ಕಲಾದಗಿ ಘಟನೆಗೆ ಮಳಲಿ ಶ್ರೀಗಳ ಖಂಡನೆ

0 688

ರಿಪ್ಪನ್‌ಪೇಟೆ : ಇತ್ತೀಚೆಗೆ ಬಾಗಲಕೋಟೆ ಜಿಲ್ಲೆ ಕಲಾದಗಿಯಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳಿಗೆ ಅಗೌರವ ತೋರಿಸಿದ ಘಟನೆಯನ್ನು ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಮಳಲಿಮಠದ ಸಂಸ್ಥಾನದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಖಂಡಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಉದಾತ್ತ ಸಂದೇಶವನ್ನು ಸಾರುತ್ತಾ ನಾಡಿನಾದ್ಯಂತ ಧರ್ಮ ಪ್ರಚಾರವನ್ನು ಮಾಡುತ್ತಿರುವ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಮಹಾಪೀಠವು ಸಾವಿರಾರು ಶಾಖಾ ಮಠಗಳ ಮೂಲಕ ಸಂಸ್ಕಾರವನ್ನು ಉದ್ದೀಪಿಸುವ ಕಾರ್ಯ ಮಾಡುತ್ತಿರುವುದು ಸರ್ವರಿಗೂ ತಿಳಿದ ಸಂಗತಿ. ಶ್ರೀ ರಂಭಾಪುರಿ ಪೀಠದ ಪ್ರಸ್ತುತ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಕಳೆದ ಮೂರು ದಶಕಗಳಿಂದ ದೇಶದಾದ್ಯಂತ ಅವಿಶ್ರಾಂತವಾಗಿ ಸಂಚರಿಸಿ ಧರ್ಮ ದೀವಿಗೆಯನ್ನು ಬೆಳಗುತ್ತಿದ್ದಾರೆ. ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ, ಶಾಂತಿ ಸಮೃದ್ಧಿ ಸರ್ವರಿಗಾಗಲಿ ಎಂಬ ಕಳಕಳಿಯನ್ನು ಹೊಂದಿರುವ ಪರಮಾಚಾರ್ಯರು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಗೌರವ ಪ್ರದರ್ಶಿಸಿದ್ದು ಅಕ್ಷಮ್ಯ ಅಪರಾಧ.

ಮುಗ್ಧಭಕ್ತರ ಮನಸ್ಸಿನಲ್ಲಿ ಇಲ್ಲ ಸಲ್ಲದ ಭಾವನೆಗಳನ್ನು ಬಿತ್ತಿ ವಿವಾದವನ್ನು ಹುಟ್ಟುಹಾಕುತ್ತಿರುವ ಕುತಂತ್ರಿಗಳ ಕಾರ್ಯವನ್ನು ನಾಡಿನಾದ್ಯಂತ ಇರುವ ಲಕ್ಷಾಂತರ ಭಕ್ತರು ಖಂಡಿಸಿದ್ದಾರೆ. ಈ ಘಟನೆಯ ಬಗ್ಗೆ ನಾವಾದರೂ ಕಠಿಣ ಶಬ್ಧಗಳಿಂದ ಖಂಡನೆ ವ್ಯಕ್ತಪಡಿಸಲು ಬಯಸುತ್ತೇವೆ. ಶ್ರೀಮದ್ ರಂಭಾಪುರಿ ಜಗದ್ಗುರುಗಳು ಮಹಾ ಸಮುದ್ರವಿದ್ದಂತೆ ಇಂತಹ ಕಸ-ಕಡ್ಡಿಗಳನ್ನು ದಂಡೆಗೆ ತಂದು ಬಿಸಾಡಲು ಒಂದೇ ಒಂದು ತೆರೆ ಸಾಕು. ಇಷ್ಟಾದರೂ ಭಕ್ತರ ದುರ್ವರ್ತನೆಯನ್ನು ಕ್ಷಮಿಸಿ ಧರ್ಮ ಮಾರ್ಗದಲ್ಲಿ ಮುನ್ನಡೆಯುವಂತೆ ಸಂದೇಶ ನೀಡಿದ ಅವರ ಔದಾರ್ಯವನ್ನು ಸಮಾಜ ಗೌರವದಿಂದ ಗಮನಿಸುತ್ತಿದೆ. ಇಷ್ಟಕ್ಕೂ ಮೀರಿ ಕಲಾದಗಿ ಶ್ರೀಮಠದ ಬಗ್ಗೆ ಯಾವುದೇ ವಿವಾದಗಳಿದ್ದರೂ ಅದನ್ನು ನ್ಯಾಯಾಲಯದ ಮುಖಾಂತರ ಬಗೆಹರಿಸಿಕೊಳ್ಳಲು ಎಲ್ಲರೂ ಬದ್ಧರಾಗಿರಬೇಕು ಎಂದು ಅವರು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!