HOSANAGARA ; ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಇಂದಿನ ಯುವ ಸಮುದಾಯದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳ್ಳಲು ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಕ್ರೀಡಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಶನಿವಾರ ತಾಲೂಕಿನ ನಗರ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಹೊಸನಗರ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಕ್ರೀಡಾ ಆಸಕ್ತಿ ಇರುತ್ತದೆ. ಆದರೆ ಅವರುಗಳಿಗೆ ಅವಕಾಶದ ಕೊರತೆ ಇರುತ್ತದೆ. ಉಪನ್ಯಾಸಕರುಗಳು ಹಾಗೂ ಪೋಷಕರುಗಳು ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಹಾಗೆಯೇ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳ ಬಗ್ಗೆ ಆಸಕ್ತಿಯನ್ನು ಹೊಂದಿರಬೇಕು ಎಂದರು.
ಗುರುಭವನ ನಿರ್ಮಾಣದ ಭರವಸೆ :
ಹೊಸನಗರದ ಪಟ್ಟಣದಲ್ಲಿ ಸುವ್ಯವಸ್ಥಿತವಾದ ಗುರುಭವನವನ್ನು ಮುಂದಿನ ದಿನಗಳಲ್ಲಿ ನಿರ್ಮಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ ಅವರು, ಹೊಸನಗರ ತಾಲೂಕಿನ ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಕ್ರೀಡಾಕ್ಷೇತ್ರದಲ್ಲಿ ಅತ್ಯುತ್ತಮವಾದ ಸಾಧನೆಯನ್ನು ಮಾಡಿದ್ದಾರೆ. ಆ ಸಾಧನೆಯ ಯಶಸ್ವಿಗೆ ಕಾರಣಕರ್ತರಾದ ಶಿಕ್ಷಕರುಗಳಿಗೆ ಉಪನ್ಯಾಸಕರುಗಳಿಗೆ ಹಾಗೂ ಪೋಷಕರುಗಳಿಗೆ ಮತ್ತು ತರಬೇತಿ ನೀಡಿದ ದೈಹಿಕ ಶಿಕ್ಷಕರುಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.
ಶಿವಮೊಗ್ಗ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಶೈಕ್ಷಣಿಕ ಚಟುವಟಿಕೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆಯನ್ನು ಮಾಡುವುದನ್ನು ಮೂಲಕ ನಮ್ಮ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿನ ಸೋಲು ಗೆಲುವುಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವುದರ ಮೂಲಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಯನ್ನು ಪಡೆದ ರಿಪ್ಪನ್ ಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಎಚ್ ವಾಸುದೇವ್ ಹಾಗೂ ಹೊಸನಗರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರರಾವ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಬಿ ಕೃಷ್ಣಪ್ಪ ವಿದ್ಯಾಸಂಸ್ಥೆ ಕಾರ್ಯದರ್ಶಿ ರವಿಕುಮಾರ ಹುಲ್ಲರಿಕೆ, ಮೂಡುಗೊಪ್ಪ ಗ್ರಾಪಂ ಅಧ್ಯಕ್ಷೆ ಸಂಗೀತಾ ಯು, ಉಪಾಧ್ಯಕ್ಷೆ ಸುಮನಾ, ಕೊಡಚಾದ್ರಿ ಪದವಿ ಕಾಲೇಜು ಸಮಿತಿ ಉಪಾಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಹೊಸನಗರ ಪ ಪಂ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಪ್ರಾಚಾರ್ಯರಾದ ಗೀತಾ ಬಾಲಚಂದ್ರ, ಮಹಮದ್ ನಜಹತ್ ಉಲ್ಲಾ, ಸ್ವಾಮಿರಾವ್, ಗಣೇಶ ಕೆ.ಎಸ್, ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರ, ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಪಂಡರಿನಾಥ್, ಹೊಸನಗರ ತಾಲೂಕು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಹಾಲಪ್ಪ ಸಂಕೂರ್ ಇನ್ನಿತರರು ಇದ್ದರು.
ಉಪನ್ಯಾಸಕರಾದ ಶೇಷಾದ್ರಿ ಸ್ವಾಗತಿಸಿ, ಗಂಗಾಧರ ಕೆ.ಎಸ್ ನಿರೂಪಿಸಿ. ಕುಮಾರ್ ವಂದಿಸಿದರು.