ಪ್ರಸ್ತುತ ರಾಜ್ಯದಲ್ಲಿರುವುದು ಅಭಿವೃದ್ದಿ ಶೂನ್ಯ ಸರ್ಕಾರ ; ಶಾಸಕ ಆರಗ ಜ್ಞಾನೇಂದ್ರ ಲೇವಡಿ

Written by malnadtimes.com

Published on:

HOSANAGARA ; ರಾಜ್ಯ ಸರ್ಕಾರವು ಕಟ್ಟಡ ಗುತ್ತಿಗೆದಾರರಿಂದ ಸಂಗ್ರಹಿಸಿದ್ದ ಶೇ. 1ರಷ್ಟು ಸೆಸ್ ಹಣ, ಒಟ್ಟಾರೆ 5 ಸಾವಿರ ಕೋಟಿ ರೂ. ಕಾರ್ಮಿಕ ಇಲಾಖೆಯಲ್ಲಿ ಸಂಗ್ರಹವಾಗಿತ್ತು. ಈ ಅನುದಾನವನ್ನು ಸೂಕ್ತವಾಗಿ ಬಳಕೆ ಮಾಡಿಕೊಂಡ ಅಂದಿನ ರಾಜ್ಯ ಬಿಜೆಪಿ ಸರ್ಕಾರವು ಕೊರೋನ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಮೂಲಕ ಕಟ್ಟಡ ಕಾರ್ಮಿಕರಿಗೆ ಲಕ್ಷಾಂತರ ಉಚಿತ ಸಾಮಾಗ್ರಿ ಕಿಟ್ ಹಾಗೂ ಆಹಾರ ಕಿಟ್‌ಗಳನ್ನು ವಿತರಿಸುವ ಮೂಲಕ ಆರ್ಥಿಕ ಸಂಕಷ್ಟದಲ್ಲಿ ಸಾವಿರಾರು ಕುಟುಂಬಗಳಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆಯಿತು. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಸರ್ಕಾರದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now

ಇದೊಂದು ಪುಣ್ಯದ ಕೆಲಸ ಎಂದು ಕಂಡು ಬಂದ ಹಿನ್ನಲೆಯಲ್ಲಿ ತಾವೇ ಸ್ವತಃ 5 ಲಕ್ಷ ರೂ. ಹಣ ಈ ಕಾರ್ಯಕ್ಕೆ ವಿನಿಯೋಗಿಸಿದ್ದಾಗಿ ತಿಳಿಸಿದರು.

ತಾಲೂಕಿನ ಯಡೂರು ಸಮೀಪದ ಸುಳಗೋಡಿನಲ್ಲಿ ಕಾರ್ಮಿಕ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರಿಗೆ ಉಚಿತ ಕಿಟ್ ವಿತರಿಸಿ ಅವರು ಮಾತನಾಡಿದರು.

ಕಾರ್ಮಿಕರು ಎಂದರೆ ಎಲ್ಲಾ ವರ್ಗದವರೂ ಕಟ್ಟಡ ಕಾರ್ಮಿಕರಲ್ಲ. ಈ ಕಿಟ್ ಕೇವಲ ಪ್ಲಂಬರ್, ಗಾರೆ, ಮೇಸ್ತ್ರಿ, ಎಲೆಕ್ಟ್ರಿಶಿಯನ್, ಬಡಗಿ, ಇಟ್ಟಿಗೆ ಹಾಗು ಕಲ್ಲು ಕೆಲಸ ಮಾಡುವ ಕಾರ್ಮಿಕರಿಗೆ ಸರ್ಕಾರ ಉಚಿತವಾಗಿ ನೀಡುತ್ತಿದೆ. ಸರ್ಕಾರದ ಯೋಜನೆಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಮೂಲಕ ಫಲಾನುಭವಿಗಳು ಸಮಾಜದಲ್ಲಿ ಆರ್ಥಿಕ ಸಬಲತೆ ಸಾಧಿಸಬೇಕೆಂದರು.

