ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ | ಜನರ ತೆರಿಗೆ ಹಣ ಪುನಃ ಜನರಿಗೆ ನೀಡುವುದೇ ಗ್ಯಾರಂಟಿ ಯೋಜನೆ ; ಸಚಿವ ಮಧು ಬಂಗಾರಪ್ಪ

0 221

ಶಿಕಾರಿಪುರ : ರಾಜ್ಯ‌ ಹಾಗೂ ದೇಶದಲ್ಲಿ ನುಡಿದಂತೆ ನಡೆದಿರುವ ಪಕ್ಷವೇನಾದರೂ ಇದೆ‌ ಎಂದರೆ ಅದು ನಮ್ಮ ಕಾಂಗ್ರೆಸ್ ಪಕ್ಷ. ಜನರ ತೆರಿಗೆ ಹಣವನ್ನು ಪುನಃ ಜನರಿಗೆ ನೀಡುವುದೇ ಐದು ಗ್ಯಾರಂಟಿ ಯೋಜನೆಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. 

ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಸಮೀಪ ಭಾನುವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ, ಪುರಸಭೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಸರ್ಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿ ಮತದಾರರಿಗೆ ನೀಡಿದ ಆಶ್ವಾಸನೆಯಂತೆ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ರಾಜ್ಯ‌ ಹಾಗೂ ದೇಶದಲ್ಲಿ ನುಡಿದಂತೆ ನಡೆದಿರುವ ಪಕ್ಷವೇನಾದರೂ ಇದೆ‌ ಎಂದರೆ ಅದು ನಮ್ಮ ಕಾಂಗ್ರೆಸ್ ಪಕ್ಷ. ಜನರ ತೆರಿಗೆ ಹಣವನ್ನು ಪುನಃ ಜನರಿಗೆ ನೀಡುವುದೇ ಐದು ಗ್ಯಾರಂಟಿ ಯೋಜನೆಯಾಗಿದೆ. ಇದನ್ನು ಅನ್ಯ ಪಕ್ಷದವರು ಸರ್ಕಾರದ ಗ್ಯಾರಂಟಿ ಯೋಜನೆಗೆ ಹಣವಿಲ್ಲ ಖಜಾನೆ ಖಾಲಿಯಾಗಿದ್ದು, ಇದು  ಮುಂಬರುವ ಲೋಕಸಭಾ ಚುನಾವಣೆಯ ನಂತರ ಸ್ಥಗಿತವಾಗಲಿದೆ ಎಂದು ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಲಿದ್ದು, ಈ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂದು ಮತ್ತೊಮ್ಮೆ ನಾನು ಗ್ಯಾರಂಟಿಯಂದು ಹೇಳುವುದರ ಮೂಲಕ ಜನರಲ್ಲಿ ಭರವಸೆ ಮೂಡಿಸಿದರು.

ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಎಷ್ಟು ಶಾಶ್ವತ ಎಂದು ಹೇಳುವುದಾದರೆ ಹಿಂದೆ ಎಸ್ ಬಂಗಾರಪ್ಪರವರು ತಮ್ಮ ಅವಧಿಯಲ್ಲಿ ರಾಜ್ಯದ ರೈತರ ಪಂಪ್‌ಸೆಟ್ ಗಳಿಗೆ 10 ಹೆಚ್.ಪಿ ವರೆಗೆ ಉಚಿತ ವಿದ್ಯುತ್ ನೀಡಿದರು. ಆಶ್ರಯ‌, ಆರಾಧನಾ ಯೋಜನೆ, ಇವುಗಳನ್ನು 32 ವರ್ಗಗಳ ಹಿಂದೆ ನೀಡಲಾಗಿತ್ತು ಅದನ್ನು  ಈವರೆಗೂ ಯಾವುದೇ ಸರ್ಕಾರ ತೆಗೆದು ಹಾಕುವ ಧೈರ್ಯ ಮಾಡಿಲ್ಲ ಹಾಗೂ ಯಾರಿಗಾದರೂ ಧಮ್ಮು ಇದಿಯಾ? ಎಂದು ಪ್ರಶ್ನಿಸಿದರು.

