RIPPONPETE ; ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಸದಸ್ಯರೊಬ್ಬರು ಪಂಚಾಯ್ತಿ ಆಭಿವೃದ್ದಿ ಆಧಿಕಾರಿಯನ್ನು ವರ್ಗಾವಣೆ ಮಾಡಿಸಿಕೊಂಡು ಪಂಚಾಯಿತಿಗೆ ಹಾಕಿಸಿಕೊಳ್ಳಲು 2 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿರುವುದು ಮತ್ತು ಖಾಸಗಿ ವ್ಯಕ್ತಿಯೊಬ್ಬರಿಗೆ ಅಶ್ಲೀಲ ಪದ ಬಳಸಿ ಅವಮಾನಿಸಿರುವ ಘಟನೆಯನ್ನು ಖಂಡಿಸಿ ಬಿಜೆಪಿ ಪಕ್ಷದವರು ಇಂದು ಪ್ರತಿಭಟನೆ ನಡೆಸಿ ತಕ್ಷಣ ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಮತ್ತು ಪೊಲೀಸ್ ಇಲಾಖೆಯವರು ಸುಮೋಟ್ ಅಡಿ (ಸ್ವಯಂ ಪ್ರೇರಿತ) ದೂರು ದಾಖಲಿಸಿ ಬ್ಲಾಕ್‌ಮೇಲ್ ಮಾಡುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಭಾಗವಹಿಸಿ ಮಾತನಾಡಿ, ಶಾಂತಿ ಸುವ್ಯವಸ್ಥೆಯಿಂದ ಇದ್ದ ಗ್ರಾಮ ಪಂಚಾಯ್ತಿಯನ್ನು ಅಶಾಂತಿಯ ತಾಣವನ್ನಾಗಿ ಮಾಡ ಹೊರಟಿರುವ ಕಿಡಿಗೇಡಿಗಳನ್ನು ಪತ್ತೆ ಮಾಡಿ ಯಾವುದೇ ಕಾರಣಕ್ಕೂ ಬ್ಲಾಕ್‌ಮೇಲ್ ಮಾಡುವವರನ್ನು ಸದೆಬಡಿಯುವಂತೆ ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಹೇಳಿ, ಮುಂದಿನ ತಿಂಗಳು 9 ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯವನ್ನು ಚರ್ಚೆಗೆ ತರುವ ಮೂಲಕ ಕಾಂಗ್ರೆಸ್ ದುರಾಡಳಿತವನ್ನು ಜಗಜಾಹೀರು ಮಾಡುವುದಾಗಿ ಎಚ್ಚರಿಸಿ, ಬಿಜೆಪಿ ಎಂದಿಗೂ ಅನ್ಯಾಯವನ್ನು ಸಹಿಸದು.
ನಮ್ಮ ಪಕ್ಷ ಎಂದಿಗೂ ಬಡವರ ರೈತನಾಗರಿಕರ ಪರವಾದ ಪಕ್ಷವಾಗಿದ್ದು ಅಲ್ಲದೇ ನನ್ನ ಅವಧಿಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗಿ ಇನ್ನೂ 50 ವರ್ಷಗಳ ಕಾಲ ನನ್ನ ಅಭಿವೃದ್ದಿ ಕಾರ್ಯಗಳು ಜನರ ಮನದಲ್ಲಿ ಉಳಿಯುವಂತೆ ಮಾಡಿದ್ದೇನೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಸಮೀಪಿಸುತ್ತಿದ್ದರೂ ಕೂಡಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ದಿ ಮರೀಚಿಕೆಯಾಗಿದೆ ಎಂದು ಲೇವಡಿ ಮಾಡಿದ ಅವರು, ಜವಾಬ್ದಾರಿ ಸ್ಥಾನದಲ್ಲಿದ್ದು ಜನರಿಗೆ ಏಕವವನದಲ್ಲಿ ಆಶ್ಲೀಲ ಪದಬಳಕೆ ಮಾಡಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಳೆದ 15 ದಿನಗಳಿಂದ ಹರಿದಾಡುತ್ತಿದ್ದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದ್ದು ತಕ್ಷಣವೇ ಗ್ರಾಮಾಧ್ಯಕ್ಷೆ ಬಹಿರಂಗ ಕ್ಷಮೆಯಾಚಿಸಬೇಕು ಹಾಗೂ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಹೇಳಿ ರಾಜೀನಾಮೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯ ರೂಪುರೇಷವನ್ನು ಸಿದ್ದಗೊಳಿಸಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾ ಬಿಜೆಪಿ ಆಧ್ಯಕ್ಷ ಟಿ.ಡಿ ಮೇಘರಾಜ್ ಮಾತನಾಡಿ, ಭ್ರಷ್ಟಾಚರಕ್ಕೆ ಇನ್ನೊಂದು ಹೆಸರೆ ಕಾಂಗ್ರೆಸ್. ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕನ ಭ್ರಷ್ಟಾಚಾರದಿಂದಾಗಿ ಸರ್ಕಾರಿ ನೌಕರನೋರ್ವ ಜೀವ ತೆಗೆದುಕೊಂಡಿರುವುದು. ವಾಲ್ಮೀಕಿ ನಿಗಮದಲ್ಲಿನ ಹಗರಣ ಭೂವಿ ಅಭಿವೃದ್ದಿ ನಿಗಮದ ಹಾಗೂ ಮೈಸೂರು ಮುಡಾದ 4000 ಕೋಟಿ ರೂ. ನಿವೇಶನ ಹಗರಣಗಳಿಂದ ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಕೇಂದ್ರಿಕೃತ ವಿಕೇಂದ್ರಿಕರಣದ ಭ್ರಷ್ಟಾಚಾರದ ಪಕ್ಷವೆಂದು ಹೇಳಿ, ತಕ್ಷಣವೇ ಗ್ರಾಮಾಧ್ಯಕ್ಷೆ ಮತ್ತು ಸದಸ್ಯರೊಬ್ಬರು ನಡೆಸಿರುವ ಸಂಭಾಷಣೆಯ ಆಡಿಯೋದ ಜಾಡು ಹಿಡಿದು ಪೊಲೀಸ್ ಇಲಾಖೆ ತನಿಖೆ ನಡೆಸಿ ಸ್ವಯಂ ಪ್ರೇರಿತ ದೂರು ದಾಖಲಿಸಿ ಆರೋಪಿತರನ್ನು ಬಂಧಿಸುವಂತೆ ಪ್ರತಿಭಟನಾ ಸಭೆಯಲ್ಲಿ ಆಗ್ರಹಿಸಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಜಿ.ಡಿ.ಮಲ್ಲಿಕಾರ್ಜುನ, ನಾಗರತ್ನ ದೇವರಾಜ್, ಪದ್ಮ ಸುರೇಶ್, ಲೀಲಾ ಉಮಶಂಕರ್, ಮಂಜುಳಾ ಕೇತಾಜಿರಾವ್, ದೀಪಾ, ವನಮಾಲ, ದಾನಮ್ಮ, ಆಶಾ ತರಕಾರಿ ಯೋಗೇಂದ್ರಗೌಡ, ಸುಂದರೇಶ್, ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಇನ್ನಿತರರು ಪಕ್ಷದ ಮುಖಂಡರು ಹಾಜರಿದ್ದರು.
ಪ್ರತಿಭಟನಾ ಸಭೆಯ ನಂತರ ವಿನಾಯಕ ವೃತ್ತದಿಂದ ಮೆರವಣಿಗೆ ಹೊರಟು ಗ್ರಾಮ ಪಂಚಾಯ್ತಿ ಮುಂಭಾಗ ಕಂದಾಯ ಇಲಾಖೆ, ತಾಲ್ಲೂಕು ಪಂಚಾಯ್ತಿ ಇಓ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮನವಿಪತ್ರವನ್ನು ನೀಡಿ ಸರ್ಕಾರಕ್ಕೆ ತಲುಪಿಸಲು ಮನವಿ ಮಾಡಿದರು.