ಎಸ್‌ಸಿ ಮತ್ತು ಎಸ್‌ಟಿ ಗುತ್ತಿಗೆದಾರರಿಗೆ ನೀಡಿರುವ ಮೀಸಲಾತಿ ಮಿತಿ ₹ 2 ಕೋಟಿವರೆಗೆ ಹೆಚ್ಚಿಸಲು ಆಗ್ರಹ

0 120

ಶಿವಮೊಗ್ಗ: ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ನೀಡಿರುವ ಮೀಸಲಾತಿ ಮಿತಿಯನ್ನು 2ಕೋಟಿ ರೂ.ವರೆಗೆ ಹೆಚ್ಚಿಸಬೇಕೆಂದು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್. ಮಹಾದೇವ ಸ್ವಾಮಿ ಆಗ್ರಹಿಸಿದರು.


ಅವರು ಬುಧವಾರ ಮಥುರಾ ಪ್ಯಾರಾಡೈಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್‌ಸಿ/ಎಸ್ಟಿ. ವಿದ್ಯಾವಂತ ನಿರುದ್ಯೋಗಿ ಯುವಕರು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡು ಸ್ವಾಭಿಮಾನಿಗಳಾಗಿ ಜೀವನ ನಡೆಸಲು ಕಳೆದ ಜುಲೈ 27ರಂದು 1ಕೋಟಿ ರೂ. ವರೆಗಿನ ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ನೀಡುವ ವಿಚಾರವಾಗಿ ಪಾರದರ್ಶಕ ಕಾಯಿದೆಗೆ ತಿದ್ದುಪಡಿ ತರಲಾಗಿತ್ತು ಎಂದರು.


ಆದರೆ ಕಾರ್ಯಪಾಲಕ ಅಭಿಯಂತರರು ಉದ್ದೇಶಪೂರ್ವಕವಾಗಿ ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಪ್ಯಾಕೇಜ್ ಮೂಲಕ ಟೆಂಡರ್ ಕರೆಯುವುದು ಅಥವಾ ಕೆಆರ್‌ಐಡಿಎಲ್ ಮತ್ತು ನಿರ್ಮಿತಿ ಕೇಂದ್ರಗಳ ಮೂಲಕ ನಿರ್ವಹಿಸಲು ಅವಕಾಶ ನೀಡಿ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ದೂರಿದರು.


ಮೀಸಲಾತಿ ಮಿತಿಯನ್ನು 2ಕೋಟಿ ರೂ.ವರೆಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದು, ಮುಂದಿನ ಅಧಿವೇಶನದಲ್ಲಿ ಬಿಲ್ ಮಂಡಿಸಬೇಕು. ಇದರಿಂದ ರಾಜ್ಯಾದ್ಯಂತ ಸುಮಾರು 15 ಸಾವಿರ  ಗುತ್ತಿಗೆದಾರರು ಈ ಸೌಲಭ್ಯ ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಎಸ್‌ಸಿ/ಎಸ್ಟಿ ಗುತ್ತಿಗೆದಾರರು ಇ-ಟೆಂಡರ್‌ನಲ್ಲಿ ಭಾಗವಹಿಸಲು ಲೈನ್ ಆಫ್ ಕ್ರೆಡಿಟ್ ಪಡೆಯುವುದು ಅವಶ್ಯಕ ಎಂಬುದನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.


2008ರಿಂದ ಈಚೆಗೆ ಇದ್ದ ಗುತ್ತಿಗೆದಾರರಿಗೆ ಲೈಸೆನ್ಸ್ ನೀಡಬೇಕು ಹಾಗೂ ನವೀಕರಣ ಮಾಡಬೇಕು. ಕೆಆರ್‌ಐಡಿಎಲ್‌ಗೆ 4ಜಿ ವಿನಾಯಿತಿ ರದ್ದುಗೊಳಿಸಿ ಸಾಮಾನ್ಯ ಗುತ್ತಿಗೆದಾರರಂತೆ ಇ-ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಹಾಗೂ ನಿರ್ಮಿತಿ ಕೇಂದ್ರಕ್ಕೆ 4ಜಿ ವಿನಾಯಿತಿ ನವೀಕರಣಗೊಳಿಸದೆ ಇರಬೇಕು ಎಂದು ಆಗ್ರಹಿಸಿದ ಅವರು, ಎಸ್‌ಸಿ/ಎಸ್‌ಟಿ ಗುತ್ತಿಗೆದಾರರಿಗೆ ಅನ್ಯಾಯವಾದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.


ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ಶಿವಕುಮಾರ್. ಕಾರ್ಯದರ್ಶಿ ಕೆ. ಲೋಕೇಶ್, ಖಜಾಂಚಿ ಚಂದ್ರಶೇಖರ್ ಖಾನ್ ಪೇಟ್, ಪ್ರಮುಖರಾದ ಚಂದ್ರಪ್ಪ, ಎಸ್.ಟಿ. ರವಿ, ಪರಮೇಶ್ವರ ನಾಯಕ್, ಜಿ.ವಿ. ಅಶೋಕ್ ಇನ್ನಿತರರು ಉಪಸ್ಥಿತರಿದ್ದರು.

Leave A Reply

Your email address will not be published.