ಈ ಭಾಗದ ಶಾಶ್ವತ ಕುಡಿಯುವ ನೀರು ಯೋಜನೆಗಾಗಿ 2018-19ರಲ್ಲಿ ಕ್ರಿಯಾ ಯೋಜನೆ ತಯಾರಾಗಿತ್ತು. 2021-2022ರಲ್ಲಿ ಅನುದಾನ ಬಿಡುಗಡೆ ಆಯ್ತು. ಆದರೆ, ಕರೋನ ಹಿನ್ನಲೆಯಲ್ಲಿ ಯೋಜನೆ ಆರಂಭಕ್ಕೆ ವಿಳಂಬವಾಯ್ತು. ಕಾಮಗಾರಿ ಟೆಂಡರ್ ಆಗಿದ್ದು ಸುಮಾರು ರೂ 73 ಲಕ್ಷ ಯೋಜನೆಯ ಕಾಮಗಾರಿಗೆ ಇಂದು ಚಾಲನೆ ದೊರೆತಿದೆ.

ನಾನೇನು ಶಾಸಕನಾಗಿ ಮೇಲಿಂದ ಇಳಿದು ಬರಲಿಲ್ಲ ;

ಕ್ಷೇತ್ರದ ಜನರ ವಿಶ್ವಾಸ, ಆಶಿರ್ವಾದದಿಂದ ನಾನು ಶಾಸಕನಾಗಿದ್ದೇನೆ. ನಾನೇನು ಏಕಾಏಕಿ ಮೇಲಿನಿಂದ ಇಳಿದು ಬಂದು ಶಾಸಕ ಆದವನಲ್ಲ. ನಿಮ್ಮಗಳ ನಡುವೆಯೇ ನಿಂತು ಅನೇಕ ಹೋರಾಟಗಳನು ಮಾಡಿ ವಿಶ್ವಾಸ ಸಂಪಾದಿಸಿ ಐದಾರು ಬಾರಿ ಶಾಸಕನಾದೆ. ಅಲ್ಲದೆ, ನಿಮ್ಮೆಲ್ಲರ ಹಾರೈಕೆಯಿಂದ ಸಚಿವನಾದೆ. ಈ ಬಾರಿ ಶಾಸಕ ಆದಾಗಿನಿಂದ ಜನತೆ ತಮ್ಮ ಗ್ರಾಮದ ಸೇತುವೆ, ಕಾಲುಸಂಕ, ರಸ್ತೆ ದುರಸ್ತಿ ಕುರಿತಂತೆ ನನ್ನನ್ನು ದೂರದೂರದ ಸ್ಥಳಗಳಿಗೆ ಕರೆದು ವಾಸ್ತವ ಸಂಗತಿ ಮನದಟ್ಟು ಮಾಡುತ್ತಿದ್ದಾರೆ. ಶಾಸಕನಾಗಿ ಗಿಣಿಕಲ್ ಸೇತುವೆ, ರಸ್ತೆ , ಮಾಣಿ ಡ್ಯಾಂಗೆ ಸಾಗುವ ಮುಖ್ಯರಸ್ತೆ ನಿರ್ಮಿಸಿದ್ದೇನೆ. ಈ ಹಿಂದೆ ಅನೇಕ ಬಾರಿ ಈ ಭಾಗದಲ್ಲಿ ನಾನು ಡ್ಯಾಂನ ಹಿನ್ನೀರಿನಲ್ಲಿ ತೆಪ್ಪದ ಮೂಲಕ ಪ್ರಯಾಣ ಬೆಳೆಸಿದ್ದೇನೆ. ನನಗೆ ಈ ಭಾಗದ ಜನರ ಬದುಕಿನ ನೋವು ನಲಿವಿನ ಅರಿವಿದೆ. ಯಡೂರು ಹಾಗೂ ಸುಳಗೋಡು ಭಾಗದ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ರೂ. 30 ಕೋಟಿ ಅನುದಾನ ನೀಡಿದ್ದೇನೆ. ಮತದಾರನ ಋಣ ತೀರಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ವಿರೋಧಿಗಳ ಪ್ರಶ್ನೆಗೆ ಉತ್ತರಿಸಲು ಕಾಮಗಾರಿ ಹಾಗೂ ಅಭಿವೃದ್ದಿ ಕುರಿತಂತೆ ಕರಪತ್ರ ಮಾಡಿಸಿ ಹಂಚಿದ್ದೇನೆ. ಈ ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಕ್ಷೇತ್ರದ ವಿವಿಧ ಅಭಿವೃದ್ದಿ ಕಾರ್ಯಗಳಿಗಾಗಿ 3500 ಕೋಟಿ ರೂ. ಅನುದಾನ ತಂದಿದ್ದೇನೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿ ಒಂದುವರೆ ವರ್ಷಗಳಾಗಿದೆ. ಅಭಿವೃದ್ದಿ ಕಾರ್ಯಗಳು ಕುಂಠಿತಗೊಂಡಿದೆ. ಈ ಕುರಿತು ನಾನು ಸರ್ಕಾರದ ಪ್ರಮುಖರ ಗಮನ ಸೆಳೆದರೆ, ಗ್ಯಾರಂಟಿ ಯೋಜನೆಗಳಿಂದ ಜನರು ಖಷಿಯಾಗಿದ್ದಾರೆ. ಅಭಿವೃದ್ದಿ ಕೇಳಲ್ಲ ಬಿಡ್ರಿ ಎಂತ ಕುಂಟು ನೆಪ ಹೇಳ್ತಾರೆ. ಪ್ರಸ್ತುತ ರಾಜ್ಯದಲ್ಲಿರುವುದು ಅಭಿವೃದ್ದಿ ಶೂನ್ಯ ಕಾಂಗ್ರೆಸ್ ಸರ್ಕಾರ ಎಂದು ಲೇವಡಿ ಮಾಡಿದರು.

