ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳು ದಂಧೆ ; ತಡೆಗಟ್ಟುವಲ್ಲಿ ವಿಫಲರಾದ ಅಧಿಕಾರಿಗಳು

Written by Mahesh Hindlemane

Published on:

ಹೊಸನಗರ ; ತಾಲ್ಲೂಕಿನ ಹಲವೆಡೆ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಇದಕ್ಕೆ ಅಂಕುಶ ಹಾಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಎಲ್ಲೆಡೆ ಅಕ್ರಮದ್ದೇ ಕಾರುಬಾರು : 

📢 Stay Updated! Join our WhatsApp Channel Now →

ಅಕ್ರಮ ಮರಳು ದಂಧೆಯು ತಾಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿದ್ದು ಇದಕ್ಕೆ ಉದಾಹರಣೆ ಎಂಬಂತೆ ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಶರಾವತಿ ಉಪನದಿ ಜನ್ನಂಗಿ ನದಿಯ ಮುತ್ತಲ ಹೊಳೆಯಲ್ಲಿ ಎಗ್ಗಿಲ್ಲದೇ ಈ ದಂಧೆ ನಡೆಯುತ್ತಿದ್ದು ನದಿ ದಡದ ಅಚ್ಚುಕಟ್ಟುದಾರರಾದ ಪುಟ್ಟಸ್ವಾಮಿ ಕಲ್ಲುಕೊಪ್ಪ ಎಂಬುವರು ಗ್ರಾಮಸ್ಥರ ಮನವಿಗೂ ಸ್ಪಂದಿಸದೆ ರಾತ್ರಿ ಹೊತ್ತಿನಲ್ಲಿ ಉತ್ತರ ಪ್ರದೇಶದ ಕೂಲಿ ಆಳುಗಳನ್ನು ಬಳಸಿಕೊಂಡು ನದಿ ಒಡಲನ್ನು ಬಗೆದು ಮರಳು ಮಾರಾಟ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧಿಕಾರಿಗಳು ಹಲವು ಬಾರಿ ಎಚ್ಚರಿಕೆ ನೀಡಿದರೂ ಕೂಡ ಇದಾವುದನ್ನು ಲೆಕ್ಕಿಸದೆ ಅಕ್ರಮವಾಗಿ ಮರಳು ಮಾರಾಟ ಮಾಡುತ್ತಿದ್ದಾರೆ. ಅಕ್ರಮವಾಗಿ ಮರಳು ಸಾಗಾಟ ಮಾಡುವ ರಸ್ತೆಯಲ್ಲಿ ಪ್ರತಿನಿತ್ಯ ರೈತರು, ವಿದ್ಯಾರ್ಥಿಗಳು ಓಡಾಡಲು ಅಸಾಧ್ಯವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ‌.

ಈ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯ ಭದ್ರಪ್ಪಗೌಡ ನೇತೃತ್ವದಲ್ಲಿ ಗ್ರಾಮಸ್ಥರು ಅಕ್ರಮವಾಗಿ ಮರಳು ದಂಧೆ ತಡೆಯಲು ಮರಳು ಸಾಗಾಟ ಮಾಡುವ ರಸ್ತೆಗೆ ಅಡ್ಡಲಾಗಿ ಟ್ರಂಚ್ ನಿರ್ಮಾಣ ಮಾಡಿ ಅಕ್ರಮ ಮರಳು ದಂಧೆಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ.

ರಾತ್ರಿ ಪೂರಾ ದಂಧೆ : 

ಅಕ್ರಮ ಮರಳು ಸಾಗಾಟ ರಾತ್ರಿ ಪೂರ್ತಿ ನಡೆಯುತ್ತದೆ. ಬೆಳಗಾಗುವಷ್ಟರಲ್ಲಿ ಎಲ್ಲವೂ ನಿಂತು ಹೋಗಿ ಏನೂ ಆಗಿಲ್ಲವೆಂಬಂತೆ ಪರಿಸ್ಥಿತಿ ನೆಲೆಸುತ್ತಿದೆ. ಈ ದಂಧೆ ಪೊಲೀಸರ ಕೃಪಾಶೀರ್ವಾದದಿಂದಲೇ ನಡೆಯುತ್ತಿದೆ ಎಂಬ ಅನುಮಾನ ಇಲ್ಲಿನ ಜನರದ್ದು.

ಲಾರಿಗಳ ಆರ್ಭಟ : 

ರಾತ್ರಿ ವೇಳೆ ಓಡಾಟ ನಡೆಸುವವರಿ ಲಾರಿಗಳ ಆರ್ಭಟ ಕಾಣಿಸುತ್ತದೆ. ಜನರಿಗೆ ಎಲ್ಲೆಂದರಲ್ಲಿ ಕಾಣ ಸಿಗುವ ಮರಳು ತುಂಬಿದ ಲಾರಿಗಳು ಪೊಲೀಸರ ಕಣ್ಣಿಗೆ ಏಕೆ ಬೀಳುವುದಿಲ್ಲ? ಎಂಬ ಅಚ್ಚರಿ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ‌.

