ಜೆಜೆಎಂ ಯೋಜನೆ ಅನುಷ್ಠಾನ ಕುಂಠಿತ ; ಕೆಡಿಪಿ ಸಭೆಯಲ್ಲಿ ಶಾಸಕ ಬೇಳೂರು ಅಸಮಾದಾನ

Written by malnadtimes.com

Updated on:

HOSANAGARA ; ಪ್ರತಿ ಮನೆಗೂ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆ ತಾಲೂಕು ವ್ಯಾಪ್ತಿಯಲ್ಲಿ ಕುಂಠಿತಗೊಂಡಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅಸಮದಾನ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ, ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದ ಅವರು, ಅರಣ್ಯ ಇಲಾಖೆ ಅಧಿಕಾರಿಗಳು ಕಾಮಗಾರಿ ನಿರ್ವಹಣೆಗೆ ತಡೆಯೊಡ್ಡುತ್ತಿರುವ ವಿಚಾರದ ಕುರಿತು ಮಾತನಾಡಿ, ಸರ್ಕಾರದ ಯೋಜನೆಗಳು ಜನಹಿತದಿಂದ ಜಾರಿಯಾಗುತ್ತವೆ.

ನಾಮನಿರ್ದೇಶಿತ ಸದಸ್ಯ ವಾಟಗೋಡು ಸುರೇಶ್ ಮಾತನಾಡಿ, ಬಗರ್‌ಹುಕುಂ ಯೋಜನೆಯಡಿ ಹಕ್ಕುಪತ್ರ ಪಡೆದ ಸಾವಿರಾರು ಮಂದಿಗೆ ಇನ್ನೂ ಪಹಣಿ ಲಭ್ಯವಾಗಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ತ್ವರಿತಗತಿಯಲ್ಲಿ ಕಾರ‍್ಯನಿರ್ವಹಿಸುತ್ತಿಲ್ಲ. ಪಹಣಿಯಲ್ಲಿ ಬೆಳೆ ನಮೂದಾಗದ ಕಾರಣ ಸಾಕಷ್ಟು ಕೃಷಿಕರಿಗೆ ಬೆಳೆ ವಿಮೆ ಸೌಲಭ್ಯ ಸಿಗುತ್ತಿಲ್ಲ ಎಂದು ಆಪಾದಿಸಿದರು.

ನಗರ ಹೋಬಳಿ ಕೇಂದ್ರ ಹಾಗೂ ತಾಲೂಕಿನ ಹಲವು ಆಸ್ಪತ್ರೆಗಳಲ್ಲಿ ವೈದ್ಯರು ಆರೋಗ್ಯ ಇಲಾಖೆ ಸಿಬ್ಬಂದಿಗಳ ಕೊರತೆ ಇರುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಬೇರೆಡೆಗೆ ನಿಯೋಜನೆ ಮಾಡುವಾಗ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಔಷಧಗಳು ದಾಸ್ತಾನು ಸದಾ ಇರಬೇಕು. ಕೆಎಫ್‌ಡಿ ಸೋಂಕು ಪ್ರತಿ ವರ್ಷ ಡಿಸೆಂಬರ್ ನಂತರ ಕಾಣಿಸಿಕೊಳ್ಳುತ್ತದೆ. ಪ್ರಸ್ತುತ ಕೆಎಫ್‌ಡಿಗೆ ಯಾವುದೇ ಲಸಿಕೆ ಲಭ್ಯವಿಲ್ಲ. ಹಾಗಾಗಿ ಅನುಮಾನಾಸ್ಪದ ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಅವರನ್ನು ತಪಾಸಣೆಗೆ ಒಳಪಡಿಸಿ, ಸೂಕ್ತ ಚಿಕಿತ್ಸೆ ನೀಡಿ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಗ್ಯಾಧಿಕಾರಿಗೆ ಸೂಚಿಸಿದರು. ತಾಲೂಕು ಆರೋಗ್ಯಾಧಿಕಾರಿ ಈ ಬಗ್ಗೆ ನಿಗಾ ವಹಿಸುವಂತೆ ಶಾಸಕರು ಸೂಚಿಸಿದರು.

