ಹೊಸನಗರ ; ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಾಗವಾರ ಬಣವು ಸಮಾಜದಲ್ಲಿ ಶೋಷಿತರ ದುರ್ಬಲರ ನೊಂದವರ ದೌರ್ಜನ್ಯಕ್ಕೊಳಗಾದವರ ಹಿಂದುಳಿದ ಅಲ್ಪಸಂಖ್ಯಾತರ ಮಹಿಳೆಯರ ಪರವಾಗಿ ಇದುವರೆಗೆ ಹೋರಾಟ ನಡೆಸಿಕೊಂಡು ಬರುತ್ತಿರುವುದು ಸರಿಯಷ್ಟೆ. ಹೊಸನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಯನ್ನು ವಿಸರ್ಜಿಸಲಾಗಿದೆ ಎಂದು ನಾಗವಾರ ಬಣದ ಜಿಲ್ಲಾ ಸಂಚಾಲಕ ಕೆ.ವಿ. ನಾಗರಾಜ್ ಅರಳಸುರಳಿ ತಿಳಿಸಿದ್ದಾರೆ.
ಅವರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಇತ್ತೀಚೆಗೆ ಸಂಘಟನೆಯ ಕೆಲವು ಪದಾಧಿಕಾರಿಗಳು ತಮ್ಮ ಜೀವನೋಪಾಯಕ್ಕೆ ಸಂಘಟನೆಯನ್ನು ದುರ್ಬಲಗೊಳಿಸುತ್ತಿರುವುದು ಕಂಡು ಬರುತ್ತಿದೆ. ಸಂಘಟನೆಯ ಹೆಸರಿನಲ್ಲಿ ಕರಪತ್ರವನ್ನು ಮುದ್ರಿಸಿಕೊಂಡು ಸರ್ಕಾರಿ ಕಛೇರಿಗಳಿಗೆ ಹೋಗಿ ಹಣ ಕೊಡುವಂತೆ ಪೀಡಿಸುತ್ತಿರುವುದು ಹಾಗೂ ಬೆದರಿಕೆ ಹಾಕುತ್ತಿರುವುದು ಜಿಲ್ಲಾ ಸಮಿತಿಗೆ ದೂರು ಬಂದಿರುತ್ತದೆ. ಅದರಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಾಗವಾರ ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಸರ್ಕಾರಿ ಕಛೇರಿಗೆ ಹೋಗಿ ಹಣ ವಸೂಲಾತಿ ಮಾಡುವುದಾಗಲಿ ಸರ್ಕಾರಿ ನೌಕರರಿಗೆ ಬೆದರಿಕೆ ಹಾಕುವುದಾಗಲಿ ಮಾಡಿರುವುದಿಲ್ಲ. ಇತ್ತೀಚೆಗೆ ಹೊಸನಗರ ತಾಲ್ಲೂಕು ಶಾಖೆಯ ಕೆಲವು ಪದಾಧಿಕಾರಿಗಳು ಸರ್ಕಾರಿ ಕಛೇರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಪಿಡಿಒಗಳ ಹತ್ತಿರ ಹೋಗಿ ಕರಪತ್ರವನ್ನು ನೀಡಿ ಹಣ ಕೊಡುವಂತೆ ಬೆದರಿಸುತ್ತಿರುವುದು ಕಾರ್ಯಕ್ರಮದ ಬಗ್ಗೆ ಹಣ ವಸೂಲು ಮಾಡುತ್ತಿರುವ ಬಗ್ಗೆ ಜಿಲ್ಲಾ ಸಮಿತಿಗೆ ದೂರು ಬಂದಿರುವುದು ಸರಿಯಷ್ಟೆ. ಹೊಸನಗರ ತಾಲ್ಲೂಕು ಸಮಿತಿಯ ಕೆಲವು ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ ಬೇರೆ ಸಂಘಟನೆಯ ಜೊತೆ ಕೈಜೋಡಿಸುತ್ತಿರುವುದನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ತೀವ್ರವಾಗಿ ಖಂಡಿಸಿದೆ.
ಆದ್ದರಿಂದ ಸಂಘಟನೆಯ ಹಿತದೃಷ್ಟಿಯಿಂದ ಹಾಗೂ ಲಕ್ಷ್ಮಿನಾರಾಯಣರಾವ್ ರವರ ಹೆಸರಿಗೆ ಕಳಂಕ ತರುತ್ತಿರುವುದನ್ನು ಯಾವುದೇ ಮುಲಾಜಿಲ್ಲದೆ ಸಂಘಟನೆಯಿಂದ ಹೊರಹಾಕಿ ಹೊಸ ಪದಾಧಿಕಾರಿಗಳನ್ನು ಮುಂದಿನ ದಿನಾಂಕದಂದು ಆಯ್ಕೆ ಮಾಡಲಾಗುವುದು. ಸಂಘಟನೆಯ ಹೆಸರಿನಲ್ಲಿ ಕರಪತ್ರಗಳನ್ನು ಹಿಡಿದುಕೊಂದು ಸರ್ಕಾರಿ ಅಧಿಕಾರಿಗಳ ಹತ್ತಿರ ಹಣ ಕೊಡುವಂತೆ ಬೆದರಿಸಿದರೆ ಕೂಡಲೇ ಅಂತವರ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕೆಂದು ಕೇಳಿಕೊಂಡರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.