ಶಿವಮೊಗ್ಗ:ಜೀವನದಲ್ಲಿ ತಪ್ಪು ಮಾಡದವರು ಯಾರೂ ಇಲ್ಲ. ಆದರೆ ಮಾಡಿದ ತಪ್ಪಿಗಾಗಿ ಕೊರಗುತ್ತಾ ಕುಳಿತುಕೊಳ್ಳದೇ, ತಪ್ಪನ್ನು ತಿದ್ದಿಕೊಂಡು ಒಳ್ಳೆಯ ಮನುಷ್ಯನಾಗಲು ಪ್ರಯತ್ನಿಸುವುದು ಅತ್ಯಂತ ಮುಖ್ಯವಾಗಿದೆ. ತಪ್ಪನ್ನು ಸರಿಪಡಿಸಿಕೊಂಡು ಉತ್ತಮವಾಗಿ ಬದುಕಲು ಎಲ್ಲರಿಗೂ ಅವಕಾಶವಿದೆ. ಯಾವ ತಪ್ಪಿತಸ್ಥನೂ ಖಾಯಂ ತಪ್ಪಿತಸ್ಥನಾಗಿರಲು ಸಾಧ್ಯವಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್. ಹೇಳಿದರು.
ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ, ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಶಾಹಿ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕೇಂದ್ರ ಕಾರಾಗೃಹದ ಬಂಧಿತರಿಗಾಗಿ ಅಗರಬತ್ತಿ ವಿಭಾಗದಲ್ಲಿ ಪ್ರಾರಂಭವಾದ ಹೊಲಿಗೆ ತರಬೇತಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅವರು ಮುಂದುವರಿಸಿ, “ಜೀವನದಲ್ಲಿ ಸುಧಾರಣೆಗೊಂಡು ಪ್ರಗತಿ ಸಾಧಿಸಲು ಎಲ್ಲರಿಗೂ ಅವಕಾಶಗಳು ಸಿಗುತ್ತವೆ. ಕಾರಾಗೃಹಕ್ಕೆ ಬಂದವರು ತಪ್ಪಿತಸ್ಥ ಭಾವನೆಯಿಂದ ಕುಗ್ಗುವುದಕ್ಕಿಂತ ಶಿಕ್ಷಣ, ತರಬೇತಿ ಮತ್ತು ಕೌಶಲ್ಯಾಭಿವೃದ್ಧಿಯ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ, ಮುಂದೆ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಬಂಧಿತರು ಬಿಡುಗಡೆಯ ನಂತರ ಉತ್ತಮ ವ್ಯಕ್ತಿಗಳಾಗಿ, ಇತರರ ಬದುಕಿಗೆ ಹಾಗೂ ಸಮಾಜಕ್ಕೆ ಪ್ರೇರಣೆಯಾಗುವಂತಾಗಬೇಕು” ಎಂದು ಸಲಹೆ ನೀಡಿದರು.
ಬಂಧಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವ ಶಾಹಿ ಎಕ್ಸ್ಪೋರ್ಟ್ಸ್ ಸಂಸ್ಥೆಯ ಪ್ರಯತ್ನವನ್ನು ಶ್ಲಾಘಿಸಿದ ನ್ಯಾಯಾಧೀಶರು, “ಉತ್ತಮ ಗುಣಮಟ್ಟ ಮತ್ತು ಸುಧಾರಿತ ತಂತ್ರಜ್ಞಾನವನ್ನು ಒಳಗೊಂಡ ಟೈಲರಿಂಗ್ ತರಬೇತಿ ಇವರ ಬದುಕಿಗೆ ಹೊಸ ಭರವಸೆಯನ್ನು ತುಂಬುತ್ತದೆ. ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡು, ಪರಿಣತಿ ಗಳಿಸಿದರೆ ಬಂಧಿತರು ತಮ್ಮ ಬದುಕಿನಲ್ಲಿ ನಿಜವಾದ ಬದಲಾವಣೆಯನ್ನು ಕಂಡುಕೊಳ್ಳಬಹುದು” ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಹಿ ಎಕ್ಸ್ಪೋರ್ಟ್ಸ್ ಸಂಸ್ಥೆಯ ಎಜಿಎಂ ಲಕ್ಷ್ಮಣ ಧರ್ಮಟ್ಟಿ, “ಬಂಧಿಗಳಿಗೆ ವೃತ್ತಿಪರ ಮಟ್ಟದ ಟೈಲರಿಂಗ್ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಶಾಹಿ ಸಂಸ್ಥೆಯಲ್ಲಿಯೇ ಉದ್ಯೋಗಾವಕಾಶ ಕಲ್ಪಿಸಲಾಗುತ್ತದೆ” ಎಂದರು.