ರಸ್ತೆ, ಚರಂಡಿ, ಸೇತುವೆ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಬಂಡವಾಳ ವೆಚ್ಚ ವಿನಿಯೋಗಿಸದಿದ್ದರೆ ಮುಂದೆ ನಾಲ್ಕಾರು ವರ್ಷಗಳ ಬಳಿಕ ಬರುವ ನಿರಂತರ ಆದಾಯಕ್ಕೆ ಪೆಟ್ಟು ಬೀಳುತ್ತದೆ. ಈ ಹಿಂದೆ ನಮ್ಮದೇ ಬಿಜೆಪಿಸರ್ಕಾರ ಆಡಳಿತದಲ್ಲಿದ್ದಾಗ ಕ್ಷೇತ್ರಕ್ಕೆ ಯಥೇಚ್ಛ ಅನುದಾನ ತಂದಿದ್ದೆ. ಈಗ ಹೆದರಿಕೆ ಆಗ್ತಿದೆ. ಹೇಗಪ್ಪ ಜನರಿಗೆ ಉತ್ತರಿಸೋದು ಎಂದು. ಹಾಗಾಗಿ ಈ ಭಾಗಗಳೆಲ್ಲಾ ತನ್ನ ಜೀವಂತಿಕೆ ಕಳೆದುಕೊಳ್ಳುತ್ತಿದೆ ಎಂಬ ವಿಷಾದ ವ್ಯಕ್ತಪಡಿಸಿದರು.

ಈ ವೇಳೆ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಬಂಕ್ರಿಬೀಡು ಮಂಜುನಾಥ, ಕಾರ್ಮಿಕ ಇಲಾಖೆ ಅಧಿಕಾರಿ ಶಿಲ್ಪ, ಹಿರಿಯ ಗ್ರಾಮಸ್ಥರಾದ ಯಡೂರು ಭಾಸ್ಕರ ಜೋಯ್ಸ್ ಮೊದಲಾದವರು ಉಪಸ್ಥಿತರಿದ್ದರು.

Leave a Comment