಯಲ್ಲಿ ಬರುತ್ತಿದೆ.
5 ಗ್ಯಾರಂಟಿ ನೀಡಿದರೆ ಸಾಕು ಎಂಬ ಆಲೋಚನೆ ಬಿಟ್ಟು ಇಲ್ಲಿನ ವಿದ್ಯುತ್ ಸಮಸ್ಯೆ ಬಗ್ಗೆ ಕಡೆಗೆ ಗಮನ ಹರಿಸಲಿ ಎಂದು ಇಲ್ಲಿನ ನಾಗರಿಕರು ಒತ್ತಾಯವಾಗಿದೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.