ರಿಪ್ಪನ್‌ಪೇಟೆ ; ಕಾಂಗ್ರೆಸ್‌ಗೆ ಅಧಿಕಾರ ವಿಕೇಂದ್ರಿಕರಣದ ಮೇಲೆ ನಂಬಿಕೆ ಇಲ್ಲ. ಅಂಬೇಡ್ಕರ್ ಮಹಾತ್ಮ ಗಾಂಧಿಜಿಯವರ ರಾಮ ರಾಜ್ಯದ ಕನಸು ನನಸು ಮಾಡುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫವಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸದೇ ಕಾನೂನಿನಡಿಯಲ್ಲಿ ಹೋರಾಟ ಮಾಡಿದವರು ಬಿಜೆಪಿ ಪಕ್ಷದವರು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕೆರೆಹಳ್ಳಿ ಹೋಬಳಿ ಬಿಜೆಪಿ ಶಕ್ತಿ ಕೇಂದ್ರದವರು ರಿಪ್ಪನ್‌ಪೇಟೆಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಲಾದ ವಿಬಿ-ಜಿ ರಾಮ್ ಜಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿ, ಭಾರತ ದೇಶದ ಸಮಸ್ಯೆಯನ್ನು ವಿದೇಶದಲ್ಲಿ ಪ್ರಸ್ತಾಪಿಸಿ ದೇಶದ ಗೌರವವನ್ನು ಹರಾಜು ಹಾಕುತ್ತಿರುವ ರಾಹುಲ್ ಗಾಂಧಿಯವರು ಅರಾಜಕತೆ ಮೂಲಭೂತವಾದ ಒಂದೇ ನಾಣ್ಯದ ಎರಡು ಮುಖವಾಗಿದೆ. ರಾಷ್ಟ್ರೀಯ ಯೋಜನೆಯನ್ನು ಕಾಂಗ್ರೆಸ್ ನಿಷ್ಪ್ರೋಯೋಜಕಗೊಳಿಸುವ ಪ್ರಯತ್ನ ಮಾಡುತ್ತಿದೆ. ಅಖಂಡ ಭಾರತ ದೇಶವನ್ನು ಛಿದ್ರ-ಛಿದ್ರ ಮಾಡಿರುವುದೇ ಕಾಂಗ್ರೆಸ್ ದೊಡ್ಡ ಸಾಧನೆಯಾಗಿದೆ. ಸಮಾಜವಾದಿ ಸಿದ್ದರಾಮಯ್ಯ ಈಗ ಜಾತಿವಾದಿ ಸಿದ್ದರಾಮಯ್ಯರಾಗಲು ಹೊರಟಿದ್ದಾರೆಂದು ಕಟುವಾಗಿ ಟೀಕಿಸಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರ ಇದ್ದಷ್ಟು ದಿನ ಅಭಿವೃದ್ದಿ ಹಿನ್ನಡೆಯಾಗಲು ಕಾರಣವಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಜನರ ಎದುರು ಬೆತ್ತಲಾಗುವಂತಹ ಕಾಲ ದೂರವಿಲ್ಲ ಎಂದು ಹೇಳಿ, ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರೊಬ್ಬರು ಬಹಿರಂಗವಾಗಿಯೇ ತಮ್ಮ ಪಕ್ಷದ ಭಷ್ಟಾಚಾರದ ಬಗ್ಗೆ ಮಾತನಾಡಿ, ಮೂರು ತೆಲೆಮಾರು ಕುಳಿತು ತಿನ್ನುವಷ್ಟು ಹಣ ಮಾಡಿಕೊಂಡಿದ್ದಾರೆಂದು ದೇಶವನ್ನು ಕೊಳ್ಳೆಹೊಡೆದು ನುಂಗಿ ನೀರು ಕುಡಿದ್ದಿದ್ದಾರೆಂದರು. ಪದೇ ಪದೇ ಸುಳ್ಳು ಹೇಳುತ್ತಾ ಸತ್ಯವನ್ನು ಬಿಂಬಿಸಲಾಗುತ್ತಿರುವ ಕಾಂಗ್ರೆಸ್‌ನವರಿಗೆ ದೇಶ ಕಟ್ಟುವ ಚಿಂತೆ ಇಲ್ಲ ಎಂದರು.
