HOSANAGARA | ಅಧಿಕಾರಿಗಳು ಸೂಕ್ತವಾಗಿ ಕಾರ್ಯನಿರ್ವಹಿಸಲು ಸ್ಥಳೀಯ ಮುಕ್ತ ಅವಕಾಶ ಬೇಕಿದೆ. ಸ್ಥಳೀಯ ಜನಪ್ರತಿನಿಗಳ ಸಹಕಾರ ಇದ್ದಲ್ಲಿ ಮಾತ್ರವೇ ಏನಾದರೂ ಸಾಧಿಸಲು ಸಾಧ್ಯವಿದೆ ಎಂದು ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್.ಎಸ್. ಸುರೇಶ್‌ಕುಮಾರ್ ಅಭಿಪ್ರಾಯಪಟ್ಟರು.
ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಲೋಕಾಯುಕ್ತ ಸಂಸ್ಥೆ ನಡೆಸಿದ ಸಾರ್ವಜನಿಕರ ಕುಂದು-ಕೊರತೆಗಳ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಲೋಕಾಯುಕ್ತ ಸರ್ವ ಸ್ವತಂತ್ರ್ಯವಾಗಿದ್ದು ಸಾರ್ವಜನಿಕರ ದೂರುಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಕ್ರಮಕ್ಕೆ ಸಂಸ್ಥೆ ಮುಂದಾಗುತ್ತದೆ. ಗ್ರಾಮದ ನಕಾಶೆ ಕಂಡ ದಾರಿ, ಬಂಡಿದಾರಿ ತೆರವಿಗೆ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
ತಾಲೂಕಿನ ಅಮೃತ ಗ್ರಾಮದ ದೂರುದಾರ ಮಂಜುನಾಥ ನೀಡಿದ ತನ್ನ ದೂರಿನಲ್ಲಿ ಇಲ್ಲಿನ ನೂರು ಎಕರೆ ವಿಸ್ತೀರ್ಣದ ಸುಣ್ಣದಬಸ್ತಿ ಕೆರೆಯಲ್ಲಿ ಹೂಳು ತುಂಬಿದ್ದು, ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗುತ್ತಿದೆ. ಕೆರೆಯ ತೂಬು ದುರಸ್ತಿ ಕಂಡಿಲ್ಲ. ಹೂಳು ತೆಗೆದು ತೂಬು ದುರಸ್ತಿ ಮಾಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಈವರೆಗೂ ದುರಸ್ತಿಗೆ ಮುಂದಾಗಿಲ್ಲ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂಬ ದೂರಿಗೆ ಸಂಬಂಧಿಸಿದಂತೆ ಉತ್ತರಿಸಿದ ಲೋಕಾಯುಕ್ತ ನಿರೀಕ್ಷಕ, ತಾಲೂಕು ಪಂಚಾಯತಿ ಇಓ ಮೂಲಕ ಶಾಸಕರ ಗಮನಕ್ಕೆ ತಂದು ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಿಪ್ಪನ್‌ಪೇಟೆಯ ಗವಟೂರು ಗ್ರಾಮದ ಸರ್ವೆ.ನಂ. 361/2ರಲ್ಲಿ ಖತಿಜಾಬಿ ಕೋಂ ಖಾಸಿಂಸಾಬ್ ಅವರಿಗೆ ಸೇರಿದ 1-09 ಎಕರೆ ಭೂ ಪ್ರದೇಶದಲ್ಲಿ ವಸತಿ ಉದ್ದೇಶ ಭೂ ಪರಿವರ್ತನಾ ನಿಯಮಾನುಸಾರ ಇರಬೇಕಿದ್ದ ಸಂಪರ್ಕ ರಸ್ತೆಯ ಅಳತೆ ವ್ಯತ್ಯಾಸ ಇದ್ದರೂ ಪಿಡಿಓ ನಿರಾಪೇಕ್ಷಣಾ ಪತ್ರ ನೀಡಿದ್ದಾರೆ. ಕೂಡಲೇ ತನಿಖೆ ಕೈಗೊಂಡು ಸೂಕ್ತ ನ್ಯಾಯ ಒದಗಿಸಬೇಕು ಎಂಬ ಗ್ರಾ.ಪಂ. ಸದಸ್ಯ ಜೆ.ಡಿ. ಮಲ್ಲಿಕಾರ್ಜುನ ಅವರ ದೂರಿಗೆ, ಸ್ಥಳ ಪರಿಶೀಲಿಸಿ ಸರ್ವೆ ಮೂಲಕ ಸೂಕ್ತ ಕ್ರಮಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆ ಲೋಕಾಯುಕ್ತ ನಿರೀಕ್ಷಕರು ತಿಳಿಸಿದರು.