ಶಿವಮೊಗ್ಗ ರೋಟರಿ ಕ್ಲಬ್‌ನ ನಿಯೋಜಿತ ಜಿಲ್ಲಾ ಗವರ್ನರ್ ವಸಂತಕುಮಾರ್ ಹೋಬಳಿದಾರ್ ಅವರು, “ವಿದ್ಯೆಯ ಜೊತೆಗೆ ಕೌಶಲ್ಯವೂ ಅತಿ ಮುಖ್ಯ. ಕೆಲಸಕ್ಕೆ ತಕ್ಕ ಕೌಶಲ್ಯವಿದ್ದರೆ ಮಾತ್ರ ಉತ್ತಮ ಅವಕಾಶಗಳು ದೊರೆಯುತ್ತವೆ. ಕೌಶಲ್ಯ ಹೊಂದಿರುವವರು ಒಳ್ಳೆಯ ಕೆಲಸಗಾರರೂ, ಭವಿಷ್ಯದ ಉದ್ಯಮಿಗಳೂ ಆಗಬಹುದು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ. ಪಿ. ರಂಗನಾಥ ಅವರು, “ಶಾಹಿ ಎಕ್ಸ್ಪೋರ್ಟ್ಸ್ ಸಂಸ್ಥೆಯ ಸಹಕಾರದಿಂದ ಕಾರಾಗೃಹದ 300 ಬಂಧಿತರಿಗೆ ಟೈಲರಿಂಗ್ ತರಬೇತಿ ನೀಡುವ ಯೋಜನೆ ಇದೆ. ಪ್ರಾರಂಭಿಕ ಹಂತದಲ್ಲಿ 60 ಬಂಧಿತರಿಗೆ ತರಬೇತಿ ನೀಡಲಾಗುತ್ತದೆ” ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಯವರ ಕಚೇರಿಯ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಜಯಸ್ವಾಮಿ ಎಂ.ಎಂ., ಶಿವಮೊಗ್ಗ ಪರೋಪಕಾರಂ ಸಂಸ್ಥೆಯ ಸಂಚಾಲಕ ಶ್ರೀಧರ ಎನ್.ಎಂ., ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಕು. ಪ್ರೀತಿ ಆರ್., ಮಹಿಳಾ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಕು. ದಿವ್ಯ, ಜೈಲರ್‌ಗಳಾದ ಶ್ರೀಶೈಲ ಎಸ್. ಕಟ್ಟಿಮನಿ, ಸುಷ್ಮಾ ಬಿ. ವಡಗೇರ, ಶರಣಬಸವ, ವಿಜಯಕುಮಾರ್ ಹಾಗೂ ಶಾಹಿ ಎಕ್ಸ್ಪೋರ್ಟ್ಸ್ ಸಂಸ್ಥೆಯ ತರಬೇತಿ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರ್ಥನೆ ಚಂದ್ರ ಹೆಮ್ಮಾಡಿ ನೆರವೇರಿಸಿದರು. ಸ್ವಾಗತ ಭಾಷಣವನ್ನು ಶಿಕ್ಷಕರಾದ ಗೋಪಾಲಕೃಷ್ಣ ಸಲ್ಲಿಸಿದರು. ಕಾರ್ಯಕ್ರಮವನ್ನು ಲೀಲಾ ಎಸ್.ಎನ್. ಅವರು ನಿರ್ವಹಿಸಿದರು.
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650