ಹಿಂಬಾಲಕರ ಆರೋಪದಲ್ಲಿ ಹುರುಳಿಲ್ಲ, ಕ್ಷುಲ್ಲಕ ರಾಜಕಾರಣಕ್ಕೆ ಮಾಜಿ ಅಧ್ಯಕ್ಷನಿಂದ ಕುಮ್ಮಕ್ಕು ; ಸೊನಲೆ ಗ್ರಾ.ಪಂ. ಉಪಾಧ್ಯಕ್ಷ ಕೃಷ್ಣಮೂರ್ತಿ

0 856

ಹೊಸನಗರ: ಸರ್ಕಾರಿ (Government) ಯೋಜನೆಗಳ ಅನುಷ್ಠಾನದಲ್ಲಿ ನಾನು ವಿಳಂಬ ನೀತಿ ಅನುಸರಿಸುತ್ತಿರುವುದಾಗಿ ಮಾಜಿ ಅಧ್ಯಕ್ಷನ ಹಿಂಬಾಲಕರ ಆರೋಪದಲ್ಲಿ (Allegation) ಎಳ್ಳಷ್ಟು ಹುರುಳಿಲ್ಲ ಎಂದು ಸೊನಲೆ (Sonale) ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಶನಿವಾರ ನಡೆದ ಗ್ರಾಮಸಭೆಯಲ್ಲಿ (Grama Sabe) ವಾರಂಬಳ್ಳಿ ಹಾಗೂ ಬಾವಿಕೈ ವಾರ್ಡ್‌ನ ಗ್ರಾಮಸ್ಥರು ಅಭಿವೃದ್ದಿ ಕಾರ್ಯ ಕುರಿತಂತೆ ಉಪಾಧ್ಯಕ್ಷರಿಗೆ ಕೇಳಿದ ಪ್ರಶ್ನೆಗೆ ಸಮಂಜಸ ಉತ್ತರ ನೀಡದೆ ಕಾಲ್ಕಿತ್ತಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಅವರು ಮಾಧ್ಯಮಗಳ ಮೂಲಕ ಸಮಗ್ರ ಉತ್ತರ ನೀಡಲು ಮುಂದಾದರು.

ನಾನು ಉಪಾಧ್ಯಕ್ಷನಾದ ಬಳಿಕ 40 ಸಾವಿರ ರೂ. ಸ್ವಂತ ಹಣದಿಂದ ಸ.ಹಿ.ಪ್ರಾ. ಶಾಲೆಗೆ ಸುಣ್ಣ ಬಣ್ಣ ಕೈಗೊಂಡೆ. 15 ಸಾವಿರ ರೂ.ನಲ್ಲಿ ವಾರಂಬಳ್ಳಿ ಅಂಬೇಡ್ಕರ್ ಸಮುದಾಯ ಭವನಕ್ಕೆ ವಿದ್ಯುತ್ ಸಂಪರ್ಕ ಕಲಿಸಿದೆ. ವಾರಂಬಳ್ಳಿ ಗ್ರಾಮದ ಮುಖ್ಯ ವೃತ್ತಕ್ಕೆ 50 ಸಾವಿರ ರೂ. ಸರ್ಕಾರಿ ಅನುದಾನದಲ್ಲಿ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸಿದೆ. 75 ಸಾವಿರ ರೂ. ಅನುದಾನದ ಬಾವಿಕೈ-ನರ‍್ಲೆ ಸಂಪರ್ಕ ರಸ್ತೆಗೆ ತಡೆಗೋಡೆ ನಿರ್ಮಿಸಿದ್ದು, ಒಂದು ಲಕ್ಷ ರೂ. ಉದ್ಯೋಗ ಖಾತ್ರಿ ಯೋಜನೆ ಅನುದಾನದಲ್ಲಿ ಕೊಬ್ರಿಗೌಡರ ಮನೆಯ ರಸ್ತೆ ದುರಸ್ತಿ, 2.5 ಲಕ್ಷ ರೂ. ಅನುದಾನದ ದೇವರಗದ್ದೆ-ವಾರಂಬಳ್ಳಿ ಚಾನಲ್ ದುರಸ್ತಿ, 2 ಲಕ್ಷ ರೂ. ನಲ್ಲಿ ವಾರಂಬಳ್ಳಿ ಶಾಲೆ ಅಡುಗೆ ತಯಾರಿಕೆ ಕೊಠಡಿ ನಿರ್ಮಾಣ, ಒಂದು ಲಕ್ಷ ರೂ. ಅನುದಾನದ ಬಾವಿಕೈ ತೇಜೇಗೌಡ ಮನೆ ಹತ್ತಿರ ಚಾನಲ್ ದುರಸ್ತಿ, 3 ಲಕ್ಷ ರೂ. ಅನುದಾನದಲ್ಲಿ ವಾರಂಬಳ್ಳಿ ಎಸ್‌ಸಿ ಕಾಲೋನಿ ಬಾಕ್ಸ್ ಚರಂಡಿ ನಿರ್ಮಾಣ, ಬಾವಿಕೈ ಎಸ್‌ಸಿ ಮನೆ ಹತ್ತಿರ 1.5 ಲಕ್ಷ ರೂ. ಅನುದಾನದ ಚಾನಲ್ ದುರಸ್ತಿ, ವಾರಂಬಳ್ಳಿ ಗ್ರಾಮದ ಸರ್ವೆ ನಂಬರ್ 58ರ ಅಕೇಶಿಯ ಪ್ಲಾಂಟೇಶನ್‌ನಲ್ಲಿ 2 ಲಕ್ಷ ರೂ. ಅನುದಾನದಲ್ಲಿ ಇಂಗುಗುಂಡಿ ನಿರ್ಮಾಣ, ದೇವರಗದ್ದೆಯ ಲಕ್ಷ್ಮಮ್ಮ ಮನೆಗೆ 1.5 ಲಕ್ಷ ರೂ. ಅನುದಾನದ ತೆರೆದ ಬಾವಿ ನಿರ್ಮಾಣ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಅನುಷ್ಟಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ಅವರು ತಿಳಿಸಿದರು.

