ಮಾ.09 ರಿಂದ 14ರವರೆಗೆ ಹೊಂಬುಜ ಅತಿಶಯ ಶ್ರೀಕ್ಷೇತ್ರದ ವಾರ್ಷಿಕ ರಥಯಾತ್ರಾ ಮಹೋತ್ಸವ

Written by Mahesha Hindlemane

Published on:

ಹೊಂಬುಜ : ಚಾರಿತ್ರಿಕ ಹಿನ್ನೆಲೆಯ ಹೊಂಬುಜ ಕ್ಷೇತ್ರವಿಂದು ಧಾರ್ಮಿಕ-ಆಧ್ಯಾತ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರ ಎಂಬುದು ಜನಜನಿತವಾಗಿದೆ. ಮಲೆನಾಡಿನ ರಮ್ಯ ವಿಹಂಗಮ ಪ್ರಕೃತಿಯ ಮಡಿಲಲ್ಲಿ ಮೂಲನಾಯಕ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮತ್ತು ಅಭೀಷ್ಠವರಪ್ರದಾಯಿನಿ ಯಕ್ಷಿ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಜಿನಮಂದಿರಗಳಿಗೆ 1300 ವರ್ಷಗಳ ಅಪೂರ್ವ ಇತಿಹಾಸವಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಭಗವಾನ ಶ್ರೀ ಪಾರ್ಶ್ವನಾಥ ತೀರ್ಥಂಕರರ ಮತ್ತು ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿದೇವಿ ಅಮ್ಮನವರ ವಾರ್ಷಿಕ ರಥಯಾತ್ರಾ ಮಹೋತ್ಸವವು ಪರಂಪರಾನುಗತ, ಆಗಮೋಕ್ತ ವಿಧಿ-ವಿಧಾನದಲ್ಲಿ ಪಾಲ್ಗುಣ ಮಾಸ ಕೃಷ್ಣ ಪಕ್ಷದ ಷಷ್ಠಿಯಿಂದ ದಶಮಿಯವರೆಗೆ (ಮಾರ್ಚ್ 9 ರಿಂದ 14ರವರೆಗೆ) ನೆರವೇರಲಿದೆ.

ಜೈನ ಮಠದ ಪೀಠಾಧಿಕಾರಿಗಳಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಹೊಂಬುಜ ಅತಿಶಯ ಶ್ರೀಕ್ಷೇತ್ರದಲ್ಲಿರುವ ಸರ್ವ ಜಿನಮಂದಿರಗಳಲ್ಲಿ ಜಿನಾಗಮೋಕ್ತ ವಿವಿಧ ಆರಾಧನೆಗಳು ನಡೆಯಲಿದೆ.

ಮಾರ್ಚ್ 05ರ ಗುರುವಾರದಂದು ಶ್ರೀಮಠದ ನೇಮಿನಾಥ ಸ್ವಾಮಿ ಬಸದಿಯಲ್ಲಿ ಗಣಧರವಲಯ ಆರಾಧನೆ, ಮಾ. 06 ರ ಶುಕ್ರವಾರದ ಶ್ರೀಮಕ್ಕಳ ಬಸದಿಯ ಶ್ರೀ ಪಾರ್ಶ್ವನಾಥ ಸ್ವಾಮಿ ಚಿಕ್ಕ ಬಸದಿಯಲ್ಲಿ ಕಲ್ಯಾಣ ಮಂದಿರ ಆರಾಧನೆ, ಮಾ. 07ರ ಶನಿವಾರದಂದು ನಗರ ಜಿನಾಲಯದಲ್ಲಿ ಶ್ರೀ ಭಕ್ತಾಮರ ಆರಾಧನೆ ಹಾಗೂ ಮಾ. 08ರ ಭಾನುವಾರದಂದು ಬೋಗಾರ ಬಸದಿಯಲ್ಲಿ ಚೌಷಟ್‌ಋದ್ಧಿ ವಿಧಾನ ಶಾಸ್ತ್ರೋಕ್ತವಾಗಿ ನೆರವೇರಲಿದೆ.

