ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ನುಸುಳಿದರೆ ಸಂಘಕ್ಕೆ ಅದೋಗತಿ ತಪ್ಪದು ; ಶಾಸಕ ಬೇಳೂರು

Written by Mahesha Hindlemane

Published on:

ಹೊಸನಗರ ; ರೈತ ದೇಶದ ಬೆನ್ನೆಲುಬು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತಾಪಿವರ್ಗಕ್ಕೆ ಅನೇಕ ರೀತಿ ಸೌಲಭ್ಯಗಳನ್ನು ನೀಡುತ್ತಿದ್ದು, ಕೃಷಿಕರನ್ನು ಬೆಂಬಲಿಸುತ್ತಿದೆ. ಆದರೆ, ರೈತರು ತಮ್ಮ ವ್ಯಾಪ್ತಿ ಮೀರಿ ಹೆಚ್ಚಿನ ಬಡ್ಡಿಗೆ ಖಾಸಗಿಯವರಿಂದ ಸಾಲ ಪಡೆದು ಹಿಂದಿರುಗಿಸಲಾಗದೆ ದುರಂತ ಸಾವಿಗೆ ಕೊರಳೊಡ್ಡುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆತಂಕ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪಟ್ಟಣದ ಎಪಿಎಂಸಿ ಯಾರ್ಡ್ ಆವರಣದಲ್ಲಿ ನಡೆದ ತುಂಗಾ ಅಡಿಕೆ ಮಾರಾಟ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ರೈತರಿಗೆ ನಬಾರ್ಡ್ ನಿಂದ ರೂ 2.75 ಲಕ್ಷ ಸಾವಿರ ಕೋಟಿ ಹಣ ಸಾಲ ರೂಪದಲ್ಲಿ ವಿತರಿಸಬೇಕಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಹೆಚ್ಚುವರಿ ಸಾಲ ವಿತರಣೆ ಹಣ ಬಿಡುಗಡೆ ಮಾಡಿಲ್ಲ. ಆದರೆ, ಡಿಸಿಸಿ ಬ್ಯಾಂಕ್ ರೈತರ ಆಷೋತ್ತರಗಳಿಗೆ ಕಾಲಕಾಲಕ್ಕೆ ಸೂಕ್ತವಾಗಿ ಸ್ಪಂದಿಸಿ, ಅಗತ್ಯ ಸಾಲ ಬಿಡುಗಡೆ ಮಾಡುವ ಮೂಲಕ ರೈತರ ಆರ್ಥಿಕತೆಗೆ ಬೆಂಬಲವಾಗಿ ನಿಂತಿದೆ. ಈ ಬಾರಿ ನಾನು ಸಹಕಾರಿ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಇಲ್ಲಿನ ಒಳಮರ್ಮಗಳೆಲ್ಲಾ ಒಂದೊಂದಾಗಿ ನನ್ನ ಅರಿವಿಗೆ ಬರುತ್ತಿದೆ. ತುಂಗಾ ಸಹಕಾರಿ ಸಂಘ ಪ್ರಾರಂಭಗೊಂಡು ಏಳೇ ವರ್ಷದಲ್ಲಿ ₹ 42 ಲಕ್ಷಕೂ ಅಧಿಕ ಲಾಭಗಳಿಸಿರುವುದು ಆಶಾದಾಯಕ ಬೆಳವಣಿಗೆ ಆಗಿದೆ. ಸಹಕಾರಿ ಕ್ಷೇತ್ರದಲ್ಲಿ ಎಂದೂ ರಾಜಕೀಯ ನುಸುಳಬಾರದು. ತಪ್ಪಿದಲ್ಲಿ ಇಡೀ ಸಂಘ ಅದೋಗತಿ ತಲುಪುವುದರಲ್ಲಿ ಅನುಮಾನ ಬೇಡ. ಇದಕ್ಕೆ ಸಾಗರ ತಾಲೂಕು ಕಲ್ಮನೆ ಸಹಕಾರಿ ಸಂಘವೇ ಸ್ಪಷ್ಟ ಉದಾಹರಣೆ ಎಂದರು.

ಸಹಕಾರಿ ಧುರೀಣ, ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥಗೌಡ ಮಾತನಾಡಿ, ಮಲೆನಾಡು ಭಾಗದ ಅಡಿಕೆ ಬೆಳೆಗಾರರು ಕಳೆದ ಕೆಲವು ವರ್ಷಗಳಿಂದ ಕೋಳೆ ಹಾಗು ಎಲೆಚುಕ್ಕಿ ರೋಗದಿಂದ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಆದರೂ, ಸಂಘದಲ್ಲಿ ಈ ಬಾರಿ ₹ 1 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹವಾಗಿದೆ. ಸಾಲ ಪಡೆಯುವಲ್ಲಿ ಸದಸ್ಯರು ಕಳೆದ ಸಾಲಿಗಿಂತ ಹಿಂದಿದ್ದಾರೆ. ಈ ಬಾರಿ ಡಿಸಿಸಿ ಬ್ಯಾಂಕ್ ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಕೃಷಿಸಾಲ ವಿತರಿಸಿದ್ದು ₹ 38 ಕೋಟಿ ಲಾಭಗಳಿಸಿದೆ. ಸಾಲ ಪಡೆದ ಅನೇಕ ಸಹಕಾರಿ ಸಂಘಗಳು ಇಂದು ಹೆಮ್ಮರವಾಗಿ ಬೆಳೆದು ನಿಂತಿವೆ. ತಾವೇ ಸಾಲ ನೀಡಿ ಬೆಳೆಸಿದ ಕೆಲವು ಸಂಘಗಳು ತಮ್ಮ ವಿರುದ್ದವೇ ರಾಜಕೀಯವಾಗಿ ಪಿತೂರಿ ನಡೆಸಿವೆ. ವಿರೋಧಿಗಳು ಇದನ್ನೇ ರಾಜಕೀಯ ಗಾಳವಾಗಿ ಬಳಸಿಕೊಂಡು ನನ್ನ ಪ್ರಾಮಾಣಿಕತೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿವೆ ಎಂಬ ವಿಷಾದ ವ್ಯಕ್ತಪಡಿಸಿದರು.

ಶಿಮೊಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ್ ಮಾತನಾಡಿ, ಆಡಳಿತ ಮಂಡಳಿ ಷೇರುದಾರರ ಹಿತ ಕಾಪಾಡಲು ಶ್ರಮಿಸಬೇಕು. ಸಂಘದ ಪ್ರತಿಯೊಬ್ಬ ಸದಸ್ಯರು ಆಡಳಿತ ಸವ್ಮತಿಯ ಕಾರ್ಯವೈಖರಿ ಕುರಿತು ಪ್ರಶ್ನಿಸುವ ಮನೋಭವ ಬೆಳೆಸಿಕೊಂಡಲ್ಲಿ ಮಾತ್ರವೇ ಸಹಕಾರಿ ಸಂಘಗಳ ಅಭಿವೃದ್ದಿ ಸಾಧ್ಯವೆಂದರು.

ಸಭೆಯ ತಿಳಿವಳಿಕೆ ಪತ್ರ ಸಕಾಲದಲ್ಲಿ ಸದಸ್ಯರಿಗೆ ತಲುಪಿಲ್ಲ. ಹಿಂದಿನ ಮಹಾಸಭೆಯ ಖರ್ಚು-ವೆಚ್ಚ ಸ್ಪಲ್ಪ ಹೆಚ್ಚಾದಂತೆ ಕಂಡುಬರುತ್ತಿದೆ. ಸಂಘಕ್ಕೆ ಈ ಬಾರಿ ಅಡಿಕೆ ಅವಕ ಕಡಿಮೆ ಆಗಿದ್ದು, ಸಂಸ್ಥೆ ಮುಂದೆ ಲಾಭಗಳಿಸಲು ಅಡಿಕೆ ಅವಕ ಹೆಚ್ಚಳಕ್ಕಾಗಿ ಒಂದು ಆಂದೋಲನ ನಡೆಸಬೇಕಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ ಸಭೆಗೆ ಸಲಹೆ ನೀಡಿದರು. ರೈತರ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಮಾಡಿ ಎಂದು ಸಹಕಾರಿ ಗುಬ್ಬಿಗ ಅನಂತರಾವ್ ಕೋರಿದರು.

ಅಧ್ಯಕ್ಷ ದುಮ್ಮ ವಿನಯ್ ಕುಮಾರ್ ಮಾತನಾಡಿ, ಸಂಘದಲ್ಲಿ ಒಟ್ಟು 1215 ಸದಸ್ಯರಿದ್ದ ಶೇ. 50ರಷ್ಟು ಮಂದಿ ವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲ. ಸಂಘದ ದಶಮಾನೋತ್ಸವದ ಸಂದರ್ಭದಲ್ಲಿ ಸಂಸ್ಥೆಯು ತನ್ನ ಷೇರುದಾರರಿಗೆ ಲಾಭಾಂಶ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರಗತಿಪರ ರೈತಾಪಿಗಳನ್ನು ಸಂಘ ಸನ್ಮಾನಿಸಿತು. ವೇದಿಕೆಯಲ್ಲಿ ಶಿಮುಲ್ ನಿರ್ದೇಶಕ ಜಗದೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎನ್. ಸುಧೀರ್ ಕುಮಾರ್, ಆಡಳಿತ ಮಂಡಳಿ ನಿರ್ದೇಶಕರಾದ ನೂಲಿಗೇರಿ ಹೆಚ್.ಕೆ. ಮಾಲತೇಶ್, ತಳಲೆ ದಿನೇಶ್, ಮೂವಳ್ಳಿ ನಾಗೇಶ್, ಹೊಸಮನೆ ಜಯದೇವಪ್ಪ, ಹೆದ್ಲಿ ನವೀನ್ ಕುಮಾರ್, ಗರ್ತಿಕೆರೆ ಬಷಿರ್ ಅಹಮ್ಮದ್, ಕಾಳಿಕಪುರ ಶಿವಪ್ಪ, ವೀರಮ್ಮ, ಹೊಸಮನೆ ಹೇಮಾ, ಮಂಡೇನಕೊಪ್ಪ ನಾನ್ಯಾನಾಯ್ಕ ಉಪಸ್ಥಿತರಿದ್ದರು.

ಸುಧೀರ್ ಕುಮಾರ್ ಸ್ವಾಗತಿಸಿ, ಜಿ.ಎಸ್. ರವಿ ನಿರೂಪಿಸಿ, ಸಿಇಒ ಹೆಚ್.ಎಸ್. ಕುಮಾರ ಸ್ವಾಮಿ ವರದಿ ವಾಚಿಸಿದರು. ಚಕ್ಕಾರು ವಿನಾಯಕ ವಂದಿಸಿದರು.

Leave a Comment