ರಿಪ್ಪನ್‌ಪೇಟೆ ; ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ಸರ್ಕಾರ ಹಿಂದೇಟು ಹಾಕಿದರು ಸಹಕಾರಿ ಸಂಘಗಳಲ್ಲಿ ಉದ್ಯೋಗ ಸೃಷ್ಟಿಸುವ ಮೂಲಕ ಸಮಸ್ಯಗೆ ಸೂಕ್ತ ಪರಿಹಾರ ಕಂಡು ಹಿಡಿಯಲಾಗಿದೆ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ, ಎಂ.ಎ.ಡಿ.ಬಿ. ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.
ರಿಪ್ಪನ್‌ಪೇಟೆಯ ವಿಶ್ವಮಾನವ ಒಕ್ಕಲಿಗರ ಸಭಾಭವನದಲ್ಲಿ 72ನೇ ಆಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಲೆ ಹೆಚ್ಚಳಕ್ಕೆ ಇಳುವರಿ ಕುಂಠಿತ ಕಾರಣ. ರೈತಾಪಿ ವರ್ಗದವರು ಅಡಿಕೆಗೆ ಬಳಸುವ ಯೂರಿಯಾ ಹಾಗೂ ರಾಸಾಯನಿಕ ಗೊಬ್ಬರಗಳಿಂದ ಮಣ್ಣಿನ ಫಲವತ್ತತೆ ಕುಂಠಿತಗೊಂಡು ಮಲೆನಾಡಿನ ವ್ಯಾಪ್ತಿಯಲ್ಲಿ ಅಡಿಕೆಗೆ ತೊಂಡೆರೋಗ, ಎಲೆಚುಕ್ಕಿ ರೋಗದಿಂದ ಬೆಳೆ ಸರ್ವನಾಶವಾಗಿದೆ ಎಂದರು.
ರಾಸಾಯನಿಕ ಗೊಬ್ಬರಗಳ ಬಳಕೆಯ ಹೊರತಾಗಿ ರೈತರು ಕೊಟ್ಟಿಗೆ ಸಗಣಿ ಗೊಬ್ಬರ ಬಳಕೆಗೆ ಆಸಕ್ತಿ ವಹಿಸುವುದು ಮುಖ್ಯವಾಗಿದೆ. ಮಲೆನಾಡಿನಲ್ಲಿ ಹೈನುಗಾರಿಕೆ ಮಾಡುವುದರಿಂದ ಹಾಲು ಉತ್ಪಾದನೆಯೊಂದಿಗೆ ಜಾನುವಾರು ಎಮ್ಮೆ ಗೊಬ್ಬರವನ್ನು ಬಳಸಲು ಉತ್ತೇಜನ ನೀಡಬೇಕು. ಈ ಬಗ್ಗೆ ರೈತರಲ್ಲಿ ಜಾಗೃತರನ್ನಾಗಿಸಬೇಕು ಎಂದರು.
ಈಗಾಗಲೇ ದೇಶದಲ್ಲಿ 8.50 ಲಕ್ಷ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಪ್ರತಿನಿತ್ಯ 20 ಲಕ್ಷ ಸಾವಿರ ಕೋಟಿ ರೂ. ವ್ಯವಹಾರ ನಡೆಸುತ್ತಿವೆ. ಕರ್ನಾಟಕ ರಾಜ್ಯದ 6 ವರ್ಷದ ಬಜೆಟ್‌ಗೆ ಸಮನಾಗಿದೆ. ಗ್ರಾಮ ಪಂಚಾಯಿತ್ ಮಟ್ಟದಲ್ಲಿ ಸಹಕಾರ ಸಂಘ ಕಾರ್ಯನಿರ್ವಹಿಸುವ ಕಾರ್ಯದಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ್ ವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಎಸ್.ಕೆ.ಮರಿಯಪ್ಪ, ಪರಮೇಶ ಮತ್ತು ಕೆ.ಎನ್.ರಾಮಕೃಷ್ಣ ಹಾಗೂ ಶಿವಮೊಗ್ಗ ಹಾಲು ಒಕ್ಕೂಟದಿಂದ ರಾಜ್ಯ ಕೆ.ಎಂ.ಎಫ್ ನಿರ್ದೇಶಕರಾಗಿ ಆಯ್ಕೆಯಾದ ಆರ್.ಎಂ.ಮಂಜುನಾಥಗೌಡ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಪರಮೇಶ, ಮಲೆನಾಡು ಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಎನ್.ರಾಮಕೃಷ್ಣ, ಜಿ.ಎನ್.ಸುಧೀರ್, ಮಾಮ್ಕೋಸ್ ನಿರ್ದೇಶಕರಾದ ಕೃಷ್ಣಮೂರ್ತಿ, ಹೆಚ್.ಧರ್ಮೇಂದ್ರ, ವೃತ್ತಿಪರ ನಿರ್ದೇಶಕ ಮಧುಸೂಧನ್ ಎಸ್. ನಾವಡ, ಅಪ್ಸ್ಕೋಸ್ ನಿರ್ದೇಶಕ ಹೆಚ್.ಬಿ.ಕಲ್ಯಾಣಪ್ಪಗೌಡ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ.ಜಯರಾಂ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ದಿನೇಶ ಬರದವಳ್ಳಿ, ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಶ್ವೇತಾ ಬಂಡಿ, ನರಸಿಂಹ ಗೌಡ, ಪ್ರಮೀಳಾ ಲಕ್ಷ್ಮಣ ಗೌಡ , ಸುಮಾ ಸುಬ್ರಹ್ಮಣ್ಯ, ಹೆಚ್.ನಾಗರಾಜ್, ಹೆಚ್.ಓಂಕೇಶ್, ಜಯಶೀಲಪ್ಪಗೌಡ, ಇನ್ನಿತರ ಹಲವರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