ದೂರುದಾರ ಕೋಡೂರು ವಾಸಿ ಕೆ. ಸುಬ್ರಹ್ಮಣ್ಯ ದೂರು ನೀಡಿ, ಕೋಡೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸಾರ್ವಜನಿಕ ಗಣಪತಿ ಸ್ಥಾಪಿಸುವ ಮೂಲಕ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಕೂಡಲೇ ಇಲಾಖೆಗೆ ಸೇರಿದ ಸರ್ವೆ ನಂಬರ್ 14ರ ಜಾಗದ ಬೌಂಡರಿ ನಿಗದಿಪಡಿಸಿ ಅಕ್ರಮ ಒತ್ತುವರಿ ತೆರವು ಕಾರ್ಯಕ್ಕೆ ಸಂಬಂಧಪಟ್ಟ ಇಲಾಖೆ ಮುಂದಾಗಬೇಕು ಎಂಬ ಮನವಿಗೆ ಉತ್ತರಿಸಿದ ಅವರು, ಆಸ್ಪತ್ರೆಗೆ ಸಂಬಂಧಿಸಿದ ಜಾಗದ ಸರ್ವೆ ಮಾಡಿಸಲು ಸೂಚಿಸಿ, ಅಗತ್ಯವಿದಲ್ಲಿ ಗಣಪತಿ ಪೆಂಡಾಲ್ ತೆರವಿಗೆ ಸೂಕ್ತ ಕ್ರಮಕೈ ಮುಂದಾಗುವಂತೆ ತಹಶೀಲ್ದಾರ್ ಅವರಿಗೆ ನಿರ್ದೇಶಿಸಿದರು.
ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ವಾಸಪ್ಪಗೌಡ ಹಾಗೂ ಸಂಗಡಿಗರು ದೂರು ನೀಡಿ, ಹುಂಚ ಹೋಬಳಿ ಬಿದರಹಳ್ಳಿ ಗ್ರಾಮದ ಸರ್ವೆ ನಂ. 47ರ ಕಂದಾಯ ಭೂಮಿಯನ್ನು ಪ್ರದೀಪ್ ಬಿನ್ ಚೂಡಾಮಣಿ ಎಂಬಾತ ಅಕ್ರಮ ಒತ್ತವರಿ ಮಾಡಿದ್ದು, ಸ್ಥಳದಲ್ಲಿದ್ದ ಕಾಡುಜಾತಿಯ ಹಲವಾರು ಮರಗಿಡಗಳನ್ನು ಕಡಿತಲೆ ಮಾಡಿದ್ದಾನೆ. ಈತನ ಕುಟುಂಬಕ್ಕೆ ಸರ್ಕಾರ ಈ ಹಿಂದೆಯೇ ಸುಮಾರು ಐದು ಎಕರೆ ಬಗರ್ ಹುಕುಂ ಜಮೀನು ಮಂಜೂರು ಮಾಡಿದೆ. ಈತನ ಕಂದಾಯ ಭೂಮಿ ಒತ್ತುವರಿಯಿಂದ ಸ್ಥಳೀಯ ಗ್ರಾಮಸ್ಥರಿಗೆ ತೊಂದರೆ ಆಗಿದೆ. ಕೂಡಲೇ ಒತ್ತುವರಿ ತೆರವಿಗೆ ಮುಂದಾಗಬೇಕು ಎಂಬ ಮನವಿಗೆ ಜಂಟಿ ಸರ್ವೆ ಬಳಿಕವಷ್ಟೇ ಸೂಕ್ತ ನಿರ್ಧಾರಕ್ಕೆ ಬರಲು ಸಾಧ್ಯವಿದೆ ಎಂಬ ಅಭಿಪ್ರಾಯಪಟ್ಟರು.
ಸಭೆಯಲ್ಲಿ ತಹಶೀಲ್ದಾರ್ ರಶ್ಮಿ, ತಾಲೂಕು ಪಂಚಾಯತಿ ಇಒ ನರೇಂದ್ರ ಕುಮಾರ್, ಲೋಕಾಯುಕ್ತ ಸಿಬ್ಬಂದಿಗಳಾದ ಸುರೇಂದ್ರ, ಪ್ರದೀಪ್, ಜಯಂತ್ ಸೇರಿದಂತೆ ತೋಟಗಾರಿಕೆ ಸಹಾಯಕ ನಿರ್ದೇಶಕ ಪುಟ್ಟನಾಯ್ಕ, ಸಹಾಯಕ ಕೃಷಿ ನಿರ್ದೇಶಕ ಸುನೀಲ್ ಹೆಗಡೆ, ಮೆಸ್ಕಾಂ ಎಇಇ ಚಂದ್ರಶೇಖರ್, ತಾಲೂಕು ವೈದ್ಯಾದಿಕಾರಿ ಸುರೇಶ್, ಜಲ ಸಂಪನ್ಮಲ ಇಲಾಖೆಯ ಎಇಇ ಶಿವಪ್ರಸಾದ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಉಮೇಶ್ ಗುಡ್ಡದ್, ಆಹಾರ ಇಲಾಖೆಯ ಬಾಲಚಂದ್ರಪ್ಪ, ಸಬ್ ಇನ್ಸ್‌ಪೆಕ್ಟರ್ ಶಂಕರ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.