ರಥಯಾತ್ರಾ ಮಹೋತ್ಸವ ;

  • ಮಾ. 09ರ ಸೋಮವಾರದಂದು ಧ್ವಜಾರೋಹಣ, ನಾಂದಿಮಂಗಲ, ವಾಸ್ತುಶಾಂತಿ, ಮೃತ್ತಿಕಾ ಸಂಗ್ರಹದ ಬಳಿಕ ರಾತ್ರಿ 8 ಗಂಟೆಗೆ ನಾಗವಾಹನೋತ್ಸವ ಜರುಗಲಿದೆ.
  • ಮಾ. 10ರ ಮಂಗಳವಾರ ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಕಲಿಕುಂಡಯಂತ್ರಾರಾಧನೆ ಬಳಿಕ ರಾತ್ರಿ 8 ಗಂಟೆಗೆ ಸಿಂಹವಾಹನೋತ್ಸವ.
  • ಮಾ. 11ರ ಬುಧವಾರದಂದು ಶಾಂತಿಚಕ್ರಾರಾಧನೆ ಬಳಿಕ ಸಾಯಂಕಾಲ “ಸಿದ್ಧಾಂತಕೀರ್ತಿ” ಪ್ರಶಸ್ತಿಯನ್ನು ವಿದ್ವಾಂಸರಾದ ಡಾ. ಶಾಂತಿನಾಥ ದಿಬ್ಬದರವರಿಗೆ ಪ್ರದಾನ ಮಾಡಲಾಗುವುದು. ರಾತ್ರಿ 8 ಗಂಟೆಗೆ ಬೆಳ್ಳಿ/ಪುಷ್ಪ ರಥೋತ್ಸವ ನಡೆಯಲಿದೆ.
  • ಮಾ. 12ರ ಗುರುವಾರದಂದು ಮೂಲಾನಕ್ಷತ್ರದಲ್ಲಿ ನಿತ್ಯವಿಧಿ ಸಹಿತ ಮಹಾನೈವೇದ್ಯ ಪೂಜೆ, ಮಧ್ಯಾಹ್ನ ರಥಾರೋಹಣಕ್ಕೆ ಪ್ರಸಾದ ಬೇಡಿಕೆ-ರಥಾರೋಹಣ ಸಂಪ್ರದಾಯದಂತೆ ನಡೆಯಲಿದೆ. ಸಾಯಂಕಾಲ ನಗರದಲ್ಲಿ ರಥಯಾತ್ರೆ ಜರುಗಲಿದೆ.
  • ಮಾ. 13ರ ಶುಕ್ರವಾರದಂದು ತ್ರಿಕೂಟ ಜಿನಾಲಯದಲ್ಲಿ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಶಾಂತಿನಾಥ ಸ್ವಾಮಿ, ಶ್ರೀ ಬಾಹುಬಲಿ ಸ್ವಾಮಿಯವರಿಗೆ 108 ಕಲಶಗಳ ಮಹಾಭಿಷೇಕ, ಸಂಘಪೂಜೆ ಬೆಳ್ಳಿಗ್ಗೆ 11 ರಿಂದ ನಡೆಯಲಿದೆ.
  • ಮಾ. 14ರ ಶನಿವಾರದಂದು ನಿತ್ಯವಿಧಿ ಬಳಿಕ ಕುಂಕುಮೋತ್ಸವ, ಧ್ವಜಾವರೋಹಣ ನಡೆದು ವಾರ್ಷಿಕ ರಥಯಾತ್ರಾ ಮಹೋತ್ಸವವು ಸಂಪನ್ನಗೊಳ್ಳಲಿದೆಯೆಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಕ್ತವೃಂದದವರು ರಥೋತ್ಸವದ ಧಾರ್ಮಿಕ ವಿಧಾನಗಳಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ.

Leave a Comment