2023ರ ಜುಲೈನಲ್ಲಿ ಸೊನಲೆ ಪ್ರೌಢಶಾಲೆಯ ಮುಂಭಾಗದ ಅಕೇಶಿಯ ನೆಡುತೋಪು ಕಟಾವಿನ ಹಿನ್ನಲೆ, ಪಂಚಾಯ್ತಿ ಖಾತೆಗೆ ಜಮಾಗೊಳ್ಳಬೇಕಿದ್ದ 3 ಲಕ್ಷ ರೂ. ಹಣವನ್ನು ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸೊನಲೆ ಸುಬ್ರಹ್ಮಣ್ಯ ಅವರ ವೈಯಕ್ತಿಕ ಖಾತೆಗೆ ಜಮಾ ಮಾಡಿಕೊಂಡಿರುವ ಕ್ರಮವನ್ನು ನಾನು ಇದೇ ನವೆಂಬರ್ 3ರ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿದ್ದ ಕಾರಣ ತನ್ನ ಹಿಂಬಾಲಕರ ಮೂಲಕ ನನ್ನ ರಾಜಕೀಯ ತೇಜೋವಧೆಗೆ ಅವರು ಮುಂದಾಗಿದ್ದಾರೆ. ಅಲ್ಲದೆ, ಕಳೆದ ಗ್ರಾ.ಪಂ. ಚುನಾವಣೆ ವೇಳೆ ನಾನು ಪ್ರತಿನಿಧಿಸಿ ಗ್ರಾ.ಪಂ.ಸದಸ್ಯನಾಗಿ ಆಯ್ಕೆ ಆಗಿರುವ ವಾರ್ಡ್‌ನಲ್ಲೆ ಆತನು ಸಹ ಚುನಾವಣೆ ಎದುರಿಸಿ ಮತದಾರರಿಂದ ನಾಲ್ಕನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದ ಕಾರಣ ನನ್ನ ವಿರುದ್ದ ಈ ರಾಜಕೀಯ ಷಡ್ಯಂತ್ರ ರಚಿಸಲು ಮುಂದಾಗಿರುವುದಾಗಿ ಆರೋಪಿಸಿದರು.

ನಿಜವಾಗಿಯೂ ಅವರು ಪ್ರಾಮಾಣಿಕರೇ ಆಗಿದ್ದಲ್ಲಿ ಮೊದಲು ಶಾಲಾ ಆಟದ ಮೈದಾನ ನಿರ್ಮಾಣಕ್ಕೆಂದು ಮೀಸಲಿಟ್ಟಿದ್ದ ಸೊನಲೆ-ಆದುವಳ್ಳಿ ಸಂಪರ್ಕ ರಸ್ತೆಯ ಅಕೇಶಿಯ ನೆಡುತೋಪು ಕಟಾವು 3 ಲಕ್ಷ ರೂ. ಹಣವನ್ನು ಜನತೆಯ ಸಮ್ಮುಖದಲ್ಲಿ ಗ್ರಾಮ ಪಂಚಾಯತಿ ಖಾತೆಗೆ ಜಮಾ ಮಾಡಲಿ ಎಂದು ಸವಾಲು ಹಾಕಿದರು. ತಪ್ಪಿದಲ್ಲಿ ಮುಂದಾಗುವ ಪರಿಣಾಮ ಎದುರಿಸಲು ಸಿದ್ದವಾಗಲಿ ಎಂಬ ಗಂಭೀರ ಎಚ್ಚರಿಕೆಯನ್ನು ಸಹ ಕೃಷ್ಣಮೂರ್ತಿ ನೀಡಿದರು.

Leave A Reply

Your email address will not be published.

error: Content is protected !!