SHIVAMOGGA ; ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ರೈತಾಪಿ ವರ್ಗ ಭೂಮಿ ಹುಣ್ಣಿಮೆ ಹಬ್ಬವನ್ನು ಗುರುವಾರ ಸಡಗರ ಸಂಭ್ರಮದಿಂದ ಆಚರಿಸಿದರು. ಭೂ ತಾಯಿ ಈ ಸಮಯದಲ್ಲಿ ಗರ್ಭಿಣಿಯಂತೆ ಬೆಳೆಗಳಿಂದ ಮೈ ತುಂಬಿಕೊಂಡಿರುತ್ತಾಳೆ. ಹೀಗಾಗಿ ರೈತರು ಭೂ ತಾಯಿಗೆ ಗರ್ಭಿಣಿಯ ಸ್ಥಾನದಲ್ಲಿಟ್ಟು, ಆಕೆಗೆ ಸೀಮಂತದ ಸಂಭ್ರಮದಂತೆ ಪೂಜೆ ಸಲ್ಲಿಸುತ್ತಾರೆ.
ಭೂ ತಾಯಿಯ ಬಯಕೆಗಳನ್ನು ಈಡೇರಿಸುವ ಸೀಮಂತದ ಸಂಭ್ರಮ, ಭೂಮಿಯಲ್ಲಿ ಉತ್ತಿ ಬಿತ್ತಿದ ಬೆಳೆಗಳು ಕಾಳು ಕಟ್ಟುವ ಸಮಯ ಇದಾಗಿದ್ದು, ಭೂ ತಾಯಿ ಗರ್ಭಿಣಿಯೆಂಬ ನಂಬಿಕೆಯಿಂದ ಅವಳ ಬಯಕೆಗೆ ಅನುಗುಣವಾಗಿ ಉಡಿ ತುಂಬುತ್ತಾರೆ. ಭೂಮಿ ಹುಣ್ಣಿಮೆ ಮಲೆನಾಡಿನ ರೈತರ ಪಾಲಿಗೆ ಸಂಭ್ರಮದ ಹಬ್ಬ. ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭೂಮಿ ಹುಣ್ಣಿಮೆ ಹಬ್ಬ ಹೆಚ್ಚು ಪ್ರಚಲಿತದಲ್ಲಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗ (ದೀವರು) ಸಮುದಾಯದಲ್ಲಿ ಈ ಸಂಪ್ರದಾಯ ವಿಶಿಷ್ಟವಾಗಿದೆ.
ಬೇರೆ ಕಡೆಗಳಲ್ಲಿ ವಿಭಿನ್ನ ಹೆಸರುಗಳಿಂದ ಹಬ್ಬ ಆಚರಿಸಲ್ಪಡುತ್ತದೆ. ವರ್ಷವಿಡಿ ಭೂಮಿಯಲ್ಲಿ ಉತ್ತಿ ಬಿತ್ತಿ ಬೆಳೆದು ಅನ್ನದಾತ ಎನಿಸಿಕೊಂಡಿರುವ ರೈತನಿಗೆ ಭೂಮಿ ಬರೀ ಮಣ್ಣಲ್ಲ, ಭೂಮಿ ಫಲವತ್ತತೆಯ ಸಂಕೇತ.
ಭೂಮಿ ಹುಣ್ಣಿಮೆ ಸಂದರ್ಭದಲ್ಲಿ ಹೊಲ ಗದ್ದೆಗಳಲ್ಲಿ ಬಿತ್ತಿದ ಬೆಳೆಗಳು ತೆನೆಗಳಾಗಿ, ಕಾಳು ಗಟ್ಟಿಯಾಗುವ ಹಂತದಲ್ಲಿರುತ್ತದೆ, ಅಷ್ಟೇ ಅಲ್ಲದೆ ಅಡಿಕೆ, ತೆಂಗು, ಬಾಳೆ ಸೇರಿದಂತೆ ವಿವಿಧ ಬೆಳೆಗಳ ಫಸಲು ಚೆನ್ನಾಗಿ ಬಂದಿರುತ್ತದೆ. ಈ ಸಂದರ್ಭದಲ್ಲಿ ಭೂ ತಾಯಿ ಗರ್ಭಿಣಿ ಎಂಬ ನಂಬಿಕೆಯಲ್ಲಿ ರೈತಾಪಿ ವರ್ಗ ಪುರಾತನ ಕಾಲದಿಂದಲೂ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಭೂಮಿ ತಾಯಿಗೆ ಅಂತಲೇ ಬಗೆ ಬಗೆಯ ಅಡುಗೆಗಳನ್ನು ಮಾಡುತ್ತಾರೆ. ಅವುಗಳನ್ನು ಚಿತ್ತಾರದಿಂದ ಕೂಡಿದ ಬೆತ್ತ ಅಥವಾ ಬಿದಿರಿನ ಬುಟ್ಟಿಯಲ್ಲಿ ಮನೆಯಿಂದ ತುಂಬಿಕೊಂಡು ಪೂಜೆ ಮಾಡುವ ಸ್ಥಳಕ್ಕೆ ಮನೆಯ ಯಜಮಾನ ತಲೆಯ ಮೇಲೆ ಹೊತ್ತು ಕೊಂಡೊಯ್ಯುವುದು ಸಂಪ್ರದಾಯ.
