ಶಂಕರಘಟ್ಟ – “ಭಾರತೀಯ ಸಮಾಜ ಯಾವುದೋ ಒಂದು ಕಂಬದ ಮೇಲೆ ನಿಂತ ಸರ್ಕಸ್ ಅಲ್ಲ. ಸಾವಿರ ಕಂಬಗಳ ಮೇಲೆ ನಿಂತ ಚಪ್ಪರ. ವಿವಿಧ ಸಂಸ್ಕೃತಿಗಳೆ ಭಾರತದ ಶಕ್ತಿಯಾಗಿದೆ,” ಎಂದು ಖ್ಯಾತ ಚಿತ್ರಸಾಹಿತಿ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ 38ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಭಾಷಣ ನೀಡುತ್ತಿದ್ದ ಅವರು, “ಸಮಾಜದ ಒಳಗಿರುವ ಪ್ರತಿಯೊಂದು ಕಲೆ – ಅದು ಜನಪ್ರಿಯ ಚಲನಚಿತ್ರವಿರಲಿ, ಗಾಢವಾದ ಸಾಹಿತ್ಯವಿರಲಿ ಅಥವಾ ಹವ್ಯಾಸಿ ಯಕ್ಷಗಾನವಿರಲಿ – ಎಲ್ಲವೂ ಜನಜೀವನದ ಕಲಾತ್ಮಕ ಪ್ರತಿಬಿಂಬಗಳೆ,” ಎಂದು ಹೇಳಿದರು.
ಕಲೆ ಕೇವಲ ಮನರಂಜನೆಗಾಗಿ ಅಲ್ಲ, ಅದು ಮಾನವೀಯ ಮೌಲ್ಯಗಳನ್ನು ನೆಲೆಗೊಳಿಸುವ ಶಕ್ತಿಶಾಲಿ ಸಾಧನವಾಗಿದೆ ಎಂದು ಅವರು ಹೇಳಿದರು. “ಕಲೆ ನಮ್ಮನ್ನು ಮನುಷ್ಯರನ್ನಾಗಿ ಮಾಡುವಲ್ಲಿ ನೆರವಾಗಬೇಕು,” ಎಂಬ ಅವರ ಮಾತು, ಯುವಜನತೆಯ ನಡುವೆ ಮೌಲ್ಯಾಧಾರಿತ ಬದುಕಿನ ಕುರಿತು ಚಿಂತನೆಗೆ ಕಾರಣವಾಯಿತು.
ಶಿಕ್ಷಣ: ಮುಕ್ತಿಯ ಮಾರ್ಗದ ದಾರಿದೀಪ
ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ ಕಾಯ್ಕಿಣಿ, “ಶಿಕ್ಷಣ ಎಂಬುದು ಕೇವಲ ಅಂಕಗಳು ಅಥವಾ ಪರೀಕ್ಷೆಗಳಿಗೆ ಸೀಮಿತವಾಗಬಾರದು. ಅದು ವಿದ್ಯಾರ್ಥಿಗಳಲ್ಲಿ ಸಮಾನತೆ. ಸಹಿಷ್ಣುತೆ ಮತ್ತು ನೈತಿಕತೆ ಎಂಬ ಮೌಲ್ಯಗಳನ್ನು ಬೆಳೆಸಬೇಕು,” ಎಂದು ಹೇಳಿದರು.
ವಿಕಾಸಪಥವು ಹಾವು ಏಣಿ ಆಟ ಇದ್ದ ಹಾಗೆ. ಇಲ್ಲಿ ಅಸಮಾನತೆ, ಅಸಹನೆ, ಅಸಹಿಷ್ಣುತೆಗಳೆಂಬ ಹಾವುಗಳಿವೆ. ಅದರ ಜೊತೆಗೆ ಸಮಾನತೆ, ಸಹಿಷ್ಣುತೆಗಳೆಂಬ ಏಣಿಗಳೂ ಇವೆ. ಶಿಕ್ಷಣದ ಮೂಲಕ ಇಂಥಹಾ ಏಣಿಗಳನ್ನು ಕಂಡುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಠಕರ ಸಮಕಾಲೀನ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ನಿಷ್ಕಲ್ಮಷವಾದ ಮಮತೆ ಮತ್ತು ಸಮತೆ ಯುವಜನಾಂಗಕ್ಕೆ ದಾರಿದೀಪವಾಗಲಿ ಎಂದು ಆಶಿಸಿದರು.
ಯುವಜನತೆ ಮುಂದಿನ ಸಮಾಜದ ದಾರಿದೀಪರಾಗಲಿ
ಕಲೆ ಮತ್ತು ಶಿಕ್ಷಣ ಎರಡೂ ಯುವಜನತೆಯ ವೈಚಾರಿಕ ಪ್ರಜ್ಞೆ ಉದಯಿಸಲು ನೆರವಾಗಬೇಕು. ಮಾನವೀಯ ಮೌಲ್ಯಗಳ ದಾರಿದೀಪವಾಗಿ ಬೆಳಗಬೇಕು ಎಂಬ ಆಶಯವನ್ನು ಕಾಯ್ಕಿಣಿ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ವಿಶ್ವವಿದ್ಯಾಲಯವನ್ನು ಈ ಉನ್ನತ ಮಟ್ಟಕ್ಕೆ ಕಟ್ಟಿ ಬೆಳೆಸುವಲ್ಲಿ ಹಲವು ಮಹನೀಯರು ಕಾರಣಕರ್ತರಾಗಿದ್ದಾರೆ. ಆದರೆ ವಿವಿಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಗುರುತರ ಸವಾಲು ನಮ್ಮ ಮುಂದಿದೆ. ಸರ್ಕಾರದ ಅನುದಾನದ ಕೊರತೆ, ನೇಮಕಾತಿಯಲ್ಲಿ ಹಿನ್ನೆಡೆ, ಆಂತರಿಕ ಸಂಪನ್ಮೂಲಗಳ ಕ್ರೋಢೀರಣದಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದರು.
ಕುಲಸಚಿವ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಹಣಕಾಸು ಅಧಿಕಾರಿ ಪ್ರೊ. ಎಚ್. ಎನ್. ರಮೇಶ್, ಸಿಂಡಿಕೇಟ್ ಸದಸ್ಯರುಗಳು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿವಿಧ ವಿಭಾಗಗಳ ಅಧ್ಯಾಪಕರು, ಸಿಬ್ಬಂದಿವರ್ಗ, ವಿದ್ಯಾರ್ಥಿಗಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಳೆ ಸಮೀಕ್ಷೆ ವರದಿ “ಅಪ್ರೂವ್” ಇದ್ದವರಿಗೆ ಮಾತ್ರ ವಿಮೆ ಹಾಗೂ ಪರಿಹಾರ: ರೈತರಿಗೆ ಮುನ್ನೆಚ್ಚರಿಕೆ ಸೂಚನೆ
ಅವರು MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.