ಕೇಂದ್ರ ಸರ್ಕಾರ ನರೇಗಾ ಯೋಜನೆಯ ಹೆಸರಯನ್ನು ವಿಬಿ-ಬಿ ರಾಮ್ ಜಿ ಎಂದು ಬದಲಾವಣೆಯ ಮಾಡುವ ಮೂಲಕ ಪಾರದರ್ಶಕವಾಗಿ ನೇರ ಶ್ರಮಿಕರ ಖಾತೆಗೆ ಜಮಾಮಾಡುವ ಮತ್ತು ಕೂಲಿಯ ಹಣವನ್ನು ಹೆಚ್ಚಿಸುವುದರೊಂದಿಗೆ ಗ್ರಾಮ ಮಟ್ಟದಲ್ಲಿಯೇ ಕಾಮಗಾರಿಯ ಅನುಮತಿಯನ್ನು ಕಲ್ಪಿಸುವ ಉದ್ದೇಶದಿಂದ ಕೆಲವು ಮಾರ್ಪಾಡುಗಳನ್ನು ಮಾಡಲಾಗಿ ಕೇಂದ್ರ ಸರ್ಕಾರ 60 ರಾಜ್ಯ ಸರ್ಕಾರ 40 ರಷ್ಟು ಹಣ ಕೊಡುವ ವ್ಯವಸ್ಥೆಯನ್ನು ಮಾಡಿದರೆ ಇಂದಿನ ರಾಜ್ಯ ಸರ್ಕಾರ ಶೇ.40 ರಷ್ಟು ಹಣವನ್ನು ಕೊಡಲಾಗದೇ ಖಜಾನೆ ಖಾಲಿ ಮಾಡಿ ಈಗ ಸುಳ್ಳು ಹೇಳಿ ಜನರನ್ನು ನಂಬಿಸುವ ಕೆಲಸ ಮಾಡಲು ಹೊರಟಿದೆ ಎಂದು ಆರೋಪಿಸಿ, ನೀವು ಎಷ್ಟೇ ಸತ್ಯ ಮಾಡಲು ಹೋದರೆ ಜನರು ನಿಮ್ಮನ್ನು ಬೆತ್ತಲೆಗೊಳಿಸುವ ಕಾಲ ದೂರವಿಲ್ಲ ಎಂದು ಹೇಳಿ ಇಷ್ಟು ಕೀಳು ಮಟ್ಟಕ್ಕೆ ಇಳಿದಿರುವ ಕಾಂಗ್ರೆಸ್ ಸಿದ್ದರಾಮಯ್ಯ ಸರ್ಕಾರ ದಿವಾಳಿಯಂಚಿಗೆ ತಲುಪಿದೆ ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ವಿಬಿ-ಜಿ ರಾಮ್ ಜಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕೆರೆಹಳ್ಳಿ ಹೋಬಳಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುಂದರೇಶ್ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹರಿಕೃಷ್ಣ, ಸಿದ್ದಲಿಂಗಪ್ಪ, ಬಿಜೆಪಿ ಮಂಡಲ ಪ್ರಭಾರಿ ಮಹೇಶ್, ಹೊಸನಗರ ಬಿಜೆಪಿ ಅಧ್ಯಕ್ಷ ಎನ್.ಸತೀಶ್, ಎಂ.ಎನ್.ಸುಧಾಕರ್, ಎ.ಟಿ. ನಾಗರತ್ನ ನಾಗರಾಜ್, ಜಿ.ಡಿ.ಮಲ್ಲಿಕಾರ್ಜುನ, ಅರುಣ್‌ಕಟ್ಟೆ ಇನ್ನಿತರರು ಹಾಜರಿದ್ದರು.
ಆರ್.ಟಿ.ಗೋಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮುದಾ ಸಂಗಡಿಗರು ಪ್ರಾರ್ಥಿಸಿದರು. ಅರುಣ್‌ಕಟ್ಟೆ ಸ್ವಾಗತಿಸಿದರು. ಜಿ.ಡಿ.ಮಲ್ಲಿಕಾರ್ಜುನ ನಿರೂಪಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