ಕೆಲವರು ಭತ್ತದ ಗದ್ದೆಯಲ್ಲಿ ಭತ್ತದ ಗಿಡಗಳಿಗೆ ಪೂಜೆ ಮಾಡಿದರೆ, ಅಡಿಕೆ ತೋಟ ಇರುವವರು ಅಡಿಕೆ ಮರಕ್ಕೆ ಸೀರೆಯನ್ನು ಉಡಿಸಿ, ಆಭರಣಗಳನ್ನು ಧರಿಸಿ ಶೃಂಗಾರ ಮಾಡಿರುತ್ತಾರೆ. ಕುಟುಂಬಸ್ಥರಲ್ಲೇ ಸೇರಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ದೇವರುಗಳಿಗೆ ಹಾಗೂ ಭೂಮಿ ತಾಯಿಗೆ ಬಗೆ ಬಗೆಯ ಅಡುಗೆಗಳನ್ನು ನೈವೇದ್ಯ ಮಾಡಿ ಒಂದು ಎಡೆಯನ್ನು ಗದ್ದೆಯಲ್ಲಿ ಇಟ್ಟು, ಭೂಮಿ ತಾಯಿಯ ಬಳಿ ಉತ್ತಮ ಫಸಲನ್ನು ನೀಡಿ ನಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೊಳ್ಳುತ್ತಾರೆ.
ಭೂಮಣ್ಣಿ ಬುಟ್ಟಿ ತಯಾರಿ ವಿಧಾನ :
ಬುಟ್ಟಿಗೆ ಸಗಣಿ, ಕೆಮ್ಮಣ್ಣು ಹಚ್ಚಿ ನಂತರ ಅದರ ಮೇಲೆ ಅಕ್ಕಿ ಹಿಟ್ಟಿನಲ್ಲಿ ಹಸೆ ಚಿತ್ತಾರವನ್ನು ಬಿಡಿಸಲಾಗುತ್ತದೆ. ಗೊಣಬೆ, ಭತ್ತದ ಸಸಿ ಮಡಿ, ಬುಟ್ಟಿಯನ್ನು ಹೊತ್ತೊಯ್ಯುತ್ತಿರುವ ಚಿತ್ರ ಸೇರಿದಂತೆ ಹಲವು ಚಿತ್ರಗಳು ಚಿತ್ತಾರಗಳಾಗಿ ಮೂಡಿಬರುತ್ತವೆ.
ಹಬ್ಬದ ಹಿಂದಿನ ದಿನ ರಾತ್ರಿ ತಮ್ಮ ಹಿತ್ತಲಲ್ಲಿ ಬೆಳೆದ ಹಿರೇಕಾಯಿ, ಕುಂಬಳಕಾಯಿ, ಬದನೆಕಾಯಿ, ಮೊದಲಾದ ತರಕಾರಿಗಳನ್ನು ಹೆಚ್ಚಿ ‘ಚರಗ’ (ಹಚ್ಚಂಬಲಿ) ತಯಾರಿಸಲಾಗುತ್ತದೆ. ಹೀಗೆ ತಯಾರಿಸಲಾದ ಚರಗವನ್ನು ಮುಂಜಾನೆಯ ನಸುಕಿನಲ್ಲೆ ಸಣ್ಣ ಬುಟ್ಟಿಯಲ್ಲಿ ಹೊತ್ತು ತೆಗೆದುಕೊಂಡು ಹೋಗಿ ಕೃಷಿ ಭೂಮಿಗೆ ಬೀರಲಾಗುತ್ತದೆ. ನಂತರ ಮನೆಯಲ್ಲಿ ತಯಾರಾದ ಅಡುಗೆಯನ್ನು ಭೂಮಣ್ಣಿ ಬುಟ್ಟಿಯಲ್ಲಿ ದೊಡ್ಡ ಬುಟ್ಟಿಯಲ್ಲಿ ಹೊತ್ತೊಯ್ದು ಕುಟುಂಬದ ಎಲ್ಲಾ ಸದಸ್ಯರು ಜಮೀನಿಗೆ ತೆರಳುತ್ತಾರೆ. ಭತ್ತದ ಪೈರಿಗೆ ಹೆಣ್ಣುಮಕ್ಕಳು ತಮ್ಮ ತಾಳಿ ಸರವನ್ನೇ ಬಿಚ್ಚಿ ತೋರಣವಾಗಿ ಕಟ್ಟಿ ಪೂಜೆ ಸಲ್ಲಿಸುವ ಅಪರೂಪದ ಸಂಪ್ರದಾಯ ಈ ಸಂದರ್ಭದಲ್ಲಿ ನಡೆಯುತ್ತದೆ.
