ರಿಪ್ಪನ್‌ಪೇಟೆ ; ವಿವಾಹಿತ ಮಹಿಳೆಯೊಬ್ಬರು ತನ್ನ ಪ್ರಿಯಕರನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ತಮ್ಮಡಿಕೊಪ್ಪದಲ್ಲಿ ನಡೆದಿದೆ.
ಸುಜಾತ (33) ಹಾಗೂ ಸಚಿನ್ (27) ಮೃತರು. ಸುಜಾತ ಎಂಬುವವರಿಗೆ 14 ವರ್ಷದ ಹಿಂದೆ ಮದುವೆ ಆಗಿತ್ತು. ದಂಪತಿಗಳಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಆಕೆಯ ಪತಿ ನಾಪತ್ತೆಯಾಗಿದ್ದ. ಆ ಹಿನ್ನಲೆ ಬೆಳಗಾವಿ ಗಂಡನ ಮನೆಯಲ್ಲಿದ್ದ ಸುಜಾತ ತನ್ನ ತವರು ಮನೆಯಾದ ರಿಪ್ಪನ್‌ಪೇಟೆಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು. ಆ ವೇಳೆ ಆಕಸ್ಮಿಕವಾಗಿ ಫೋನ್ ಕರೆ ಮೂಲಕ ಆಯನೂರು ಕೋಟೆ ಗ್ರಾಮದಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಸಚಿನ್ ಎಂಬಾತನ ಪರಿಚಯವಾಗಿದೆ. ನಂತರ ಆ ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಸಹ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ನಂತರ ಸಚಿನ್ ಆಕೆಗೆ ಬಾಳು ಕೊಡುವುದಾಗಿ ಹೇಳಿ ಕೆಲ ದಿನಗಳಿಂದ ಆಕೆಯೊಂದಿಗೆ ವಾಸವಾಗಿದ್ದ.
ಇಬ್ಬರು ಪ್ರೇಮಿಗಳ ಸಂಬಂಧ ಹಾಗೂ ಸಹಜೀವನ ನಡೆಯುತ್ತಿರುವಾಗ ಸುಜಾತಾಳ ಸಹೋದರಿ ಕಲ್ಮನೆ ಗ್ರಾಮದಲ್ಲಿ ವಾಸವಾಗಿದ್ದ ಗೀತಾ ತಮ್ಮ ಊರಿನಿಂದ ಮಕ್ಕಳನ್ನು ಶಾಲೆಗೆ ಸೇರಿಸಲು ರಿಪ್ಪನ್‌ಪೇಟೆಗೆ ಬಂದಿದ್ದಾರೆ. ಈ ವೇಳೆ ಸುಜಾತಾ ಮತ್ತು ಸಚಿನ್ ಒಟ್ಟಿಗೆ ಇರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದಾದ ನಂತರ ಸಹೋದರಿ ಗೀತಾ, ಸುಜಾತಾಳಿಗೆ ಬೈದು ಬುದ್ಧಿವಾದ ಹೇಳಿ ಹೋಗಿದ್ದಾಳೆ. ಈ ಘಟನೆಯ ನಂತರ ತೀವ್ರ ಮನನೊಂದ ಸುಜಾತಾ ಹಾಗೂ ಸಚಿನ್ ರಾತ್ರಿ ಬೆಳಗಾಗುವಷ್ಟರಲ್ಲಿ ಕಳೆನಾಶಕವನ್ನು ಸೇವನೆ ಮಾಡಿದ್ದಾರೆ.

ಇಬ್ಬರೂ ಗಂಭೀರ ಸ್ಥಿತಿಯಲ್ಲಿದ್ದುದನ್ನು ಕಂಡ ಸ್ಥಳೀಯರು ಸಚಿನ್ ಮತ್ತು ಸುಜಾತಾಳನ್ನು ಶಿವಮೊಗ್ಗದ ಮೆಗ್ಗಾನ್ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿ ಆಗಿದೇ ಇಬ್ಬರೂ ಪ್ರೇಮಿಗಳು ಸಾವನ್ನಪ್ಪಿದ್ದಾರೆ. ನನ್ನ ಸಹೋದರಿ ಸುಜಾತಾಗೆ ಸಚಿನ್ ಎಂಬಾತನೇ ಬಲವಂತವಾಗಿ ವಿಷ ಕುಡಿಸಿದ್ದಾನೆ ಎಂದು ಸಹೋದರಿ ಗೀತಾ ಆರೋಪ ಮಾಡಿದ್ದಾರೆ.
ಒಟ್ಟಾರೆಯಾಗಿ, ಈ ಹೃದಯವಿದ್ರಾವಕ ಘಟನೆಯಿಂದ ಕುಟುಂಬ, ಗ್ರಾಮಸ್ಥರು ಶೋಕದಲ್ಲಿ ಮುಳುಗಿದ್ದಾರೆ. ಆದರೆ, ಸುಜಾತಾಳ ಇಬ್ಬರು ಸಣ್ಣ ಮಕ್ಕಳ ಭವಿಷ್ಯ ಅನಿಶ್ಚಿತತೆಯ ಕತ್ತಲಲ್ಲಿ ಸಿಲುಕಿದೆ. ಈ ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.