ಬರಗಾಲ ; ಕೇಂದ್ರ ಸರ್ಕಾರ ನೆರವಿಗೆ ಬರಬೇಕು

0 44

ಶಿವಮೊಗ್ಗ: ರಾಜ್ಯದಲ್ಲಿ ಬರಗಾಲ ಕಾಲಿಟ್ಟಿದ್ದು, ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ನೆರವಿಗೆ ಬರಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಇಂದು ಜಿಲ್ಲಾಧಿಕಾರಿಗಳ ಕಚೇರಿಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿತು.


ಕರ್ನಾಟಕ ಸರ್ಕಾರ ಈಗಾಗಲೇ 130 ತಾಲೂಕುಗಳನ್ನು ಬರ ಪ್ರದೇಶವೆಂದು ಘೋಷಿಸಲು ತೀರ್ಮಾನಿಸಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ರೈತರನ್ನು ರಕ್ಷಿಸಬೇಕು. ಎನ್‌ಡಿಆರ್‌ಎಫ್ ನೀತಿಯನ್ನು ಬದಲಾಯಿಸಬೇಕು. ಉದ್ಯೋಗ ಖಾತ್ರಿ ಯೋಜನೆಗೆ ಒತ್ತು ಕೊಡಬೇಕು. ಅಂತರ್ ಜಲ ವೃದ್ಧಿಗೆ ನೆರವು ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವಾಗಲಿ, ನ್ಯಾಯಮಂಡಳಿಯಾಗಲಿ ಸ್ಪಷ್ಟವಾದ ಮಾನದಂಡ ರೂಪಿಸಿಲ್ಲ. ಮಳೆ ಕೊರತೆಯ ಸಂದರ್ಭದಲ್ಲಿ ವಿವಾದ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ ಸರ್ಕಾರ ಇಂತಹ ಸಂದರ್ಭದಲ್ಲಿ ಸೂಕ್ತ ಸಂಕಷ್ಟ ಸೂತ್ರವನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.


ಕಬ್ಬು ಬೆಲೆ ನಿಗದಿಗೆ ಕೇಂದ್ರ ಸರ್ಕಾರ ಶೇ.10.25 ಇಳುವರಿಯನ್ನು ಆಧಾರವಾಗಿಟ್ಟುಕೊಂಡಿದೆ. ಇದನ್ನು ಮಾರ್ಪಾಡು ಮಾಡಿ ಶೇ.8.5ಕ್ಕೆ ಇಳಿಸಬೇಕು. ತೆಂಗು ಬೆಳೆಗಾರರ ನೆರವಿಗೆ ಬರಬೇಕು. ಕೊಬ್ಬರಿಗೆ ಕ್ವಿಂಟಾಲಿಗೆ ಬೆಂಬಲ ಬೆಲೆಯನ್ನು 20 ಸಾವಿರಕ್ಕೆ ಹೆಚ್ಚಿಸಬೇಕು. ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.


ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಎನ್.ಡಿ. ವಸಂತಕುಮಾರ್, ಶಿವಾನಂದ ಕುಗ್ವೆ, ಕಣ್ಣಪ್ಪ, ರಮೇಶ್ ಐಗಿನಬೈಲು, ಪ್ರೇಮಾ ಎನ್., ಜಯಲಕ್ಷ್ಮಿ, ಲತಾ, ನಂದಿನಿ, ಯು.ಬಿ. ಜೋಸೆಫ್, ಎಂ.ಬಿ. ಮಂಜಪ್ಪ, ಇದ್ದರು.

ಬರ ಘೋಷಿಸಲು ಆಗ್ರಹ

ಶಿವಮೊಗ್ಗ: ರಾಜ್ಯಕ್ಕೆ ಬರಗಾಲ ಕಾಲಿಟ್ಟಿದ್ದು, ರೈತರಿಗೆ ಆರ್ಥಿಕ ನೆರವು ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.


