RIPPONPETE ; ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಲಕ್ಷದೀಪೋತ್ಸವವು ನವೆಂಬರ್ 20 ರಂದು ರಾತ್ರಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು.
ಹುಂಚ ನಗರದಲ್ಲಿ ದೀಪಗಳಿಂದ ಅಲಂಕೃತವಾದ ರಜತ ಪಲ್ಲಕ್ಕಿ ಹಾಗೂ ರಥಪಟ ವಾದ್ಯಗೋಷ್ಠಿಗಳಿಂದ ನೆರವೇರಿತು.
ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ದಿವ್ಯ ನೇತೃತ್ವದಲ್ಲಿ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಮಹಾಮಾತೆ ಶ್ರೀ ಪದ್ಮಾವತಿ ದೇವಿ ಜಿನಾಲಯಗಳಲ್ಲಿ ಭಕ್ತರು ದೀಪ ಬೆಳಗಿಸಿದರು.
ಮಾನಸ್ತಂಭ, ಧ್ವಜಸ್ತಂಭ, ಚಂದ್ರಶಾಲೆ, ಶ್ರೀಮಠಗಳಲ್ಲಿ ಮಣ್ಣಿನ ಹಣತೆಗಳು, ಬೆಳಕು ನೀಡಿದವು. ಮಕ್ಕಳು, ಹಿರಿಯರು ದೀಪ-ದೀಪಗಳ ಸಾಲುಗಳನ್ನು ಬೆಳಗಿಸುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.
ಪೂಜ್ಯ ಸ್ವಾಮೀಜಿಯವರು “ದೀಪಗಳಿಂದ ದೀಪೋತ್ಸವ ಆಚರಣೆಯು ಧಾರ್ಮಿಕ ವಿಧಿಯೂ ಆಗಿದೆ” ಎನ್ನುತ್ತಾ ದೀಪೋತ್ಸವದಿಂದ ಜೀವನೋತ್ಸವ ವೃದ್ಧಿ ಆಗುತ್ತದೆ ಎಂದು ವಿವರಿಸಿದರು. ಗಜರಾಣಿ ಐಶ್ವರ್ಯ, ಆಶ್ವ ಮಾನವಿ, ನಗರ ಸಂಚಾರದಲ್ಲಿ ಭಕ್ತರಿಗೆ ಮುದ ನೀಡಿತ್ತು. ಊರ-ಪರವೂರ ಭಕ್ತರು ಧನ್ಯರಾದರು.
ಊರ ಪರವೂರ ಭಕ್ತರು, ಹುಂಚ ಜೈನ ಸಮಾಜ, ಶ್ರೀ ಪದ್ಮಾವತಿ ಮಹಿಳಾ ಮಂಡಲ, ಗುರುಕುಲದ ವಿದ್ಯಾರ್ಥಿಗಳು, ಶ್ರೀಮಠದ ಸೇವಾಕಾಂಕ್ಷಿಗಳು ಸ್ವಾಮೀಜಿಯವರಿಂದ ಶ್ರೀ ಫಲ ಮಂತ್ರಾಕ್ಷತೆ ಪಡೆದರು.