ದೇಸಿ ತಳಿಗಳ ಸಂರಕ್ಷಣೆಗಾಗಿ ಸಮೂದಾಯ ಬೀಜ ಬ್ಯಾಂಕ್ ಸ್ಥಾಪನೆ – ರೈತರಿಂದ ಅರ್ಜಿ ಆಹ್ವಾನ

Written by Koushik G K

Published on:

ಕೃಷಿ ಇಲಾಖೆಯು ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮದಡಿ ಕಣ್ಮರೆಯಾಗುತ್ತಿರುವ ಹಾಗೂ ನಶಿಸಿಹೋಗುತ್ತಿರುವ ಸ್ಥಳೀಯ ಬೆಳೆ ತಳಿಗಳನ್ನು ಸಂಗ್ರಹಿಸಿ ಉಳಿಸುವ ಉದ್ದೇಶದಿಂದ ‘ಸಮೂದಾಯ ಬೀಜ ಬ್ಯಾಂಕ್‌’ ಸ್ಥಾಪಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ಆಸಕ್ತಿಯುಳ್ಳ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸ್ಥಳೀಯ ಪರಿಸರ ಮತ್ತು ಸಾಂಪ್ರದಾಯಿಕ ಕೃಷಿ ಪದ್ಧತಿಯ ಆಧಾರದ ಮೇಲೆ ಬೆಳೆಯಲ್ಪಟ್ಟ ತಳಿಗಳನ್ನು ದೇಸಿ ತಳಿಗಳು ಎಂದು ಪರಿಗಣಿಸಲಾಗುತ್ತದೆ. ಇವು ಮಣ್ಣಿನ ಗುಣಮಟ್ಟ, ಹವಾಮಾನ ಮತ್ತು ಸ್ಥಳೀಯ ಆಹಾರ ಸಂಸ್ಕೃತಿಗೆ ಹೊಂದಿಕೊಳ್ಳುವ ಲಕ್ಷಣಗಳನ್ನು ಹೊಂದಿದ್ದು, ಶತಮಾನಗಳಿಂದ ರೈತರ ಬದುಕಿನ ಭಾಗವಾಗಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಹೈಬ್ರಿಡ್ ತಳಿಗಳ ವ್ಯಾಪಕ ಬಳಕೆಯಿಂದಾಗಿ ಅನೇಕ ದೇಸಿ ತಳಿಗಳು ನಾಶದ ಅಂಚಿನಲ್ಲಿವೆ.

ಈ ಹಿನ್ನೆಲೆಯಲ್ಲಿ, ಕೃಷಿ ಇಲಾಖೆ ದೇಸಿ ತಳಿಗಳ ಗುರುತಿನ ಸಂಗ್ರಹ, ಸಂರಕ್ಷಣೆ ಮತ್ತು ಪುನರುತ್ಪಾದನೆಗೆ ನೂತನ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಪ್ರಮುಖವಾಗಿ ಸಂಗ್ರಹಿಸಲಾಗುವ ಬೆಳೆಗಳು ಭತ್ತ, ರಾಗಿ, ಜೋಳ, ತೊಗರಿ, ಹುರುಳಿ, ಅವರೆ, ಅಲಸಂದೆ, ಮಡಕಿಕಾಳು, ಹುಚ್ಚೆಳ್ಳು, ಕುಸುಬೆ, ಎಳ್ಳು, ನವಣೆ, ಸಾಮೆ, ಊದಲು, ಕೊರಲೆ, ಹಾರಕ, ಬರಗು ಸೇರಿದಂತೆ ಸ್ಥಳೀಯ ಕೃಷಿಯಲ್ಲಿ ಉಳಿದಿರುವ ಇತರೆ ತಳಿಗಳನ್ನು ಒಳಗೊಂಡಿವೆ.

ಆಯಾ ತಳಿಗಳ ಬೀಜಗಳನ್ನು ಸಂಗ್ರಹಿಸಿ ಬೀಜ ಬ್ಯಾಂಕ್‌ನಲ್ಲಿ ಸಂರಕ್ಷಿಸುವ ಕಾರ್ಯ ನಡೆಯಲಿದ್ದು, ರೈತರು ಬೀಜ ನೀಡಲು ಸಮ್ಮತಿಸಬೇಕು. ಯೋಜನೆಯಲ್ಲಿ ಪಾಲ್ಗೊಳ್ಳುವ ರೈತರು ಜಾನುವಾರು ನಿರ್ವಹಣೆ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ ತಯಾರಿ ಹಾಗೂ ಪುನರುತ್ಪಾದಕ ಕೃಷಿ ಪದ್ಧತಿಗಳಲ್ಲಿ ತೊಡಗಿರಬೇಕು ಎಂದು ಸೂಚಿಸಲಾಗಿದೆ.

ದೇಸಿ ತಳಿಗಳ ಸಂರಕ್ಷಣೆಯು ಕೇವಲ ಬೀಜ ಸಂಗ್ರಹಣೆ ಅಲ್ಲದೆ, ಪಾರಂಪರಿಕ ಕೃಷಿ ವೈವಿಧ್ಯತೆಯನ್ನು ಉಳಿಸುವ ಮತ್ತು ಪರಿಸರ ಸ್ನೇಹಿ ಕೃಷಿಯನ್ನು ಉತ್ತೇಜಿಸುವ ಪ್ರಮುಖ ಹೆಜ್ಜೆಯಾಗಿದೆ. ಈ ಮೂಲಕ ಸ್ಥಳೀಯ ಆಹಾರ ಭದ್ರತೆ, ರೈತರ ಆದಾಯ ಸ್ಥಿರತೆ ಹಾಗೂ ಹವಾಮಾನ ಬದಲಾವಣೆಗೆ ತಡೆ ನೀಡುವ ಶಕ್ತಿಯನ್ನೂ ಬೆಳೆಸುವ ಉದ್ದೇಶ ಇದೆ.

ಯೋಜನೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Comment