ತಮಗೆ ಅಧಿಕಾರವಿಲ್ಲದಿದ್ದರೂ ಅಂದು ರಾಜ್ಯದಲ್ಲಿ ಬರಗಾಲವಿದ್ದಾಗ, ಶಿಕಾರಿಪುರ ಸೇರಿದಂತೆ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ ರೈತರಿಗೆ ಬಿತ್ತನೆ ಬೀಜ, ಹಾಗೂ ಬಡವರಿಗೆ ಊಟಕ್ಕಾಗಿ ಅಕ್ಕಿ ವಿತರಣೆ ಮಾಡಿದರು. ಹೀಗೆ ಜಾತ್ಯತೀತವಾಗಿ, ಪಕ್ಷಾತೀತವಾಗಿ ಎಲ್ಲರಿಗೂ ಸಹಕಾರ ನೀಡಲಾಗಿತ್ತು. ಅಂತೆಯೇ ಈ ಬಾರಿ ಕಾಂಗ್ರೆಸ್ ಪಕ್ಷ ಗ್ಯಾರಂಟಿಯಾದ ಐದು ಯೋಜನೆಗಳನ್ನು ಸಹ ಸರ್ಕಾರವಿರುವವರೆಗೂ ಯಾವುದೇ ಕಾರಣಕ್ಕೂ ವಾಪಾಸ್ ಪಡೆಯಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

