ರಿಪ್ಪನ್‌ಪೇಟೆ ; ಐಷಾರಾಮಿ ಕಾರನ್ನು ಬಳಸಿ ಜಾನುವಾರುಗಳ ಕಳ್ಳತನ ಮಾಡುವ ಜಾಲವನ್ನು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರಾಜು ರೆಡ್ಡಿ ನೇತೃತ್ವದ ತಂಡ 15 ದಿನಗಳಲ್ಲಿ ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಜುಲೈ 3ರಂದು ರಿಪ್ಪನ್‌ಪೇಟೆ ಪಟ್ಟಣದ ಸಾಗರ ರಸ್ತೆಯ ಗಿರಿಗೌಡ ನಿವಾಸದ ಸಮೀಪ ರಾತ್ರಿ ವೇಳೆ ಈ ಕಳ್ಳತನ ನಡೆದಿದೆ. ಐಷಾರಾಮಿ ವಾಹನದಲ್ಲಿ ಬಂದ ದುಷ್ಕರ್ಮಿಗಳು ಕತ್ತಲಿನಲ್ಲಿ ಜಾನುವಾರುಗಳನ್ನು ಕಳವು ಮಾಡಿ ತಕ್ಷಣವೇ ಪರಾರಿಯಾಗಿದ್ದರು. ಐಷಾರಾಮಿ ಕಾರಲ್ಲಿ ಬಂದಿದ್ದರಿಂದ ಸ್ಥಳೀಯರಿಗೆ ಅನುಮಾನವಾಗಿರಲಿಲ್ಲ. ಈ ಘಟನೆ ಸಂಬಂಧ ಹಿಂದೂ ಜಾಗರಣ ವೇದಿಕೆಯ ಮುಖಂಡ ದೇವರಾಜ್ ಕೆರೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಾಗುತ್ತಿದ್ದಂತೆ ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪ ಗೌಡರ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಪಿಎಸ್‌ಐ ರಾಜು ರೆಡ್ಡಿ ನೇತೃತ್ವದಲ್ಲಿ ತಂಡದ ಸಿಬ್ಬಂದಿಗಳು ತ್ವರಿತವಾಗಿ ತನಿಖೆ ನಡೆಸಿ, ಕೇವಲ 15 ದಿನಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳತನಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಶಿವಮೊಗ್ಗದ ಹಳೆಮಂಡ್ಲಿ ನಿವಾಸಿ ಅಮೀರ್ ಸುಹೇಲ್ (26) ಮತ್ತು ಮಹಮ್ಮದ್ ಇಸ್ರಾರ್ ಉಲ್ಲಾ ಖಾನ್ (20) ಎಂದು ಗುರುತಿಸಲಾಗಿದೆ. ಪೊಲೀಸರು ಈ ಇಬ್ಬರು ಇನ್ನಷ್ಟು ಸ್ಥಳಗಳಲ್ಲಿ ಇಂತಹ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ರಾಮಚಂದ್ರ ಎನ್.ಎಂ, ಅಶೋಕ್, ವಿಶ್ವನಾಥ್, ಪರಮೇಶ್ವರಪ್ಪ ಮತ್ತು ಅವಿನಾಶ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು. ಪೊಲೀಸರ ಈ ತ್ವರಿತ ಮತ್ತು ಪರಿಣಾಮಕಾರಿ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