ರಾಜ್ಯದಲ್ಲಿ ಮಳೆ ಕೈಕೊಟ್ಟಿದೆ. ಬರಗಾಲ ಕಾಲಿಟ್ಟಿದೆ. ರೈತರು ಸಂಕಷ್ಟದಲ್ಲಿದ್ದಾರೆ ಭತ್ತ ಹಾಗೂ ಮೆಕ್ಕೆಜೋಳ ಸಂಪೂರ್ಣವಾಗಿ ನಾಶವಾಗಿದೆ. ಆದ್ದರಿಂದ ರೈತರಿಗೆ ಪ್ರತಿ ಎಕರೆ ಭತ್ತಕ್ಕೆ 30 ಸಾವಿರ ಮೆಕ್ಕೆಜೋಳಕ್ಕೆ  25 ಸಾವಿರ ಪರಿಹಾರ ನೀಡಬೇಕು. ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು. ಸಾಧ್ಯವಾದರೆ ಮೋಡ ಬಿತ್ತನೆ ಮಾಡಬೇಕು ಎಂದು ಆಗ್ರಹಿಸಿದರು.


ಭದ್ರಾ ಅಣೆಕಟ್ಟಿನಲ್ಲಿ ನೀರು ತುಂಬಾ ಕಡಿಮೆ ಇದೆ.ಇಂತಹ ಸಂದರ್ಭದಲ್ಲಿ ನೂರು ದಿನಗಳ ಕಾಲ ನಾಲೆಗಳಿಗೆ ನೀರು ಹರಿಸಲು ತೀರ್ಮಾನಿಸಿರುವುದು ಸರಿಯಲ್ಲ. ಕುಡಿಯುವನೀರಿನ ಸಮಸ್ಯೆ ಗಮನದಲ್ಲಿಟ್ಟುಕೊಂಡು ಹದಿನೈದು ದಿನ ಮಾತ್ರ ನೀರು ಹರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ವೆಂಕಟೇಶ್ ಮತ್ತಿತರರು ಇದ್ದರು.

ಮೇರಾ ಮಿಟ್ಟಿ ಮೇರಾ ದೇಶ್

ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್‌ನಲ್ಲಿ ಇಂದು `ಮೇರಾ ಮಿಟ್ಟಿ ಮೇರಾ ದೇಶ್’ (ನನ್ನ ಮಣ್ಣು ನನ್ನ ಭೂಮಿ) ಕಾರ್ಯಕ್ರಮವನ್ನು ಶಾಸಕ ಎಸ್.ಎನ್, ಚನ್ನಬಸಪ್ಪ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಮಾತೃಭೂಮಿಯ ಘನತೆ ಹಾಗೂ ಸ್ವಾತಂತ್ರ್ಯ ಕಾಪಾಡಲು ತಮ್ಮ ಪ್ರಾಣ ತ್ಯಾಗ ಮಾಡಿದ ವೀರರಿಗೆ ಪ್ರಣಾಮಗಳು ಮತ್ತು ಮಾತೃಭೂಮಿಗಾಗಿ ಪ್ರತಿದಿನ, ಪ್ರತಿಕ್ಷಣ ಜೀವನದ ಪ್ರತಿ ಕಣವೂ ಬದುಕುವುದೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಅರ್ಪಿಸುವ ನಿಜವಾದ ಗೌರವ ಎಂಬ ಪ್ರಧಾನಿಯವರ ಹೇಳಿಕೆಯ ಶಾಶ್ವತ ನಾಮಫಲಕವನ್ನು ಅಳವಡಿಸಲಾಯಿತು.


ಈ ಸಂದರ್ಭದಲ್ಲಿ ಆಯುಕ್ತರಾದ ಮಾಯಣ್ಣ ಗೌಡ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಗೋವಿಂದ ರಾಜ್, ಮಹಾನಗರ ಪಾಲಿಕೆಯ ಉಪ ಆಯುಕ್ತರು ಮತ್ತು ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

Leave A Reply

Your email address will not be published.