ಶಿಕ್ಷಣ ಸಚಿವರಾಗಿರುವ ನಾನು ನನ್ನ ವ್ಯಾಪ್ತಿಗೆ ಅನುದಾನಿತ ಶಾಲೆ, ಸರ್ಕಾರಿ ಶಾಲೆ ಖಾಸಗಿ ಶಾಲೆ ಎಂದು 76 ಸಾವಿರ ಶಾಲೆಗಳು ಬರುತ್ತದೆ. ಈ ಶಾಲಾ ವ್ಯಾಪ್ತಿಯಲ್ಲಿ 1,20 ಲಕ್ಷ  ವಿದ್ಯಾರ್ಥಿಗಳಿಗೆ ಸೇವೆ ಮಾಡುತ್ತಿದ್ದೇನೆ ಇದು ನನ್ನ ಸೌಭಾಗ್ಯ. ನನ್ನ ಇಲಾಖೆಗೆ ಕಳೆದ ವರ್ಷ 37 ಸಾವಿರ ಕೋಟಿ ಅನುದಾನ ನೀಡಲಾಗಿತ್ತು. ಆದರೆ ಈಗ ಸಿದ್ಧರಾಮಯ್ಯರವರು 44,500 ಕೋಟಿ ಅನುದಾನ ನೀಡಿದ್ದಾರೆ ಇದಕ್ಕಾಗಿ ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಸೊರಬ ಹಾಗೂ ಶಿಕಾರಿಪುರ ತಾಲ್ಲೂಕಿನ ಮತ್ತು ಶಿವಮೊಗ್ಗ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ರಾಜ್ಯದಲ್ಲಿ ಸಿದ್ಧರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ರವರ ಮುಂದಾಳುತ್ವದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದಾದರೆ ಎಲ್ಲಾ ಮತದಾರರ ಸಹಕಾರವಾಗಿದೆ. ರಾಜ್ಯ ಸರ್ಕಾರವು 2023 ರ ಚುನಾವಣೆಯ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯಂತೆ ಇಂದು ನಡೆದಿದೆ. ಯಾರಿಗೆ ಈ ಯೋಜನೆ ಸಿಕ್ಕಿಲ್ಲವೋ ಅವರಿಗೆ ಸೌಲಭ್ಯ ದೊರಕಿಸಿ ಕೊಡುವುದಕ್ಕೆ ಇಂದು ಈ ಕಾರ್ಯಕ್ರಮ. ರಾಜ್ಯದ ಪ್ರತಿ ಕಡು ಬಡವರಿಗೆ ಈ ಯೋಜನೆ ದೊರಕುವಂತಾಗಬೇಕು ಎಂಬುದೇ ಇದರ ಉದ್ದೇಶವಾಗಿದೆ ಎಂದ ಅವರು, ತಾಲ್ಲೂಕಿನಲ್ಲಿ ಈಗಾಗಲೇ ಜಾತ್ಯತೀತವಾಗಿ ಪಕ್ಷಾತೀತವಾಗಿ ಗೃಹಲಕ್ಷ್ಮಿ ಯೋಜನೆಗೆ 10 ಕೋಟಿ 74 ಲಕ್ಷ ರೂಪಾಯಿಗಳ ವಿನಿಯೋಗವಾಗಿದ್ದು, 37,744 ಮನೆಗಳು ಗೃಹ ಜ್ಯೋತಿ ವ್ಯಾಪ್ತಿಗೆ ಒಳಪಟ್ಟಿದ್ದರೆ, 12,74,000 ಮಹಿಳೆಯರು ಶಕ್ತಿ ಯೋಜನೆ ಅಡಿಯಲ್ಲಿ ತಾಲ್ಲೂಕಿನಲ್ಲಿ ಸಂಚಾರ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು, 55,947 ಕುಟುಂಬಗಳು ಉಚಿತ ಅಕ್ಕಿ ಸೌಲಭ್ಯವನ್ನು ಪಡೆಯುತ್ತಿವೆ ಈ ಎಲ್ಲಾ ಯೋಜನೆಗಳನ್ನ ಸದುಪಯೋಗವನ್ನು ಪಡೆಯುತ್ತಿರುವ ಫಲಾನುಭವಿಗಳು ಇದರಲ್ಲಿ ಯಾರಾದರೊಂದಕ್ಕೆ, ಯಾರಿಗಾದರೂ ಕಮಿಷನ್ ಕೊಟ್ಟು ಈ ಎಲ್ಲಾ ಯೋಜನೆಗಳ ಲಾಭ ಪಡೆಯುತ್ತಿದ್ದೀರಾ? ಎಂದು ರಾಜ್ಯ ಸರ್ಕಾರವು 50% ಕಮಿಷನ್ ಸರ್ಕಾರ ಎಂದು ಹೇಳಿದ ವಿರೋದ ಪಕ್ಕದವರಿಗೆ ಟಾಂಗ್ ಕೊಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸಿಇಒ ಸ್ನೇಹ ಸುಧಾಕರ ಲೋಕಾಂಡೆ, ಸಾಗರ ಉಪವಿಭಾಗಾಧಿಕಾರಿ ಯತೀಶ್, ತಹಶೀಲ್ದಾರ್ ಮಲ್ಲೇಶಪ್ಪ ಬೀರಪ್ಪ ಪೂಜಾರ್, ಪುರಸಭಾ ಸದಸ್ಯರಾದ ನಾಗರಾಜ್ ಗೌಡ, ಗೋಣಿ ಪ್ರಕಾಶ್, ಉಳ್ಳಿ ದರ್ಶನ್, ಶಕುಂತಲಮ್ಮ ಸೌಭಾಗ್ಯಮ್ಮ ಜಯಶ್ರಿ ರೋಷನ್, ತಾಲ್ಲೂಕು ಬ್ಲಾಕ್  ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್, ಕೆಪಿಸಿಸಿ ಸದಸ್ಯ ಹಾಗೂ ನಿಕಟಪೂರ್ವ ಅಭ್ಯರ್ಥಿ ಗೋಣಿ ಮಾಲತೇಶ್, ವಿಧಾನಸಭಾ ಮಾಜಿ ಸದಸ್ಯ ಆರ್ ಪ್ರಸನ್ನಕುಮಾರ್, ಕಾಡಾ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಕೆ ಪಿ ರುದ್ರೇಗೌಡ, ಶಿವಶಂಕರ್, ಸೇರಿದಂತೆ ತಾಲ್ಲೂಕಿನ ಹಾಗೂ ಜಿಲ್ಲೆಯ ವಿವಿಧ ಇಲಾಖೆಯ ಆಡಳಿತ ಅಧಿಕಾರಿಗಳು, ಆಡಳಿತ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ಭಾನುವಾರವಾದ ಇಂದು ಸರ್ಕಾರಿ ರಜೆ ಇದ್ದರೂ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ವಿವಿಧ ಸಮಸ್ಯೆಗಳಿಂದ ಯೋಜನೆಯಿಂದ ವಂಚಿತರಾದವರು ಪುನಃ ನೋಂದಾವಣಿ ಮಾಡಿಕೊಳ್ಳಲು ಆಗಮಿಸಿ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಲಾಗಿದ್ದ ಕೌಂಟರ್ನಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದರು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಫಲಾನುಭವಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಜಾತ್ರೆಯ ವಾತಾವರಣವನ್ನೇ ಸೃಷ್ಟಿಸಿದ್ದರು.

Leave A Reply

Your email address will not be published.

error: Content is protected !!