ಹಾಲು ಖರೀದಿ ದರ ಇಳಿಕೆಗೆ ಆಕ್ರೋಶ, ರಸ್ತೆಗೆ ಹಾ‌ಲು ಸುರಿದು ಪ್ರತಿಭಟನೆ

0 240

ಶಿವಮೊಗ್ಗ: ಉತ್ಪಾದಕರಿಂದ ಹಾಲು ಖರೀದಿ ದರ ಇಳಿಕೆ ಮಾಡಿರುವುದನ್ನು ಖಂಡಿಸಿ ಭಾರತೀಯ ಕೀಸಾನ್ ಸಂಘ ದಕ್ಷಿಣ ಪ್ರಾಂತ್ಯದ ನೇತೃತ್ವದಲ್ಲಿ ಹಾಲು ಉತ್ಪಾದಕ ರೈತರು ಇಂದು ಶಿಮೂಲ್ ಎದುರು ರಸ್ತೆಗೆ ಹಾಲು ಸುರಿದು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಈ ಹಿಂದೆ 2023ರ ಅಗಸ್ಟ್ 1ರಂದು 1ಲೀಟರ್‌ಗೆ 3 ರೂ. ಏರಿಕೆ ಮಾಡಿತ್ತು. ಆಗ ರೈತರಿಗೆ 33.50 ರೂ. ಸಿಗುತ್ತಿತ್ತು. ಮತ್ತೆ ಅಕ್ಟೋಬರ್ 1 ರಂದು ಪ್ರತಿ ಲೀಟರ್‌ಗೆ 1.25ರೂ.ನಷ್ಟು ಕಡಿತವಾಗಿ 31.75 ರೂ. ಸಿಗುತ್ತಿತ್ತು. ಆದರೆ ಈಗ ಮತ್ತೆ ಲೀಟರ್‌ಗೆ 2 ರೂ. ಕಡಿಮೆ 29.75 ರೂ. ಕೊಡುತ್ತಿದ್ದಾರೆ. ಕಳೆದ 8 ತಿಂಗಳಿನಲ್ಲಿ 3 ರೂ. ಏರಿಕೆ ಮಾಡಿ 3.70 ಕಡಿತ ಮಾಡಿದ್ದಾರೆ. ಅಂದರೆ ಮೂಲ ದರಕ್ಕಿಂತ 70 ಪೈಸೆ ಕಡಿಮೆಯಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದರು.

ಹಾಲು ಉತ್ಪಾದಕರು ಸಂಕಷ್ಟ ಎದುರಿಸುತ್ತಿದ್ದಾರೆ. ಪಶು ಆಹಾರ ದರ ಕೂಡ ಏರಿಕೆಯಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಅತಿವೃಷ್ಠಿ ಇಲ್ಲವೇ ಅನಾವೃಷ್ಠಿಗೆ ರೈತರು ತೊಂದರೆಗೆ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೈನುಗಾರಿಕೆಯಿಂದ ಜೀವನ ಸಾಗಿಸೋಣ ಎಂದರೆ ಸರ್ಕಾರ ಹಾಲಿನ ದರದ ಹಾವು-ಏಣಿ ಆಡವಾಡುತ್ತಿದೆ ಎಂದು ಪ್ರತಿಭಟನಕಾರರು ದೂರಿದರು.

ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ಕನಿಷ್ಟ 3.5 ಪ್ಯಾಟಿಗೆ 50 ರೂ. ನಿಗಧಿ ಮಾಡಬೇಕು. ಪಶು ಆಹಾರ ದರವನ್ನು 50 ಕೆ.ಜಿ. ಚೀಲಕ್ಕೆ 800 ರೂ. ನಿಗಧಿ ಮಾಡಬೇಕು. ಪಶು ಕಾರ್ಖಾನೆಗಳಿಗೆ ಕರ್ನಾಟಕ ರೈತರಿಂದ ಬೆಳೆದ ಮೆಕ್ಕೆಜೋಳವನ್ನು ಖರೀದಿ ಮಾಡಬೇಕು. ಉತ್ಪಾದಕರ ಹಸುಗಳಿಗೆ ಮೇವಿನ ಬೀಜ ನೀಡಬೇಕು. ಕೃತಕ ಗರ್ಭಧಾರಣೆ ಉಚಿತವಾಗಿ ನೀಡಬೇಕು ಎಂಬುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.facebook.com/share/v/6Ge5c4be8PNpaFZT/?mibextid=gik2fB


ಈ ಸಂದರ್ಭದಲ್ಲಿ ರೈತ ಮುಖಂಡರು ಮಾತನಾಡಿ, ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಇಳಿಸಿದ ಹಾಲಿನ ದರವನ್ನು ತಕ್ಷಣವೇ ಏರಿಸಬೇಕು. ಇಲ್ಲದಿದ್ದರೆ, ಗ್ರಾಮಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ 3 ಜಿಲ್ಲೆಗಳ ನೂರಾರು ಹಾಲು ಉತ್ಪಾದಕರು ಭಾಗವಹಿಸಿದ್ದರು. ಭಾರತೀಯ ಕೀಸನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯದ ಉಪಾಧ್ಯಕ್ಷ ಕೆ.ಸಿ. ಸದಾಶಿವಪ್ಪ ಪ್ರವೀಣ್ ಪಟೇಲ್, ಗಂಗಾಧರ ಕಾಸರಗೂಡು, ಭೀಮರಾವ್, ಸುಧಾಪರಮೇಶ್ವರಪ್ಪ, ಅಮೃತಾ ಚಳ್ಳಕೆರೆ ಸೇರಿದಂತೆ ಹಲವರಿದ್ದರು.

ಶಿಮೂಲ್ ಎದುರು ರೈತರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ರಸ್ತೆ ತಡೆ ನಡೆಸಿದರು. ಇದರಿಂದಾಗಿ ಶಿವಮೊಗ್ಗ-ಭದ್ರಾವತಿ ಕಡೆಗೆ ಸಂಚರಿಸುವ ವಾಹನಗಳು ಗಂಟೆಗಟ್ಟಲೆ ನಿಲ್ಲುವಂತಾಯಿತು.
ರಸ್ತೆ ಕಾಮಗಾರಿ ನಡೆಯುತ್ತಿದ್ದು, ಶಿಮೂಲ್ ಗೇಟ್ ಎದುರಲ್ಲೇ ರಸ್ತೆ ತಡೆ ನಡೆಸಿದ ಕಾರಣ ಭಾರಿ ಸಂಖ್ಯೆಯ ವಾಹನಗಳ ಸಂಚಾರ ಗಂಟೆಗೂ ಅಧಿಕ ಕಾಲ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಸುಗಮ ಸಂಚಾರಕ್ಕೆ ಹರಸಾಹಸ ಪಡುವಂತಾಯಿತು.

Leave A Reply

Your email address will not be published.