ಸಾಧಾರಣವಾಗಿ ಎಂತಹ ಸಂದರ್ಭದಲ್ಲಿಯೂ ತಾಳಿ ಸರವನ್ನು ಬಿಚ್ಚಲೊಪ್ಪದ ಗ್ರಾಮೀಣ ಮಹಿಳೆಯರು, ಭತ್ತದ ಪೈರಿಗೆ ತಮ್ಮ ತಾಳಿ ಸರವನ್ನು ಕಟ್ಟುವ ಸಲುವಾಗಿ ಬಿಚ್ಚಲು ಮುಂದಾಗುತ್ತಾರೆ. ಇದು ಭೂಮಿ ತಾಯಿಗೆ ಇಲ್ಲಿನ ರೈತರ ಮಹಿಳೆಯರು ಸಲ್ಲಿಸುವ ಒಂದು ವಿಶೇಷವಾದ ಗೌರವ.
ಕಾಗೆಗೆ ಎಡೆ ನೀಡುವ ಪದ್ಧತಿ :
ನಂತರ ಭತ್ತದ ಪೈರಿಗೆ ಪೂಜೆ ಸಲ್ಲಿಸಿದ ತರುವಾಯ ಆಹಾರದ ಎಡೆಯನ್ನು ಮಾಡಿ ಕಾಗೆಗೆ ನೀಡುತ್ತಾರೆ. ಈ ಸಂಪ್ರದಾಯಕ್ಕೆ ಕಾರಣವೆಂದರೆ, ನಿಧನರಾದ ಕುಟುಂಬದ ಹಿರಿಯರು ಬಂದು ಈ ಆಹಾರ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಬೇರೂರಿರುವುದು. ಇಂತಹ ಪದ್ಧತಿಯನ್ನು ಕಾಗೆಗೆ ಕರೆಯುವುದು, ಗೂಳಿ ಕರೆಯುವುದು ಎನ್ನಲಾಗುತ್ತದೆ. ಸಾಮಾನ್ಯವಾಗಿ ರೈತರು ಬೆಳೆದ ಬೆಳೆಯನ್ನು ಇಲಿಗಳು ನಾಶ ಮಾಡುವುದರಿಂದ ಅದನ್ನು ರೈತರ ಶತ್ರು ಎಂದೇ ಪರಿಗಣಿಸಲಾಗುತ್ತದೆ.
ಬೆಳೆ ನಾಶ ಮಾಡುವ ‘ಇಲಿ’ಗೂ ಇಲ್ಲಿದೆ ವಿಶೇಷ ಸ್ಥಾನಮಾನ !
ಭೂಮಿ ಹುಣ್ಣಿಮೆ ಹಬ್ಬದ ವೇಳೆಯಲ್ಲಿ ಇಲಿಗೂ ಒಂದು ಎಡೆ ನೀಡಿ ನಮ್ಮ ಬೆಳೆಗೆ ತೊಂದರೆ ಕೊಡಬೇಡ ಎಂದು ಪ್ರಾರ್ಥಿಸಲಾಗುತ್ತದೆ. ಪೂಜೆ ವೇಳೆಯಲ್ಲಿ ಒಂದು ಕಡುಬನ್ನು ಗದ್ದೆಯ ಕೆಲವು ಸಸಿಗಳನ್ನು ಕಿತ್ತು ಅದರ ಕೆಳಗೆ ಹುಗಿಯಲಾಗುತ್ತೆ. ನಂತರ ಭತ್ತದ ಕೊಯ್ಲಿನ ಸಂದರ್ಭದಲ್ಲಿ ಈ ಕಡುಬನ್ನು ಪ್ರಸಾದ ಎಂದು ಸ್ವೀಕರಿಸಲಾಗುತ್ತದೆ. ನಂತರ ಕುಟುಂಬದವರೆಲ್ಲರೂ ಒಟ್ಟಿಗೆ ಸೇರಿ ಕೃಷಿ ಭೂಮಿಯಲ್ಲೇ ಊಟ ಮಾಡುತ್ತಾರೆ.
ಆಧುನಿಕತೆಯಿಂದಾಗಿ ನಮ್ಮ ಅನೇಕ ಸಾಂಪ್ರದಾಯಿಕ ಆಚರಣೆಗಳು ಮೂಲೆಗೆ ಸರಿಯುತ್ತಿದ್ದರೂ ಭೂಮಿ ಹುಣ್ಣಿಮೆ ಹಬ್ಬದ ಆಚರಣೆಗಳು ಇಂದಿಗೂ ಚಾಲ್ತಿಯಲ್ಲಿವೆ. ಈ ಹಬ್ಬದ ಆಚರಣೆಗಳು ನಿಸರ್ಗಕ್ಕೆ ಹತ್ತಿರವಾದದ್ದು ಮತ್ತು ನಿಸರ್ಗದಲ್ಲೆ ದೇವರನ್ನು ಕಾಣುವುದು ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ.