ಜಿಲ್ಲೆಯಲ್ಲಿನ ರೈತರ ಕೃಷಿ ಚಟುವಟಿಕೆ ಮತ್ತು ಜನರ ಅನುಕೂಲಕ್ಕಾಗಿ ನಿರಂತರವಾಗಿ, ಯಾವುದೇ ಅಡಚಣೆ ಇಲ್ಲದ ಹಾಗೆ ವಿದ್ಯುತ್ ಪೂರೈಕೆ ಮಾಡುವುದು ನಮ್ಮ ಸಂಕಲ್ಪವಾಗಿದ್ದು, ಅದಕ್ಕಾಗಿ ಅಗತ್ಯ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರಾಜ್ಯದ ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.

ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯಲ್ಲಿ 110/11 ಕೆ.ವಿ. ವಿದ್ಯುತ್ ಉಪಕೇಂದ್ರವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪನವರು ಮಾತನಾಡುತ್ತಾ, ಈ ಉಪಕೇಂದ್ರದಿಂದ ವಿದ್ಯುತ್ ವ್ಯತ್ಯಯದಲ್ಲಿ ಸುಧಾರಣೆ ಸಂಭವಿಸಿ, ಮಲೆನಾಡು ಪ್ರದೇಶದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಮಂಜೂರಾಗಿರುವ ಎಂ ಕೆ ಬೈಲು ಮತ್ತು ಅಮೃತ ಹಳ್ಳಿಗಳಲ್ಲಿ 110ಕೆ.ವಿ. ವಿದ್ಯುತ್ ಉಪ ಕೇಂದ್ರಗಳನ್ನು ನಿರ್ಮಾಣ ಮಾಡುವ ಕಾರ್ಯವು ಆರಂಭವಾಗಲಿದ್ದು, ಶೀಘ್ರದಲ್ಲೇ ಇದು ಲೋಕಾರ್ಪಣೆ ಆಗಲಿದೆ ಎನ್ನುವುದನ್ನ ತಿಳಿಸಿರುವ ಅವರು ಇದರ ಆರಂಭದ ಹಾದಿಯಲ್ಲಿರುವ ಅಡೆತಡೆಗಳನ್ನು ಪರಿಹರಿಸಲು ಸೂಕ್ತ ಗಮನ ನೀಡುವುದಾಗಿ ತಿಳಿಸಿದ್ದಾರೆ.

ದಿ. ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲಾಗಿದ್ದು, ಇದರಿಂದ ಇಂದು ಅನೇಕ ರೈತರು ಸುಖದಿಂದ ಬದುಕುತ್ತಿದ್ದಾರೆ. ಈ ಉಚಿತ ವಿದ್ಯುತ್ ಯೋಜನೆ ಇಂದಿಗೂ ಮುಂದುವರಿಯುತ್ತಿದ್ದು, ಅವರ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಪ್ರತಿ ವರ್ಷ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಒದಗಿಸಲು ಆಡಳಿತಾರೂಢ ಸರ್ಕಾರ ರೂ. 20,000 ಕೋಟಿ ವೆಚ್ಚ ಮಾಡುತ್ತಿದೆ ಎಂದಿದ್ದಾರೆ ಸಚಿವ ಎಸ್. ಮಧು ಬಂಗಾರಪ್ಪ. ರಾಜ್ಯಕ್ಕೆ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಜಿಲ್ಲೆ ಇದಾಗಿದ್ದು, ಇಲ್ಲಿ ಜನರ ಅಗತ್ಯಗಳಿಗೆ ವಿದ್ಯುತ್ ಪೂರೈಸುವುದು ಮತ್ತು ಅವರ ಹಿತ ಕಾಯುವುದು ಸರ್ಕಾರದ ಹೊಣೆಗಾರಿಕೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಹಾಗೂ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು, ನಿರಂತರ ವಿದ್ಯುತ್ ಕಣ್ಣಾಮುಚ್ಚಾಲೆ ಆಗಿರುವ ಸ್ಥಿತಿಯಿಂದ ಈ ಭಾಗದ ಜನರಿಗೆ ಉಂಟಾಗಿದ್ದ ಸಮಸ್ಯೆಗೆ ಪರಿಹಾರ ಕಾಣುವುದೇ ಒಂದು ಸವಲಾಗಿತ್ತು ಇಲ್ಲಿನ ವಾಸ್ತವ ಸ್ಥಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿದರ ಫಲವಾಗಿ ಕಡಿಮೆ ಅವಧಿಯಲ್ಲಿಯೇ ಉಪಕೇಂದ್ರ ನಿರ್ಮಾಣಗೊಂಡು, ಉದ್ಘಾಟನೆಯಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.
ಈ ಹಿಂದೆ ತಾಲೂಕಿನ ಮೂರು ಭಾಗಗಳಲ್ಲಿ 110/11 ಕೆ.ವಿ. ವಿದ್ಯುತ್ ಸಂಗ್ರಹಾಗಾರಗಳನ್ನು ಸ್ಥಾಪಿಸಲಾಗಿದೆ. ಈಗ ಉದ್ಘಾಟನೆಗೊಂಡ ಘಟಕವು ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಇನ್ನೂ ಕಾರ್ಯಾರಂಭ ಮಾಡದೇ ಇರುವ ಎಂ.ಕೆ.ಬೈಲು ಮತ್ತು ಅಮೃತ ಗ್ರಾಮಗಳ ವಿದ್ಯುತ್ ಉಪಕೇಂದ್ರಗಳಿಗೂ ಅಗತ್ಯ ಕ್ರಮಗಳನ್ನು ಕೈಗೊಂಡು ಶೀಘ್ರದಲ್ಲೇ ವಿದ್ಯುತ್ ಪೂರೈಕೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ನಿರಂತರ ವಿದ್ಯುತ್ ಸರಬರಾಜು ರೈತರ ಪಂಪ್ ಸೆಟ್ ಗಳಿಗೆ ಮಾತ್ರವೇ ಅಲ್ಲದೇ, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೂ ಅನುಕೂಲವಾಗಿದೆ ಎಂದು ತಿಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಸುರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಿತಾ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Read More
FASTag ವಾರ್ಷಿಕ ಪಾಸ್ : ಏನಿದು? ಪ್ರಸ್ತುತ ಬಳಕೆದಾರರ ಮೇಲೆ ಎಫೆಕ್ಟ್ ಆಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
ರಾಜ್ಯದ 5.58 ಲಕ್ಷ ರೈತರ ಖಾತೆಗೆ ಬೆಳೆ ವಿಮೆ ಆಗಿದೆ ಜಮೆ, ನಿಮಗೂ ಬಂದಿದ್ಯಾ? ಈ ರೀತಿ ಚೆಕ್ ಮಾಡಿ
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650