ವಿತರಕರು ಗ್ರಾಹಕರಿಂದ ಗೃಹಬಳಕೆ ಅನಿಲ ಸಿಲಿಂಡರ್‌ಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಬಂದಿವೆ. ಈ ಬಗ್ಗೆ ಯಾಕೆ ನಿಗಾ ವಹಿಸುತ್ತಿಲ್ಲ? ಎಂದು ಶಾಸಕ ಆರಗ ಜ್ಞಾನೇಂದ್ರ ಆಹಾರ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಅನಿಲ ಸಿಲಿಂಡರ್‌ಗಳನ್ನು ಮನೆ ಬಾಗಿಲಿಗೆ ತಲುಪಿಸಬೇಕು ಹಾಗು ನಿಗದಿತ ಶುಲ್ಕ ಮಾತ್ರ ಪಡೆಯಬೇಕು ಎಂಬ ನಿಯಮ ಗಾಳಿಗೆ ತೂರಲಾಗಿದೆ. ಪ್ರತಿ ಸಿಲಿಂಡರ್ ಮೇಲೆ 150 ರೂ. ಹೆಚ್ಚುವರಿ ಹಣ ಪಡೆಯಲಾಗುತ್ತಿದೆ ಎಂದು ಅಸಮದಾನ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ, ಅಡುಗೆ ಅನಿಲ ಸಿಲಿಂಡರ್‌ಗಳ ಮಾರಾಟ ದಂಧೆ ನಡೆಯುತ್ತಿದೆ. ಅಲ್ಲಲ್ಲಿ ಅನಧಿಕೃತ ಏಜೆನ್ಸಿಗಳೇ ಇವೆ. ಇದಕ್ಕೆಲ್ಲಾ ಅವಕಾಶ ನೀಡಬಾರದು. ಕಟ್ಟುನಿಟ್ಟಾಗಿ ಕ್ರಮ ಜರುಗಿಸಿ. ಅಲ್ಲದೇ ಪಡಿತರ ಚೀಟಿ ರದ್ದುಪಡಿಸುವ ಮುನ್ನ ಸೂಕ್ತ ಪರಿಶಿಲನೆ ಕೈಗೊಳ್ಳಿ. ಅನರ್ಹರ ಚೀಟಿ ರದ್ದು ಪಡಿಸುವ ಭರದಲ್ಲಿ ಅರ್ಹರನ್ನೂ ಕೈಬಿಡಬೇಡಿ ಎಂದರು.

ಸಭೆಯಲ್ಲಿ ತಹಸೀಲ್ದಾರ್ ಎಚ್.ಜೆ. ರಶ್ಮಿ, ಆಡಳಿತಾಧಿಕಾರಿ ಜಯಲಕ್ಷ್ಮಿ, ತಾಪಂ ಇಓ ನರೇಂದ್ರಕುಮಾರ್, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಚ್.ಬಿ.ಚಿದಂಬರ, ನಾಮನಿರ್ದೇಶಿತ ಸದಸ್ಯರಾದ ಮಂಜಪ್ಪ, ಸುಮಾ ಸುಬ್ರಮಣ್ಯ, ನಾಗೇಂದ್ರ ಜೋಗಿ ಎಂ.ವಿ.ಜಯರಾಂ, ಚಂದ್ರೇಶ್, ಆಸಿಫ್, ಶಾಸಕರ ಆಪ್ತ ಕಾರ್ಯದರ್ಶಿಗಳಾದ ಸಣ್ಣಕ್ಕಿ ಮಂಜು, ಬಸವರಾಜ್, ರಾಜೇಶ್ ಮತ್ತಿತರರು ಇದ್ದರು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅವರ ಅವಧಿಯಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಾಗ ನಾವೆಲ್ಲ ಅವರನ್ನು ಅವರ ಕೆಲಸವನ್ನು ಕೊಂಡಾಡಿದ್ದೇವೆ ಈಗ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಾಗ ಅವರು ನಮ್ಮನ್ನು ಬೆಂಬಲಿಸಬೇಕು ಎಂದು ಆರಗ ಜ್ಞಾನೇಂದ್ರರವರನ್ನು ಕೆಣಕಿದಾಗ ನಾವು ಅವರ ಯೋಜನೆಯನ್ನು ವಿರೋಧಿಸಿಲ್ಲ ಅವರ ಯೋಜನೆ ಸಮರ್ಪಕವಾಗಿ ಎಲ್ಲರಿಗೂ ತಲುಪಿಸಬೇಕು ಎಂದು ಹೇಳಿದ್ದೇವೆ ಎಂದು ಆರಗ ಜ್ಞಾನೇಂದ್ರರವರು ಬೇಳೂರು ಗೋಪಾಲಕೃಷ್ಣರವರಿಗೆ ಟಾಂಗ್ ನೀಡಿದರು.

Leave a Comment