ಬರಿದಾದ ಭೂ ತಾಯಿ ಒಡಲು : 

ಮರಳು ದಂಧೆಯಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿದ್ದು, ಭೂಮಿಯನ್ನು ಆಳವಾಗಿ ಬಗೆದಿರುವುದರಿಂದ ಕೃಷಿ ಭೂಮಿ ಬರಡು ಭೂಮಿಯಾಗಿ ಮಾರ್ಪಾಡು ಹೊಂದುತ್ತಿದೆ.

ಚಿಕ್ಕಜೇನಿ ಗ್ರಾಪಂ ಸದಸ್ಯ ಭದ್ರಪ್ಪಗೌಡ ನೇತೃತ್ವದಲ್ಲಿ ಗ್ರಾಮಸ್ಥರು ಅಕ್ರಮವಾಗಿ ಮರಳು ದಂಧೆ ತಡೆಯಲು ಮರಳು ಸಾಗಾಟ ಮಾಡುವ ರಸ್ತೆಗೆ ಅಡ್ಡಲಾಗಿ ಟ್ರಂಚ್ ನಿರ್ಮಾಣ ಮಾಡುತ್ತಿರುವುದು.

ಕೆರೆ ಕಟ್ಟೆಗಳ ನಾಶ : 

ಮರಳು ಫಿಲ್ಟರ್‌ಗೆ ಕೆರೆ ಕಟ್ಟೆಗಳ ನೀರು ಬಳಸುವುದು, ಕೆರೆಕಟ್ಟೆಗಳ ಅಂಗಳದಲ್ಲೇ ಮರಳು ದೋಚುವುದರಿಂದ ನೀರಿನ ಮೂಲಗಳು ಬರಿದಾಗುತ್ತಿವೆ. ಹೀಗಾದರೆ ಮುಂದೊಂದು ದಿನ ಕುಡಿಯುವ ನೀರಿಗೆ ತತ್ವರ ಉಂಟಾಗುವುದರಲ್ಲಿ ಸಂಶಯವಿಲ್ಲ.

ತಡೆಯೋರು ಯಾರು? : 

ಜನರಲ್ಲಿ ಕೊನೆಯಾಗಿ ಕಾಡುತ್ತಿರುವ ಪ್ರಶ್ನೆ ಎಂದರೆ, ಈ ಅಕ್ರಮವನ್ನು ತಡೆಯೋರು ಯಾರು ಎಂಬುದು. ಗಣಿ ಮತ್ತು ಭೂಗರ್ಭ ಶಾಸ್ತ್ರ ಇಲಾಖೆ, ಪೊಲೀಸ್‌ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಹೀಗೆ ಅಕ್ರಮ ತಡೆಯಬೇಕಾದವರೆಲ್ಲರೂ ದಂಧೆಕೋರರ ಜತೆ ಕೈಜೋಡಿಸಿರುವ ಶಂಕೆ ಇದೆ. ಇದಕ್ಕಾಗಿಯೇ ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿರುವುದೇ ಸಾಕ್ಷಿ. ಹೀಗೆ ರಕ್ಷಕರೇ ಭಕ್ಷಕರಾಗಿರುವುದರಿಂದ ಜನರ ಹಿತ ಕಾಪಾಡೋರು ಯಾರು ಎಂಬ ಚಿಂತೆ ಇಲ್ಲಿನ ಸಾರ್ವಜನಿಕರದ್ದು.

ಅಧಿಕಾರಿಗಳಿಗೆ ಜೀವಭಯ ! : 

ಅಕ್ರಮ ದಂಧೆಗೆ ಕೇವಲ ಅಧಿಕಾರಿಗಳನ್ನು ದೂರಿ ಫಲವಿಲ್ಲ. ಅವರೂ ನಮ್ಮಂತೆ ಮನುಷ್ಯರು. ಅಕ್ರಮ ದಂಧೆ ತಡೆಯಲು ಹೋದರೆ ಅವರ ಜೀವಕ್ಕೆ ಅಪಾಯ ಇದೆ ಎನ್ನುತ್ತಾರೆ ಕೆಲವರು ಪ್ರಜ್ಞಾವಂತರು. ಸರ್ಕಾರ ಕೂಡ ಪ್ರಭಾವಿಗಳ ಪರ ವಹಿಸುವುದರಿಂದ ಅಧಿಕಾರಿಗಳು ಎಲ್ಲವೂ ಕಂಡರೂ ಕಾಣದಂತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

Leave a Comment